ಬಂಡಿಪಾಳ್ಯ ಎಪಿಎಂಸಿ ಪ್ರಾಂಗಣದಲ್ಲಿ ಏಜೆಂಟ್ ಕ್ಯಾಪ್ಸಿಕಮ್ ರವಿ ಬರ್ಬರ ಹತ್ಯೆ
ಮೈಸೂರು

ಬಂಡಿಪಾಳ್ಯ ಎಪಿಎಂಸಿ ಪ್ರಾಂಗಣದಲ್ಲಿ ಏಜೆಂಟ್ ಕ್ಯಾಪ್ಸಿಕಮ್ ರವಿ ಬರ್ಬರ ಹತ್ಯೆ

May 4, 2022

ಮೈಸೂರು,ಮೇ3(ಎಸ್‍ಬಿಡಿ, ಜಿಎ)- ಮೈಸೂರು ಹೊರವಲಯದ, ಚಾಮುಂಡಿಬೆಟ್ಟ ತಪ್ಪಲಲ್ಲಿನ ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿ ಮಂಗಳ ವಾರ ಸಂಜೆ ಏಜೆಂಟ್ ಒಬ್ಬರನ್ನು ದುಷ್ಕರ್ಮಿ ಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಶ್ರೀರಂಗಪಟ್ಟಣ ತಾಲೂಕು ಮಹದೇವ ಪುರದ ಜೋಗಿಗೌಡ ಅವರ ಪುತ್ರ ಎಂ.ಜೆ. ರವಿ ಅಲಿಯಾಸ್ ಕ್ಯಾಪ್ಸಿಕಮ್ ರವಿ (35) ಹತ್ಯೆ ಯಾದವರು. ಹಲವು ವರ್ಷಗಳಿಂದ ಎಪಿಎಂಸಿ ಯಲ್ಲಿ ಹಣ್ಣು ಮತ್ತು ತರಕಾರಿ ಏಜೆಂಟ್ ಆಗಿದ್ದ ಇವರು ಸಮೀಪದ ಹೆಳವರಹುಂಡಿ ಗ್ರಾಮದಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನೆಲೆಸಿ ದ್ದರು. ಎಪಿಎಂಸಿ ಆವರಣದ ತರಕಾರಿ ಮಾರು ಕಟ್ಟೆಯ ತಮ್ಮ ಮಳಿಗೆಯ ಕಚೇರಿಯಲ್ಲಿ ರವಿ ಕುಳಿತಿದ್ದಾಗ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಒಳಗೆ ನುಗ್ಗಿ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದ್ದಾರೆ. ತಲೆ ಹಾಗೂ ಕತ್ತಿನ ಭಾಗಕ್ಕೆ ಮನಸ್ಸೋ ಇಚ್ಛೆ ಕೊಚ್ಚಿದ್ದು, ತಲೆ ಛಿದ್ರವಾಗಿದೆ. ದಾಳಿಗೂ ಮುನ್ನ ಆ ಮಳಿಗೆಯ ನಾಲ್ಕು ಕಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಸದಾ ಜನಜಂಗುಳಿಯಿರುವ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ನಿರ್ಭೀತಿಯಿಂದ ಅಟ್ಟಹಾಸ ಮೆರೆ ದಿದ್ದು, ಜನ, ವ್ಯಾಪಾರಸ್ಥರು ಭಯಭೀತರಾಗಿದ್ದಾರೆ.

ವಿಷಯ ತಿಳಿದು ಎಸ್ಪಿ ಆರ್.ಚೇತನ್, ಎಎಸ್‍ಪಿ ಶಿವಕುಮಾರ್ ಆರ್.ದಂಡಿನ, ದಕ್ಷಿಣ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದರು. ಬಳಿಕ ರವಿ ಮೃತದೇಹವನ್ನು ಮೈಸೂರು ಮೆಡಿ ಕಲ್ ಕಾಲೇಜು ಶವಾಗಾರಕ್ಕೆ ಸಾಗಿಸಿದ್ದು, ಬುಧವಾರ ವೈದ್ಯಕೀಯ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಹೊಂಚು ಹಾಕಿ ಕಚೇರಿಯಲ್ಲಿ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡು ಮಾರ ಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ರವಿ ನೋವಿನಿಂದ ಕಿರುಚುವ ಶಬ್ಧ ಕೇಳಿ ಅವರ ಮಳಿಗೆಯ ಕೆಲಸಗಾರರು, ಅಕ್ಕಪಕ್ಕದ ಮಳಿಗೆಯವರು ಧಾವಿಸಿದ್ದಾರೆ. ಈ ವೇಳೆ ಲಾಂಗ್, ಮಚ್ಚು ತೋರಿಸಿ, ಅವರಿಗೂ ಬೆದರಿಕೆ ಹಾಕಿದ್ದಾರೆ. ಇದರಿಂದ ಸಹಾಯಕ್ಕೆ ಧಾವಿಸಿದವರು ಹಿಂದೆ ಸರಿಯುತ್ತಿದ್ದಂತೆ ಕೊಲೆಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಕ್ಕೆ ವ್ಯವಹಾರಿಕ ಅಥವಾ ಹಳೇ ವೈಷಮ್ಯ ಕಾರಣವಿರಬಹುದು ಎಂದು ಶಂಕಿಸ ಲಾಗಿದೆಯಾದರೂ ನಿಖರ ಕಾರಣ ತನಿಖೆಯಿಂದ ತಿಳಿಯಬೇಕಿದೆ.

ಮೂರು ತಿಂಗಳ ಹಿಂದೆ ಗಲಾಟೆಯೊಂದರಲ್ಲಿ ಗುಂಪೊಂದು ರವಿ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಲು ಯತ್ನಿಸಿತ್ತು. ಘಟನೆ ಬಗ್ಗೆ ರವಿ ಪೊಲೀಸರಿಗೂ ದೂರು ನೀಡಿ ದ್ದರು ಎಂದು ಸ್ಥಳದಲ್ಲಿದ್ದವರು ಮಾತನಾಡಿಕೊಳ್ಳುತ್ತಿದ್ದರು. ಸಾರ್ವಜನಿಕರ ಸುಳಿವಿನ ಮೇರೆಗೆ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ. ಈ ಸಂಬಂಧ ರವಿ ಕುಟುಂಬದವರು ನೀಡಿರುವ ದೂರಿನನ್ವಯ ಓರ್ವ ರೌಡಿಶೀಟರ್ ಸೇರಿದಂತೆ ಮೂವರ ವಿರುದ್ಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯಮ ವರ್ಗ ಕುಟುಂಬದ ರವಿ ಹಲವು ವರ್ಷಗಳ ಹಿಂದೆಯೇ ಜೀವನೋಪಾಯಕ್ಕಾಗಿ ಎಪಿಎಂಸಿ ಸೇರಿದ್ದರು. ಕೂಲಿ ಕೆಲಸದಿಂದ ವ್ಯಾಪಾರದ ಎಲ್ಲಾ ಮಜಲುಗಳ ಬಗ್ಗೆ ಚೆನ್ನಾಗಿ ಅನುಭವ ಹೊಂದಿದ್ದ ರವಿ, ಹಂತಹಂತವಾಗಿ ಬೆಳೆದು ಆರ್ಥಿಕವಾಗಿ ಸ್ಥಿತಿವಂತರಾಗಿ ದ್ದರು. ರವಿಯ ಚಲನವಲನಗಳ ಬಗ್ಗೆ ಚೆನ್ನಾಗಿ ತಿಳಿದವರೇ ಈ ಕೃತ್ಯ ನಡೆಸಿದ್ದಾರೆ ಎನ್ನುವುದು ಸ್ಥಳೀಯರ ಮಾತು. ಆದರೂ ಯಾವ ಕಾರಣಕ್ಕೆ ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ಪೊಲೀಸರ ತನಿಖೆಯಿಂದಲೇ ತಿಳಿಯಬೇಕಿದೆ. ರವಿ, ತಂದೆ-ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಹತ್ಯೆ ನಡೆದ ಸ್ಥಳದಲ್ಲಿ ರವಿ ಕುಟುಂಬದವರು, ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

Translate »