ಆರೋಗ್ಯ ಇಲಾಖೆಗೆ ಅಗತ್ಯ ಸಿಬ್ಬಂದಿ ನಿಯೋಜನೆಗೆ ಎಐಡಿವೈಓ ಆಗ್ರಹ
ಮೈಸೂರು

ಆರೋಗ್ಯ ಇಲಾಖೆಗೆ ಅಗತ್ಯ ಸಿಬ್ಬಂದಿ ನಿಯೋಜನೆಗೆ ಎಐಡಿವೈಓ ಆಗ್ರಹ

August 25, 2020

ಮೈಸೂರು, ಆ.24(ಎಸ್‍ಬಿಡಿ)- ಅನಿರೀಕ್ಷಿತ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯದಷ್ಟು ವೈದ್ಯರು ಹಾಗೂ ಆರೋಗ್ಯ ಸಹಾಯಕರನ್ನು ನಿಯೋಜಿಸುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಓ) ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ನಂಜನಗೂಡಿನ ತಾಲೂಕು ವೈದ್ಯಾಧಿಕಾರಿ ಯಾಗಿದ್ದ ಡಾ.ನಾಗೇಂದ್ರ ಅವರು ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ, ರಾಜ್ಯದ ಆರೋಗ್ಯ ವ್ಯವಸ್ಥೆಯ ವಿರೂಪತೆಗೆ ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ 130 ಅನುಮೋದಿತ ವೈದ್ಯ ಹುದ್ದೆಗಳಿದ್ದು, ಕೇವಲ 90 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ಇತರ ಹುದ್ದೆಗಳು ಖಾಲಿ ಇವೆ. ಪರಿಣಾಮ ಉದ್ಯೋಗಿಗಳಿಗೆ ಕಾರ್ಯ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದರು.

ಸದ್ಯ ಎಲ್ಲಾ ಸಿಬ್ಬಂದಿಯನ್ನು ಕೊರೊನಾ ನಿಯಂತ್ರಣ ಸಂಬಂಧಿತ ಕಾರ್ಯಕ್ಕೆ ನಿಯೋ ಜಿಸಿರುವುದರಿಂದ ಯಾವ ಆಸ್ಪತ್ರೆಯಲ್ಲೂ ಇತರೆ ಆರೋಗ್ಯ ಸಮಸ್ಯೆ ಇರುವವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಜನರ ಪರಿಸ್ಥಿತಿ ಇನ್ನೂ ದುಸ್ತರವಾಗಿದೆ. ತುರ್ತು ಚಿಕಿತ್ಸೆ ಮರೀಚಿಕೆಯಂತಾಗಿದ್ದು, ಜನ ಕಂಗಾಲಾಗಿದ್ದಾರೆ. ಕೊರೊನಾ ಸೋಂಕು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ವೈದ್ಯರು, ಆರೋಗ್ಯ ಸಹಾಯಕರನ್ನು ಹೆಚ್ಚುವರಿ ಯಾಗಿ ನಿಯೋಜಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಮನವಿ ಮಾಡಿದರು.

ಉತ್ತಮ ಆರೋಗ್ಯ ಸೇವೆ ಸಾರ್ವಜನಿಕರ ಮೂಲಭೂತ ಹಕ್ಕು. ಆರೋಗ್ಯ ಸೇವೆಯಲ್ಲಿ ರುವ ನ್ಯೂನತೆ, ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಆರೋಗ್ಯವಂತ ಇಲಾಖೆಯನ್ನಾಗಿ ಪುನಶ್ಚೇತನಗೊಳಿಸಬೇಕು. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಸಿಬ್ಬಂದಿ ಸೇವೆಯನ್ನು ಖಾಯಂ ಗೊಳಿಸಬೇಕು. ಸಮರ್ಪಕ ಅನುಪಾತದ ಆಧಾರದಲ್ಲಿ ಅವಶ್ಯಕ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಆರೋಗ್ಯ ಸಹಾಯಕರು ಮತ್ತು ವೈದ್ಯರನ್ನು ಸೇವೆಗೆ ನಿಯೋಜಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಎಐಡಿವೈಓ ಜಿಲ್ಲಾಧ್ಯಕ್ಷ ಹರೀಶ್, ಕಾರ್ಯದರ್ಶಿ ಟಿ.ಆರ್. ಸುನಿಲ್, ಸಮಿತಿ ಸದಸ್ಯರಾದ ಕಲಾವತಿ, ಅನಿಲ್ ಮತ್ತಿತರರು ಹಾಜರಿದ್ದರು.

 

Translate »