ನಾಯಕತ್ವ ಬದಲಾವಣೆ ಬದಲು  ಸಂಪುಟ ಸರ್ಜರಿಗೆ ನಿರ್ಧಾರ
News

ನಾಯಕತ್ವ ಬದಲಾವಣೆ ಬದಲು ಸಂಪುಟ ಸರ್ಜರಿಗೆ ನಿರ್ಧಾರ

May 4, 2022

ಬೆಂಗಳೂರು,ಮೇ3-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವ ಬದಲಾವಣೆಯ ಪ್ರಸ್ತಾಪ ವನ್ನು ಕೈಬಿಟ್ಟಿರುವ ಕೇಂದ್ರದ ಬಿಜೆಪಿ ವರಿಷ್ಠರು, ಸಂಪುಟ ಪುನರ್ರಚನೆ ಮೂಲಕ ಇನ್ನುಳಿದ ಒಂದು ವರ್ಷ ಉತ್ತಮ ಆಡಳಿತ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪು ಟಕ್ಕೆ ಯುವ ಪಡೆ ಸೇರ್ಪಡೆ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶವನ್ನು ವರಿಷ್ಠರು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯಕ್ಕೆ ಮುಖ್ಯಮಂತ್ರಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ರಾಜ್ಯ ಪ್ರವಾಸ ಕೈಗೊಂಡಿದ್ದ ಗೃಹ ಸಚಿವ ಅಮಿತ್ ಷಾ, ಇಂದು ರಾಜ್ಯ ಪ್ರಮುಖ ನಾಯಕರೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಭೆಯನ್ನು ರದ್ದುಗೊಳಿ ಸುವ ಮೂಲಕ ನಾಯಕತ್ವದ ಬದಲಾವಣೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದ್ದ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೇ, ರಾಜಕೀಯವಾಗಿ ಯಾವುದೇ ಚರ್ಚೆ ನಡೆಸದೇ ದೆಹಲಿಗೆ ವಾಪಸ್ಸಾಗಿದ್ದಾರೆ. ತಾವು ಉಳಿದುಕೊಂಡಿದ್ದ ಖಾಸಗಿ ಹೋಟೆಲ್‍ನಲ್ಲಿ ಇಂದು ಮುಂಜಾನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅಮಿತ್ ಷಾ ಚರ್ಚೆ ನಡೆಸಿದ್ದಾರೆ. ಆದರೆ, ಯಾವುದೇ ವಿವರ ಬಹಿರಂಗಗೊಂಡಿಲ್ಲ. ಇದಾದ ನಂತರ ಅದೇ ಹೋಟೆಲ್‍ನಲ್ಲಿ ಕರೆದಿದ್ದ ರಾಜ್ಯದ ಪ್ರಮುಖ ಮುಖಂಡರ ಸಭೆಯನ್ನು ರದ್ದು ಮಾಡಿದರು. ಇದು ಪಕ್ಷದ ವಲಯಗಳಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಸಭೆಯಲ್ಲಿ ನಾಯಕತ್ವವೂ ಸೇರಿದಂತೆ ಮಹತ್ವದ ರಾಜಕೀಯ ವಿಚಾರಗಳನ್ನು ಚರ್ಚಿಸುವ ಉದ್ದೇಶವನ್ನು ಹೊಂದಿದ್ದರು ಎಂದು ಹೇಳಲಾಗಿದೆ.

ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ, ನೃಪತುಂಗ ಏಕೀಕೃತ ವಿಶ್ವವಿದ್ಯಾನಿಲಯ ಉದ್ಘಾಟಿಸಿದ ನಂತರ ಮುಖ್ಯಮಂತ್ರಿಗಳ ನಿವಾಸದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಅಮಿತ್ ಷಾ ಅವರು ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡಿ, ನೀವೆಲ್ಲಾ ಮುಂಬರುವ ಚುನಾವಣೆಗೆ ಸಿದ್ಧರಾಗಿ ಎಂದು ಕಿವಿಮಾತು ಹೇಳಿದರು. ನಂತರ ಅಲ್ಲಿಂದ ನೇರವಾಗಿ ಅನಾರೋಗ್ಯ ದಿಂದ ಬಳಲುತ್ತಿರುವ ತಮ್ಮ ಸ್ನೇಹಿತ ಹಾಗೂ ಆರ್‍ಎಸ್‍ಎಸ್ ಹಿರಿಯ ಮುಖಂಡರೂ ಆದ ಜಿಂದಾಲ್ ಸಂಸ್ಥಾಪಕ ಸೀತಾರಾಂ ಜಿಂದಾಲ್ ಅವರ ಆರೋಗ್ಯ ವಿಚಾರಿಸಲು ತುಮಕೂರು ರಸ್ತೆಯ ಜಿಂದಾಲ್‍ನಗರಕ್ಕೆ ತೆರಳಿದ್ದರು. ಅಲ್ಲಿ ಸಾಕಷ್ಟು ಸಮಯ ಕಳೆದ ನಂತರ, ಅಲ್ಲಿಂದಲೇ ನೇರವಾಗಿ ಖೇಲೋ ಇಂಡಿಯಾ ಸಮಾರೋಪ ಸಮಾರಂಭಕ್ಕೆ ತೆರಳಿ, ಅಲ್ಲಿಂದ ತಾವು ಉಳಿದುಕೊಂಡಿದ್ದ ಹೋಟೆಲ್‍ಗೆ ಬಂದು ತದನಂತರ ಹೆಚ್‍ಎಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.

ಅಮೀತ್ ಷಾ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಚರ್ಚೆ ಆರಂಭವಾಗಿತ್ತು. ಇತ್ತ ಆಡಳಿತ ಪಕ್ಷದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ದ್ವಂದ್ವ ನಿಲುವು ವ್ಯಕ್ತವಾಗಿತ್ತು. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಅಂತಹದ್ದೇ ಬಾಂಬ್ ಸಿಡಿಸಿದ್ದರು. ಪ್ರಧಾನಿ ಮೋದಿ ರಾಜ್ಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಮೇ 10ರೊಳಗೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದರು.
ಪ್ರಧಾನಿ ಮೋದಿ ವಿದೇಶದಿಂದ ವಾಪಸ್ಸಾದ ನಂತರ ಕರ್ನಾಟಕದ ನಾಯಕತ್ವದ ಸಂಬಂಧ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಮಾಧ್ಯಮಗಳ ವರದಿ ಕೂಡ ಸಾಕಷ್ಟು ಕುತೂಹಲ ಕೆರಳಿಸಿತ್ತು. ಯತ್ನಾಳ್ ಅವರ ಹೇಳಿಕೆ ಬೆನ್ನ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕಂದಾಯ ಸಚಿವ ಆರ್. ಅಶೋಕ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವ ಬದಲಾವಣೆ ಇಲ್ಲ. ಅವರ ನೇತೃತ್ವದಲ್ಲೇ ಮುಂಬರುವ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿಕೆ ನೀಡಿದರೆ, ಯಡಿಯೂರಪ್ಪ ಒಂದು ಹೆಜ್ಜೆ ಮುಂದೆ ಹೋಗಿ ಇನ್ನೆರಡ್ಮೂರು ದಿನದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಹೇಳಿಕೆ ನೀಡುತ್ತಿದ್ದವರಿಗೆ ತಿರುಗೇಟು ನೀಡುತ್ತಿದ್ದರು.
ರಾಜ್ಯದ ಬಹುತೇಕ ಹಿರಿಯ ನಾಯಕರು ಹಾಗೂ ಆರ್‍ಎಸ್‍ಎಸ್ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆಗೆ ಸಮ್ಮತಿಸಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ, ಇನ್ನು ಒಂದು ವರ್ಷ ಬಾಕಿ ಇರುವ ವಿಧಾನಸಭಾ ಚುನಾವಣೆಯ ಸಿದ್ಧತೆ ನಡುವೆ ನಾಯಕತ್ವ ಬದಲಾವಣೆಗೆ ಕೈ ಹಾಕಿದರೆ ತಾವಾಗಿಯೇ ಗೊಂದಲಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಅದರ ಬದಲು ಮುಖ್ಯಮಂತ್ರಿಗಳ ಸಂಪುಟಕ್ಕೆ ಯುವ ಪಡೆಯನ್ನು ಸೇರ್ಪಡೆ ಮಾಡುವ ಮೂಲಕ ಆಡಳಿತವನ್ನು ಚುರುಕುಗೊಳಿಸಿ, ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಿ ಜನರ ವಿಶ್ವಾಸ ಗಳಿಸುವ ಮೂಲಕ ಚುನಾವಣೆ ಎದುರಿಸಿದರೆ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಕಿವಿಮಾತಿಗೆ ಓಗೊಟ್ಟಿರುವ ಕೇಂದ್ರ ವರಿಷ್ಠರು, ಬೊಮ್ಮಾಯಿ ನಾಯಕತ್ವವನ್ನು ಬದಲಾವಣೆ ಮಾಡದಿರಲು ನಿರ್ಧರಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಈ ಮಧ್ಯೆ ಪ್ರಧಾನಿ ಮೋದಿ ವಿದೇಶಿ ಪ್ರವಾಸದಿಂದ ವಾಪಸ್ಸಾದ ನಂತರ ಮತ್ತೊಮ್ಮೆ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿ, ಮುಂದಿನ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಕೂಡ ಹೇಳಲಾಗುತ್ತಿದೆ.

Translate »