ಲಾಕ್‍ಡೌನ್ ವೇಳೆ ತೆಲಂಗಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿ ಕರೆತಂದು ಮೈಸೂರಿನಲ್ಲಿರುವ ತಾಯಿಗೆ ಒಪ್ಪಿಸಿದ ಏರ್ ಅಲಯನ್ಸ್
ಮೈಸೂರು

ಲಾಕ್‍ಡೌನ್ ವೇಳೆ ತೆಲಂಗಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿ ಕರೆತಂದು ಮೈಸೂರಿನಲ್ಲಿರುವ ತಾಯಿಗೆ ಒಪ್ಪಿಸಿದ ಏರ್ ಅಲಯನ್ಸ್

June 14, 2020

ಮೈಸೂರು,ಜೂ.13(ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ 3 ತಿಂಗಳಿಂದ ತೆಲಂಗಾಣದಲ್ಲಿ ಸಂಬಂಧಿಕರ ಮನೆಯಲ್ಲೇ ಆಶ್ರಯ ಪಡೆದಿದ್ದ 8 ವರ್ಷದ ಬಾಲಕಿಯನ್ನು ವಿಮಾನದಲ್ಲಿ ಕರೆತಂದು ಮೈಸೂರಲ್ಲಿರುವ ತಾಯಿಗೆ ಒಪ್ಪಿಸುವ ಮೂಲಕ ಅಲಯನ್ಸ್ ಏರ್ ಸಂಸ್ಥೆ ಸ್ತುತ್ಯಾರ್ಹ ಕಾರ್ಯ ತಡವಾಗಿ ಬೆಳಕಿಗೆ ಬಂದಿದೆ.

ಜೂ.5(ಶುಕ್ರವಾರ)ರಂದು ಹೈದರಾಬಾದ್ ಏರ್‍ಪೋರ್ಟ್ ನಿಂದ ಬಾಲಕಿಯನ್ನು ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಲಯನ್ಸ್ ಏರ್ ಸಂಸ್ಥೆ ಕರೆತಂದಿತು. ಏರ್‍ಪೋರ್ಟ್ ಅಧಿಕಾರಿಗಳು ಆಕೆಯ ತಾಯಿ ಮತ್ತು ಮನೆಯವರಿಗೆ ಮಾಹಿತಿ ನೀಡಿ ಕರೆಸಿಕೊಂಡು ಅವರೊಂದಿಗೆ ಬಾಲಕಿಯನ್ನು ಸುರಕ್ಷಿತ ವಾಗಿ ಕಳುಹಿಸಿಕೊಟ್ಟಿದ್ದಾರೆ.

ಹೈದರಾಬಾದಿನಿಂದ ಬಾಲಕಿ ಒಬ್ಬಳೇ ಮೈಸೂರಿಗೆ ಪ್ರಯಾಣಿಸಿದ್ದರಿಂದ ಏರ್ ಅಲಯನ್ಸ್ ಸಿಬ್ಬಂದಿಯೇ ಆಕೆಗೆ ಧೈರ್ಯ ತುಂಬಿ, ಕರೆತಂದಿರುವ ಬಗ್ಗೆ ಸಂಸ್ಥೆಯು ಟ್ವೀಟ್ ಮಾಡಿತ್ತು. ಆ ಬಗ್ಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಏರ್ ಅಲಯನ್ಸ್ ಮತ್ತು ಬಾಲಕಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಾಲಕಿಯನ್ನು ತಾಯಿಗೆ ಒಪ್ಪಿಸಲು ಸಹಕರಿಸಿದ ಮಂಡಕಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಧನ್ಯವಾದ ತಿಳಿಸಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ ತಿಳಿಸಿದ್ದಾರೆ.

ವಿಮಾನದಲ್ಲಿ ಪೋಷಕರು, ಸಂಬಂಧಿಕರಿಲ್ಲದೇ ಒಬ್ಬಳೇ ಮೈಸೂರಿಗೆ ಪ್ರಯಾಣ ಮಾಡಿದ 8 ವರ್ಷದ ಬಾಲಕಿಯ ಧೈರ್ಯ ಮೆಚ್ಚುವಂತಹುದು ಎಂದು ಅಲಯನ್ಸ್ ಏರ್ ಸಂಸ್ಥೆ ಟ್ವೀಟ್‍ನಲ್ಲಿ ತಿಳಿಸಿದೆ.

Translate »