ಮೈಸೂರು: ಮೈಸೂರು ಕೃಷ್ಣಮೂರ್ತಿಪುರಂನ ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2018-19ನೇ ಸಾಲಿನ `ಸಹಕಾರ ಶ್ರೀ’ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಸ್.ರಾಮಕೃಷ್ಣ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ ವತಿಯಿಂದ ಕೊಡ ಮಾಡುವ ಪ್ರಶಸ್ತಿ ಇದಾಗಿದ್ದು, ರಾಜ್ಯದ ಉತ್ತಮ ಕಾರ್ಯನಿರ್ವಹಣೆಯ ಸಹಕಾರ ಸಂಘಕ್ಕೆ ನೀಡುವ ಈ `ಸಹಕಾರ ಶ್ರೀ’ ಪ್ರಶಸ್ತಿಗೆ ನಮ್ಮ ಸೊಸೈಟಿ ಭಾಜನವಾಗಿದೆ. ಸೆ.8ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಸೊಸೈಟಿಯು 1994ರಲ್ಲಿ ಅಸ್ತಿತ್ವಕ್ಕೆ ಬಂದಿತು. ಬಳಿಕ ಹಂತ ಹಂತವಾಗಿ ಅಭಿವೃದ್ಧಿ ಹೊಂದುವ ಮೂಲಕ ಲಾಭದಾಯಕವಾಗಿ 24 ವರ್ಷಗಳನ್ನು ಪೂರೈಸಿದೆ. ಸದಸ್ಯರಿಗೆ ಉತ್ತಮ ಸಾಲ ಸೌಲಭ್ಯ ಮತ್ತು ಠೇವಣಿ ಯೋಜನೆಗಳನ್ನು ಒದಗಿಸಲಾಗುತ್ತಿದೆ. 2001-02 ಹಾಗೂ 2002-03ನೇ ಸಾಲಿನಲ್ಲಿ ಸಹಕಾರ ಇಲಾಖೆಯ `ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದುವರೆಗೂ ಲೆಕ್ಕಪರಿಶೋಧನಾ ವರದಿಯಲ್ಲಿ `ಎ’ ಶ್ರೇಣಿಯ ವರ್ಗೀಕರಣದಲ್ಲಿ ಸೊಸೈಟಿ ಮುಂದುವರೆಯುತ್ತಿದೆ ಎಂದು ವಿವರಿಸಿ ದರು. ಸೊಸೈಟಿಯ ಮಾಜಿ ಅಧ್ಯಕ್ಷ ಸಿ.ವಿ.ಪಾರ್ಥಸಾರಥಿ, ಉಪಾಧ್ಯಕ್ಷ ಎನ್.ಎಸ್. ಮುರಳಿ, ನಿರ್ದೇಶಕ ಎಂ.ಆರ್.ಬಾಲಕೃಷ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.