ಮೈಸೂರು,ಮೇ 3(ಆರ್‍ಕೆ)-ಎರಡು ವರ್ಷ ಗಳ ನಂತರ ಮೈಸೂರಲ್ಲಿ ಮುಸ್ಲಿಂ ಬಾಂಧವರು ಸಂಭ್ರಮ ಹಾಗೂ ಭಕ್ತಿ ಭಾವದಿಂದ ಮಂಗಳ ವಾರ ರಂಜಾನ್ ಹಬ್ಬವನ್ನು ಆಚರಿಸಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತರ ನಿರ್ಬಂಧವಿದ್ದ ಕಾರಣ ಎರಡು ವರ್ಷ ಮುಕ್ತವಾಗಿ ಹಬ್ಬ ಆಚರಿಸದ ಮುಸ್ಲಿ ಮರು, ಇಂದು ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಿಸಿ ಸಡಗರದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೈಸೂರಿನ ತಿಲಕ್‍ನಗರದ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮಂದಿ ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಐಕ್ಯತೆ, ಸಹಬಾಳ್ವೆ, ಸಹೋದ ರತ್ವ, ಸಮಾನತೆ, ಶಾಂತಿ,
ಕೋಮು ಸೌಹಾರ್ದಕ್ಕಾಗಿ ಪ್ರಾರ್ಥಿಸಿದರು. ಮೈಸೂರು ಪ್ರಾಂತ್ಯದ ಧರ್ಮಗುರು ಸರ್ ಖಾಜಿ ಮೌಲಾನಾ ಮಹಮದ್ ಉಸ್ಮಾನ್ ಷರೀಫ್ ಅವರು ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ, ರಂಜಾನ್ ಸಂದೇಶ ನೀಡಿದರು. ಕೊರೊನಾದಿಂದಾಗಿ ಕಳೆದ 2 ವರ್ಷ ರಂಜಾನ್ ಹಬ್ಬ ಆಚರಿಸಿರಲಿಲ್ಲ. ಎಲ್ಲಾ ಈದ್ಗಾ ಮೈದಾನಗಳು ಬಿಕೋ ಎನ್ನುತ್ತಿದ್ದವು. ದೇವರ ಕೃಪೆಯಿಂದಾಗಿ ಈ ವರ್ಷ ಪರಿಸ್ಥಿತಿ ತಿಳಿಯಾಗಿದ್ದು, ಹಬ್ಬ ಆಚರಿಸುವ ಅವಕಾಶ ಲಭಿಸಿರುವುದಕ್ಕೆ ನಾವು ಆ ದೇವರಿಗೆ ಕೃತಜ್ಞರಾಗಿರಬೇಕು ಎಂದು ನುಡಿದರು.
ಮುಂದೆಂದೂ ಕೊರೊನಾದಂತಹ ಮಹಾಮಾರಿ ಸೋಂಕು ಹರಡÀದಿರಲಿ, ಎಲ್ಲಾ ವರ್ಷವೂ ಶ್ರದ್ಧಾ ಭಕ್ತಿಗಳಿಂದ ರಂಜಾನ್ ಸೇರಿದಂತೆ ಎಲ್ಲಾ ಹಬ್ಬಗಳನ್ನು ಆಚರಿಸು ವಂತಾಗಲಿ ಎಂದು ಪ್ರಾರ್ಥಿಸಿದ ಮೌಲಾನಾ ಮಹಮದ್ ಉಸ್ಮಾನ್ ಷರೀಫ್, 30 ದಿನಗಳ ಉಪವಾಸ ಪೂರ್ಣಗೊಂಡಿರುವುದರಿಂದ ಎಲ್ಲರೂ ಬಡವರು, ಅಗತ್ಯ ವುಳ್ಳವರಿಗೆ ಜಾತಿ, ಧರ್ಮ ಹೀಗೆ ಭೇದ ಮರೆತು ಸಹಾಯ ಮಾಡುವ ಮೂಲಕ ರಂಜಾನ್ ಹಬ್ಬವನ್ನು ಅರ್ಥಪೂರ್ಣಗೊಳಿಸಿ. ಬಡವರೂ ಸಹ ನೆಮ್ಮದಿಯಿಂದ ಹಬ್ಬ ಆಚರಿಸುವಂತೆ ಮಾಡಿ ಎಂದರು. ಕೋಮು ಸೌಹಾರ್ದ, ಸಹೋದರತ್ವ, ಸಹಬಾಳ್ವೆ, ದೇಶದ ಸಮಗ್ರತೆ, ಐಕ್ಯತೆಯನ್ನು ಸಾರುವ ಮೂಲಕ ಸಮಾಜದಲ್ಲಿ ಶಾಂತಿ, ಪ್ರೀತಿ ನೆಲೆಸುವಂತೆ ಮಾಡೋಣ, ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಭೇದ ಭಾವ ಮರೆತು ಒಟ್ಟಾಗಿ ಶಾಂತಿ ಯಿಂದ ಬದುಕೋಣ ಎಂದು ಉಸ್ಮಾನ್ ಷರೀಫ್ ಅವರು ಇದೇ ವೇಳೆ ನುಡಿದರು.
ಎಸ್‍ಜೆಸಿಇ ನಿವೃತ್ತ ಡೀನ್ ಡಾ.ಶಕೀಬ್ ಉರ್ ರೆಹಮಾನ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಹಂಗಾಮಿ ಉಪ ಮೇಯರ್ ಅನ್ವರ್ ಬೇಗ್ ಅಫ್ತಾಬ್, ಮುಸ್ಲಿಂ ಕೋ-ಆಪರೇಟಿವ್ ಬ್ಯಾಂಕ್‍ನ ಡಾ. ಅಬ್ದುಲ್ ರವೂಫ್, ಜಮೀಲ್ ಅಹ್ಮದ್ ಅಶ್ರಫಿ, ಮೌಲಾನಾ ಅಬ್ದುಲ್ ಸಲಾಂ, ಖಾದ್ರಿ, ಗಯಾಸ್ ಅಹಮದ್, ಅಪ್ಸರ್‍ಪಾಷಾ, ಮೊಹಮದ್ ಮುಮ್ತಾಜ್ ಅಹಮದ್, ಶೌಕತ್ ಪಾಷ, ಸುಹೇಲ್ ಬೇಗ್ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.