ಕುಸಿಯುತ್ತಿದೆ ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆ
ಮಂಡ್ಯ

ಕುಸಿಯುತ್ತಿದೆ ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆ

May 4, 2022

ಶ್ರೀರಂಗಪಟ್ಟಣ,ಮೇ 3-ಹತ್ತಾರು ಯುದ್ಧಗಳಿಗೆ ರಣಾಂ ಗಣವಾಗಿದ್ದ ಶ್ರೀರಂಗಪಟ್ಟಣದ ಕೋಟೆ ಯಾವುದಕ್ಕೂ ಜಗ್ಗದೆ ಕುಗ್ಗದೇ ಇದ್ದದ್ದು, ಈಗ ನಿರ್ವಹಣೆ ಇಲ್ಲದೆ ಕುಸಿ ಯುವ ದುಸ್ಥಿತಿಗೆ ತಲುಪಿದೆ. ಎರಡು ಮೂರು ದಿನಗಳಿಂದ ಭಾರೀ ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಐತಿಹಾಸಿಕ ಕೋಟೆಯ ಪೂರ್ವ ದ್ವಾರದ ಮಧ್ಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡು ಒಂದು ಭಾಗ ಕುಸಿದಿದೆ. ಇದ ರೊಂದಿಗೆ ಇತಿಹಾಸಕಾರರ ಚಿಂತೆಗೀಡು ಮಾಡಿದೆ.

ದ್ವೀಪ ಪಟ್ಟಣವನ್ನು ಸುತ್ತುವರೆದಿರುವ 6.5 ಕಿಮೀ ಉದ್ದದ ಕೋಟೆ, ಪ್ರತಿ ಮಳೆಗಾಲದಲ್ಲಿ ಅಷ್ಟಿಷ್ಟು ಕುಸಿದು ಬೀಳುತ್ತಿದೆ. ಅಳಿದುಳಿದ ಕೋಟೆ ಮತ್ತು ಬುರುಜುಗಳ ಮೇಲೆ ಮರಗಳು ಬೆಳೆದು, ತಳಗುಂಟ ಬೇರು ಬಿಟ್ಟು ಅಭೇದ್ಯ ಕೋಟೆಯನ್ನೇ ಜಗ್ಗಿ ಸುತ್ತಿವೆ. ಕೋಟೆಯ ಮಧ್ಯದ ಕಂದಕದ ಅಲ್ಲಲ್ಲಿ ಮಲೀನ ನೀರು ಮಡುಗಟ್ಟಿದ್ದು, ಶೀತ ಹೆಚ್ಚಾಗಿ ಕೋಟೆಯ ತಳಪಾಯವನ್ನು ಶಿಥಿಲಗೊಳಿಸುತ್ತಿದೆ. ಪುರಸಭೆ ಕಚೇರಿಯ ಹಿಂದೆ ಮತ್ತು ಆನೆ ಕೋಟೆ ದ್ವಾರದ ಬಳಿ ವರ್ಷದ ಹಿಂದೆ ಕುಸಿದ ಕೋಟೆಯ ಭಾಗ ದುರಸ್ತಿಯಾಗಿದ್ದರೂ ನಿರ್ವಹಣೆ ಇಲ್ಲದೆ ಅಂದಗೆಟ್ಟಿದೆ.

ಭಾರತದ ಅತ್ಯಂತ ಸದೃಢ ಮತ್ತು 15ನೇ ಶತಮಾನದಲ್ಲೇ ಮಿಲಿಟರಿ ತಂತ್ರಜ್ಞಾನವನ್ನು ಬಳಸಿ ಕಟ್ಟಿದ ಭಾರತದ 2ನೇ ಕೋಟೆ ಶ್ರೀರಂಗಪಟ್ಟಣ ಮಹಾಕೋಟೆ. ಇಂತಹ ಇತಿಹಾಸ ಪ್ರಸಿದ್ಧ ಕೋಟೆ ಇಂದು ರಾಜಕೀಯ ನಾಯಕರ ಹಾಗೂ ಚಲನಚಿತ್ರಗಳ ಪ್ಲೆಕ್ಸ್ ಹಾಗೂ ಬ್ಯಾನರ್‍ಗಳ ಹಾವಳಿಯಿಂದ ಅದರ ಸಂಪೂರ್ಣ ಚಿತ್ರಣವೇ ಬದ ಲಾಗಿ ಹೋಗಿದೆ. ಇದರ ಜೊತೆಗೆ ಕೋಟೆಯ ಎದುರು ಇರುವ ಎರಡು ಕುದುರೆ ಹಾಗೂ ಸೈನಿಕರ ಮನೆಗಳು ಈಗ ಮೀನು ಮತ್ತು ಸೀಗಡಿ ಮಾರುವ ಅನಧಿಕೃತ ಮಳಿಗೆಗಳಾಗಿ ಪರಿವರ್ತನೆ ಆಗಿರು ವುದು ಆಡಳಿತ ವ್ಯವಸ್ಥೆ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ. ಐದು ರಾಜಮನೆತನಗಳು ಆಳಿರುವ ಈ ಕೋಟೆಯು ಸುಮಾರು ಆರು ಕಿ.ಮೀ. ಸುತ್ತಳತೆ ಹೊಂದಿದೆ. ಕೋಟೆಯ ಸುತ್ತ ನಾಡಿನ ಜೀವನದಿ ಕಾವೇರಿಯು ಹರಿಯುತ್ತ ಒಂದು ಜಲದುರ್ಗವನ್ನೇ ನಿರ್ಮಿಸಿದೆ.

ಪ್ರಕೃತಿಯೇ ಪ್ರಥಮ ಕಾವಲುಗಾರನಂತೆ ಕೊಟೆಯನ್ನು ರಕ್ಷಿಸಲು ಟೊಂಕಕಟ್ಟಿ ನಿಂತಿ ರುವುದು ಅಂದಿನ ಕಾಲದಲ್ಲೇ ಬ್ರಿಟಿಷ್ ಅಧಿಕಾರಿಗಳನ್ನು ವಿಸ್ಮಯಗೊಳಿಸಿತಂತೆ. ಆದರೆ ಇಂದು ಕೋಟೆಯ ಪೂರ್ವ ದ್ವಾರದ ಬಲ ಭಾಗದ ಕಂದಕದಲ್ಲಿ ಆಳುದ್ಧ ಕೊಳಚೆ ನೀರು ನಿಂತಿದೆ. ಕಾವೇರಿ ಬಡಾವಣೆಗೆ ತೆರಳುವ ಮಾರ್ಗದ ಪಕ್ಕದ ಕಂದಕದಲ್ಲೂ 10 ಅಡಿ ಗಳಿಗಿಂತಲೂ ಹೆಚ್ಚು ಕೊಳಚೆ ನೀರು ತುಂಬಿ ಕೊಂಡಿದೆ. ಪುರಸಭೆ ಕಚೇರಿ ಹಿಂದಿನ ಕಂದಕದಲ್ಲ್ಲೂ ಕಲುಷಿತ ನೀರು ಮಡುಗಟ್ಟಿದೆ. ಇದರಿಂದ ಕಂದಕ ಕೊಳಚೆ ಗುಂಡಿಯಾಗಿ ಮಾರ್ಪಾಡಾಗಿದೆ. ನೀರಿನ ಜತೆಗೆ ತ್ಯಾಜ್ಯವೂ ಸೇರಿಕೊಂಡು ಕೊಳೆಯುತ್ತಿರುವುದರಿಂದ ಕಂದಕದಿಂದ ಗಬ್ಬು ವಾಸನೆ ಹರಡುತ್ತಿದೆ. ಕಂದಕದ ಪಕ್ಕದಲ್ಲಿ ವಾಸಿಸುವವರು, ಸುತ್ತಮುತ್ತ ಹಾಗೂ ಓಡಾಡುವವರು ಮೂಗು ಮುಚ್ಚಿ ಓಡಾಡುವ ಸ್ಥಿತಿ ಬಂದಿದೆ. ಕೋಟೆಗೆ ಹೊಂದಿಕೊಂಡಿರುವ ಕಂದಕದಲ್ಲಿ ಕಾಲುವೆಯಂತೆ ನೀರು ನಿಂತಿರುವುದರಿಂದ ಮೂರು ಶತಮಾನದಷ್ಟು ಹಳೆಯದಾದ ಕೋಟೆಯ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ.

ಪಟ್ಟಣದ ಈ ಐತಿಹಾಸಿಕ ಕೋಟೆಯನ್ನು ನೋಡಲೆಂದೇ ದೇಶ-ವಿದೇಶಗಳಿಂದ ನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಸಾವಿರಾರು ರೂ. ಗಳನ್ನು ವ್ಯಯಿಸಿ ಇಲ್ಲಿಗೆ ಬರುತ್ತಾರೆ. ಹಾಗೆ ಬಂದವರಿಗೆ ಆಳೆತ್ತರದ ಗಿಡಗಂಟಿಗಳು, ಕುಸಿದು ಬಿದ್ದಿರುವ ಕೋಟೆ ಹಾಗೂ ಕೊಳೆತು ನಾರುತ್ತಿರುವ ಕಂದಕಗಳು ಸ್ವಾಗತಿಸುತ್ತವೆ. ಅಲ್ಲದೆ ಪಟ್ಟಣದ 2 ಪ್ರಮುಖ ಐತಿಹಾಸಿಕ ಸೆರೆಮನೆಗಳ ಪೈಕಿ ಥಾಮಸ್ ಇನ್‍ಮಾನ್ಸ್‍ಡಂಜನ್ (ಸೆರೆಮನೆ) ಎಲ್ಲಿದೆ ಎಂಬುದು ಪಕ್ಕದ ಬೀದಿಯವರಿಗೂ ಗೊತ್ತಿಲ್ಲದ ಮಟ್ಟಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಿಕ್ಕೋಟೆಯ ಆಚೆ ದಡದಲ್ಲಿರುವ ಈ ಸೆರೆಮನೆ ನೋಡಲು ಹೋಗುವವರಿಗೆ ದಾರಿಯೂ ಇಲ್ಲ. ಕಂದಕದ ಒಳಗಿನ ಮುಳ್ಳಿನ ಪೊದೆಗಳು ಹಾಗೂ ಕೊಳಚೆ ನೀರನ್ನು ದಾಟಿ ಈ ಸೆರೆಮನೆಗೆ ಹೋಗುವುದೇ ಹರಸಾಹಸವಾಗಿದೆ. ಟಿಪ್ಪು ಸುಲ್ತಾನ್ ಕಾಲದ ಐತಿಹಾಸಿಕ ಶಸ್ತ್ರಗಾರಗಳಿಗೆ ಕಾಯಕಲ್ಪ ನೀಡುವ ಕೆಲಸ ನಡೆಯುತ್ತಿದ್ದರೂ ನಿರ್ವಹಣೆ ಮರೀಚಿಕೆಯಾಗಿದೆ. ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ, ರೈಲು ನಿಲ್ದಾಣದ ಬಳಿಯ ಶಸ್ತ್ರಾಗಾರವನ್ನು 13 ಕೋಟಿ ಭಾರೀ ವೆಚ್ಚದಲ್ಲಿ ಸ್ಥಳಾಂತರಿಸಲಾಗಿದೆ. ನಂತರದ ದಿನಗಳಲ್ಲಿ ಪ್ರಾಚ್ಯವಸ್ತು ಇಲಾಖೆ ಈ ಸ್ಮಾರಕದ ಬಗ್ಗೆ ನಿರಾಸಕ್ತಿ ತಾಳಿದ್ದು, ಸ್ಮಾರಕದ ಸುತ್ತಲೂ ಗಿಡಗಂಟೆಗಳು ಬೆಳೆದಿವೆ. ರಕ್ಷಣಾ ಬೇಲಿ ಬಟ್ಟೆ ಒಣಗಿಸಲು ಬಳಕೆಯಾಗುತ್ತಿದೆ.

ಗ್ಯಾರಿಸನ್ ಆಸ್ಪತ್ರೆ: ಪಟ್ಟಣದ ಒಬೆಲಿಸ್ಕ್ ಸ್ಮಾರಕದ ಬಲಕ್ಕಿರುವ ಗ್ಯಾರಿಸನ್ ಹಾಸ್ಪಿಟಲ್ (ಸೈನಿಕರ ಆಸ್ಪತ್ರೆ) ಸ್ಮಾರಕ ಹಾಳು ಕೊಂಪೆಯಾಗಿದೆ. ಜಾಮಿಯಾ ಮಸೀದಿ ಒಳಗಿರುವ ಕೊಳದಲ್ಲಿ ನೀರು ಪಾಚಿಕಟ್ಟಿ ಗಬ್ಬು ನಾರುತ್ತಿದೆ. ಸಾಯಿಬಾಬಾ ಆಶ್ರಮದ ಎದುರಿನ ಯೂರೋಪಿಯನ್ನರ ಸಮಾಧಿ ಸ್ಥಳ ಗ್ಯಾರಿಸನ್ ಸೆಮಿಟರಿಗೆ ದಾರಿಯೇ ಇಲ್ಲ. ಚಂದ ಗಾಲು ರಸ್ತೆಯಲ್ಲಿರುವ ಗುಲಾಂ ಅಲಿಖಾನ್ ಗುಂಬ್ಬಿ ಹೆಸರಿನ ಬೃಹತ್ ಸ್ಮಾರಕದ ಒಂದೊಂದೇ ಭಾಗ ಕುಸಿಯುತ್ತಿವೆ. ‘ಚತುರ್ವೇದಿ ಮಂಗಲಂ’ ಎಂದೇ ಹೆಸರಾಗಿದ್ದ ತಾಲೂ ಕಿನ ಬೆಳಗೊಳ ಗ್ರಾಮದ ಚೋಳರ ಕಾಲದ ಮೂರು ದೇಗುಲಗಳ ಜೀರ್ಣೋದ್ಧಾರಕ್ಕೆ ದಶಕದ ಹಿಂದೆಯೇ ಚಾಲನೆ ನೀಡಿ, ರಾಜ್ಯ ಪ್ರಾಚ್ಯವಸ್ತು ಇಲಾಖೆ ಸುಮಾರು 30 ಲಕ್ಷ ವೆಚ್ಚದಲ್ಲಿ ಕಾಯಕಲ್ಪ ಕಾರ್ಯ ಕೈಗೆತ್ತಿಕೊಂಡಿತ್ತು. ಆದರೆ ಆ ಕಾರ್ಯ ಅರ್ಧಕ್ಕೇ ನಿಂತಿದೆ. ತಾಲೂಕಿನ ಕೊಡಿಯಾಲ, ಬನ್ನಹಳ್ಳಿ, ಅಲಗೂಡು ಗ್ರಾಮಗಳಲ್ಲಿರುವ ಐತಿಹಾಸಿಕ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ.

Translate »