ಮೈಸೂರಿನಲ್ಲಿ ನಿರ್ಮಾಣ ಕಾಮಗಾರಿ ಪುನಾರಂಭ
ಮೈಸೂರು

ಮೈಸೂರಿನಲ್ಲಿ ನಿರ್ಮಾಣ ಕಾಮಗಾರಿ ಪುನಾರಂಭ

May 6, 2020
  • ಬಾಗಿಲು ತೆರೆದ ಹಾರ್ಡ್‍ವೇರ್, ಸಿಮೆಂಟ್ ಮಾರಾಟ ಮಳಿಗೆಗಳು
  • ಮನೆ ಮಾಲೀಕರು, ಮೇಸ್ತ್ರಿಗಳು, ಕಟ್ಟಡ ಕಾರ್ಮಿಕರಲ್ಲಿ ಹರ್ಷ
  •  42 ದಿನಗಳಿಂದ ಜಡ್ಡುಗಟ್ಟಿ ಹೋಗಿದ್ದ ಬದುಕಿಗೆ ಹೊಸ ಹುರುಪು

ಮೈಸೂರು, ಮೇ 5(ಬಿವಿಎಂಸಿ)-ದೇಶಾದ್ಯಂತ ಜನಸಾಮಾನ್ಯರ ಬದುಕನ್ನು ಅವರದೇ ಮನೆಯೊಳಗೆ ಕಟ್ಟಿ ಹಾಕಿದ್ದ `ಲಾಕ್‍ಡೌನ್’ ಕೊನೆಗೂ 3ನೇ ಹಂತದಲ್ಲಿ ತುಸು ಸಡಿಲಾಗಿದೆ. ವಾಹನ ಸಂಚಾರಕ್ಕೆ ಸ್ವಲ್ಪ ಪ್ರಮಾಣದಲ್ಲಿ ಅವಕಾಶವಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರ ಮತ್ತೆ ಆರಂಭವಾಗಿದೆ. ಇದರೊಟ್ಟಿಗೇ ಕಟ್ಟಡ ನಿರ್ಮಾಣ ಕಾಮಗಾರಿಯ ಪುನಾ ರಂಭಕ್ಕೂ ಅವಕಾಶ ಮಾಡಿಕೊಡಲಾಗಿದೆ.

ಅರ್ಧಕ್ಕೆ ಮನೆ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕಾಗಿ ಬಂದಿದ್ದರಿಂದ ಆಘಾತ ಕ್ಕೊಳಗಾಗಿದ್ದ ಮನೆ ಮಾಲೀಕರು, `ಹೋದ ಜೀವ ಬಂದಂತಾಯಿತು’ ಎಂಬ ಭಾವದಲ್ಲಿ ಮನೆ ನಿರ್ಮಾಣ ಕೆಲಸವನ್ನು ಮತ್ತೆ ಆರಂಭಿಸಿ ಉಲ್ಲಸಿತರಾಗಿದ್ದಾರೆ. ಇದರ ಧನಾತ್ಮಕ ಫಲಿ ತಾಂಶವೆಂಬಂತೆ ಸ್ಥಳೀಯ ಗಾರೆ ಕೆಲಸಗಾರ ರಲ್ಲಿ ಕೆಲವರಿಗಾದರೂ (6 ವಾರಗಳ ಬಳಿಕ) ಕೆಲಸ ದೊರಕಿದೆ. ಜತೆಗೇ ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿ ಸಿಮೆಂಟ್, ಹಾರ್ಡ್‍ವೇರ್, ಪೇಂಟ್ಸ್, ನಲ್ಲಿ, ಟೈಲ್ಸ್ ಸಾಮಗ್ರಿಗಳ ಮಾರಾಟದ ಮಳಿಗೆಗಳೂ ದೀರ್ಘ ವಿರಾಮದ ನಂತರ ಬಾಗಿಲು ತೆರೆದಿವೆ.

ಕೆಲಸಗಾರರಲ್ಲಿ ಹರ್ಷ: ನಗರದ ಹಲವೆಡೆ ಸರ್ಕಾರಿ, ಖಾಸಗಿ ಕಟ್ಟಡ ಕಾಮ ಗಾರಿಗಳು ನಿಧಾನವಾಗಿ ಪುನಾರಂಭಗೊಂಡಿವೆ. ಮೈಸೂರು-ಹುಣಸೂರು ರಸ್ತೆಯಲ್ಲಿ ಎಸ್‍ಆರ್‍ಎಸ್ ಸಮೀಪ ವಿಜಯನಗರ ಬಡಾವಣೆಯ 4ನೇ ಹಂತದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ವಿಸ್ತರಣಾ ಕಾಮ ಗಾರಿ ಸೋಮವಾರದಿಂದಲೇ ಪುನಾರಂಭ ಗೊಂಡಿದೆ. ಅಲ್ಲಿ ಕೆಲಸ ಮಾಡುತ್ತಿರುವ ಗಾರೆ ಕೆಲಸದವರಿಗಂತೂ ಇದರಿಂದ ಸಂತಸವಾಗಿದೆ. ಮೈಕ್‍ಗೆ ಗಾರೆ, ಧೂಳು ಮೆತ್ತಿಕೊಂಡಿದ್ದರೂ ಮೊಗದಲ್ಲಿ ನಗೆಯ ಅಲೆ ಎದ್ದಿದೆ. ಲಾಕ್‍ಡೌನ್‍ನಿಂದಾಗಿ ಕಟ್ಟಿಹಾಕಿ ದಂತಾಗಿದ್ದ ಬದುಕು ಮತ್ತೆ ಮೊದಲಿನ ಸ್ಥಿತಿಗೇ ಮರಳಲಿದೆ ಎಂಬ ಸಂಭ್ರಮದಲ್ಲಿ ಕೆಲಸಗಾರರು ಬಲು ಉತ್ಸಾಹದಿಂದಲೇ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಅರ್ಧ, ಮುಕ್ಕಾಲು ಭಾಗದಷ್ಟು ಮನೆ ನಿರ್ಮಾಣ ಕಾಮಗಾರಿ ನಡೆಸಿ ದಿಢೀರ್ ಎಂಬಂತೆ ಕೆಲಸ ನಿಲ್ಲಿಸಬೇಕಾಗಿ ಬಂದಿದ್ದರಿಂದ ನೊಂದುಕೊಂಡಿದ್ದ, ಬಲು ಹತಾಶರಾಗಿದ್ದ ಮನೆ ಮಾಲೀಕರು, ಕಟ್ಟಡ ನಿರ್ಮಾಣ ಗುತ್ತಿಗೆದಾರರು, ಇಂಜಿನಿಯರ್‍ಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ. `ಸದ್ಯ ಈಗಲಾದರೂ ಮನೆ ನಿರ್ಮಾಣ ಪೂರ್ಣಗೊಳಿಸಲು ಅವ ಕಾಶವಾಯಿತಲ್ಲ ಅದೇ ಸಮಾಧಾನ’ ಎನ್ನುತ್ತಿದ್ದಾರೆ. ಕೊರೊನಾ ಭೀತಿ ತಂದಿಟ್ಟ `ಲಾಕ್‍ಡೌನ್’ನ ಪರಿಣಾಮವಾಗಿ ಮನೆ ನಿರ್ಮಾಣ ಕಾಮಗಾರಿಯನ್ನು ಮಾರ್ಚ್ 24ರಿಂದಲೇ ನಿಲ್ಲಿಸಬೇಕಾಗಿ ಬಂದಿತು. ಜತೆಗೆ ಮನೆ ನಿರ್ಮಾಣಕ್ಕೆ ಬೇಕಾಗಿದ್ದ ಕಚ್ಛಾ ಪದಾರ್ಥಗಳ ಪೂರೈಕೆಯೂ ದಿಢೀರ್ ಸ್ಥಗಿತಗೊಂಡಿದ್ದರಿಂದ, ಕಾರ್ಮಿಕರೂ ಮನೆಯೊಳಗೇ ಉಳಿಯಬೇಕಾಗಿ ಬಂದಿದ್ದ ರಿಂದ ಅರ್ಧಕ್ಕೆ ನಿಂತು ಹೋಗಿತ್ತು. ಇದರಿಂದ ಮನಸ್ಸಿಗೆ ಬಹಳ ನೋವಾಗಿತ್ತು. ಮನೆ ನಿರ್ಮಾಣ ಪೂರ್ಣಗೊಳಿಸಲು ಸಾಧ್ಯವಾ ಗುತ್ತೋ ಇಲ್ಲವೋ ಎಂದು ಆತಂಕವಾ ಗಿತ್ತು, ಬಹಳ ನಿರಾಶೆಯಾಗಿತ್ತು. ಸದ್ಯ ಸರ್ಕಾರ ಲಾಕ್‍ಡೌನ್ ನಿಯಮ ಸಡಿಲ ಗೊಳಿಸಿದ್ದರಿಂದ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಮತ್ತೆ ಜೀವ ಬಂದಿದೆ ಎಂದು ನೆಮ್ಮದಿಯ ನೆಟ್ಟುಸಿರು ಬಿಟ್ಟವರು ವೃತ್ತಿ ಯಲ್ಲಿ ವಕೀಲರೂ ಆಗಿರುವ ಶಿವಮೂರ್ತಿ.

ವಿಜಯನಗರದ 4ನೇ ಹಂತದಲ್ಲಿ 30 /40 ಅಡಿ ಉದ್ದಗಲದ ನಿವೇಶದಲ್ಲಿ 2 ಅಂತಸ್ತಿನ ಮನೆ ನಿರ್ಮಿಸುತ್ತಿದ್ದ ಅವರು, ಒಂದನೇ ಮಹಡಿಗೆ ಪ್ಲಾಸ್ಟರಿಂಗ್ ಕೆಲಸ ಮಾಡಿಸುತ್ತಿರುವಾಗಲೇ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕಾಗಿ ಬಂದಿತ್ತು. ಕಾರಣ ಲಾಕ್‍ಡೌನ್.

ಗ್ರಾಹಕರ ನಿರೀಕ್ಷೆಯಲ್ಲಿ: ಹಾರ್ಡ್‍ವೇರ್ ಮಳಿಗೆಗಳೂ, ಸಿಮೆಂಟ್, ಟೈಲ್ಸ್, ಎಲೆಕ್ಟ್ರಿಕಲ್ ಅಂಗಡಿಗಳಿಗೂ ನಿಧಾನವಾಗಿ ವ್ಯಾಪಾರ ಆಗುತ್ತಿದೆ. 40 ದಿನಗಳದ್ದು ನಿಜಕ್ಕೂ ವನ ವಾಸದಂತಿತ್ತು ಎನ್ನುವ ಈ ವರ್ತಕರು, ಈಗ ಹರ್ಷಚಿತ್ತರಾಗಿದ್ದಾರೆ. ಅಂಗಡಿ ಬಾಗಿಲು ತೆರೆದು ಗ್ರಾಹಕರಿಗಾಗಿ ಕಾಯುತ್ತಿ ದ್ದಾರೆ. ಗೂಡ್ಸ್ ಆಟೊಗಳವರೂ ಇನ್ನಾದರೂ ದುಡಿಮೆ ಆರಂಭಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಗ್ರಾಹಕರ, ಅಂಗಡಿ ಮಾಲೀಕರ ಕರೆಯನ್ನೇ ನಿರೀಕ್ಷಿಸುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಖುಷಿಯಿಂದಲೇ ಸಿಮೆಂಟಿಗೆ ಮರಳು, ಜಲ್ಲಿ ಕಲಸುತ್ತಿದ್ದಾರೆ. ಕೈಯಲ್ಲಿ ಕರನೆ ಹಿಡಿದವರು ಇಟ್ಟಿಗೆ, ಗಾರೆ, ಕಾಂಕ್ರೀಟ್ ಜತೆಗೆ ತಮ್ಮ ಬದುಕನ್ನೂ ಮತ್ತೆ ಕಟ್ಟಿಕೊಳ್ಳಲು ಆರಂಭಿಸಿದ್ದಾರೆ. ಲಾಕ್‍ಡೌನ್‍ನಿಂದ ನಲುಗಿ ಹೋಗಿದ್ದ ಜನಸಾಮಾನ್ಯರ ಬದುಕು ನಿಧಾನ ವಾಗಿ ಹೊಸಜೀವ ಪಡೆದುಕೊಳ್ಳುತ್ತಿದೆ. ನೀರ ವತೆಯನ್ನು ಸೀಳಿದಂತೆ ಕಟ್ಟಡ ಕಾಮಗಾರಿಯ ಸದ್ದುಗದ್ದಲ ಮೆಲ್ಲಗೆ ಕೇಳಿಬರಲಾರಂಭಿಸಿದೆ.

Translate »