ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗೆ ವಾಯು ಮಾಲಿನ್ಯವೇ ಮುಖ್ಯ ಕಾರಣ
ಮೈಸೂರು

ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗೆ ವಾಯು ಮಾಲಿನ್ಯವೇ ಮುಖ್ಯ ಕಾರಣ

July 8, 2018

ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅಭಿಮತ

  •  ಸುಯೋಗ್ ಆಸ್ಪತ್ರೆಯಲ್ಲಿ ಹೃದಯ ಶಾಸ್ತ್ರ ವಿಭಾಗ ಉದ್ಘಾಟನೆ
  • 35 ವರ್ಷದ ನಂತರ `ಮೆಡಿಕಲ್ ಚೆಕಪ್ ಆ್ಯನಿವರ್ಸರಿ’ ಅನಿವಾರ್ಯ!

ಮೈಸೂರು: ಶ್ವಾಸಕೋಶದ ಜತೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಲು ವಾಯುಮಾಲಿನ್ಯವೇ ಮುಖ್ಯ ಕಾರಣ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.

ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಹೃದಯಶಾಸ್ತ್ರ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಯುಮಾಲಿನ್ಯದಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ ಎಂದು ಹೇಳುತ್ತಾರೆ. ಆದರೆ, ಇತ್ತೀಚಿನ ಅಧ್ಯಯನದ ಪ್ರಕಾರ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚಾಗಲು ವಾಯುಮಾಲಿನ್ಯವೇ ಮುಖ್ಯ ಕಾರಣ ಎಂದು ಹೇಳಿದರು.

ದೇಶದಲ್ಲಿ ಶೇ.50ರಷ್ಟು ಕಾಯಿಲೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ. ಇಂದಿನ ಬದಲಾದ ಜೀವನ ಶೈಲಿ, ಪಾಶ್ಚಿಮಾತ್ಯ ಜೀವನ ಅನುಕರಣೆಯಿಂದ ಹೃದಯಾಘಾತ, ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ, ಬಿಪಿ ಮತ್ತಿತರೆ ಕಾಯಿಲೆಗಳು ಹೆಚ್ಚಾಗಿವೆ. ಹಿಂದೆ ಮಕ್ಕಳು ಪೋಷಕರನ್ನು ಚಿಕಿತ್ಸೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಇಂದು ಪೋಷಕರೇ ಮಕ್ಕಳನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. 15-20 ವರ್ಷದ ಮಕ್ಕಳಲ್ಲಿ ಸಕ್ಕರೆ ಕಾಯಿಲೆ, 26 ವರ್ಷಕ್ಕೆ ಹೃದಯಾಘಾತ, 30 ವರ್ಷಕ್ಕೆ ಕಿಡ್ನಿ ಮತ್ತಿತರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಕ್ಕರೆ ಕಾಯಿಲೆ, ಹೃದಯಾಘಾತದಂಥ ದೊಡ್ಡ ಕಾಯಿಲೆಗಳು ಶ್ರೀಮಂತರಿಗೆ ಮಾತ್ರ ಬರುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಬಡವರು, ಕೂಲಿಕಾರ್ಮಿಕರು, ನಿರ್ಗತಿಕರು ಹೀಗೆ ಎಲ್ಲಾ ವರ್ಗದವರೂ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಬದಲಾದ ಜೀವನ ಶೈಲಿ ಮುಖ್ಯ ಕಾರಣ. ಹಿಂದೆಯಿದ್ದ ಆಹಾರ ಪದ್ದತಿ, ಉತ್ತಮ ಪರಿಸರ ಇಂದು ಇಲ್ಲವಾಗಿದೆ. 35 ವರ್ಷ ಮೇಲ್ಪಟ್ಟ ಪುರುಷ-ಮಹಿಳೆಯರು ಕಾಯಿಲೆ ಇರಲಿ-ಇಲ್ಲದಿರಲಿ ವೆಡ್ಡಿಂಗ್ ಆ್ಯನಿವರ್ಸರಿಯಂತೆ `ಮೆಡಿಕಲ್ ಚೆಕಪ್ ಆ್ಯನಿವರ್ಸರಿ’ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಇಂದು ವೈದ್ಯಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳು ವ್ಯಾಪಾರೀಕರಣವಾಗಿವೆ. ಆಧುನೀಕರಣದ ವ್ಯವಸ್ಥೆಯಲ್ಲಿ ವ್ಯಾಪಾರೀಕರಣದ ಜೊತೆ ಜೊತೆಯಲ್ಲಿ ಸಾಗುತ್ತಿದೆ. ಈ ವೇಳೆ ಜಯದೇವ ಹೃದ್ರೋಗ ಸಂಸ್ಥೆಯ `ಚಿಕಿತ್ಸೆ ಮೊದಲು ಹಣ ಪಾವತಿ ನಂತರ’ ಘೋಷ ವಾಕ್ಯದಂತೆ ಸುಯೋಗ ಆಸ್ಪತ್ರೆಯೂ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲಿ ವಿದ್ಯಾವಂತರು, ಬುದ್ಧಿವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೃದಯವಂತರು ಎಷ್ಟು ಮಂದಿ ಇದ್ದಾರೆಂಬ ಪ್ರಶ್ನೆ ಕಾಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ, ಆವಿಷ್ಕಾರಗಳು ಹೆಚ್ಚಾಗುವಂತೆ ಕಾಯಿಲೆಗಳ ಸಂಖ್ಯೆಯು ಹೆಚ್ಚುತ್ತಿವೆ ಎಂದರು.

ಇಂದು ವೈದ್ಯಕೀಯ ಕ್ಷೇತ್ರವು ರಣರಂಗ ಅಥವಾ ಯುದ್ಧಭೂಮಿ ಎನ್ನುವಂತಾಗಿದೆ. ವೈದ್ಯರ ಪರಿಸ್ಥಿತಿ ಏನೇ ಇದ್ದರೂ, ರೋಗಿಗಳಿಗೆ ಕ್ಷಣ ಮಾತ್ರದಲ್ಲಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಬೇಕು ಎಂಬುದು ಎಲ್ಲರ ಆಸೆ. ಆದರೆ, ಗುಣಮಟ್ಟದ ಚಿಕಿತ್ಸೆ ನೀಡಿದಾಗ್ಯೂ ಸಾವು ಸಂಭವಿಸಿದರೆ, ವೈದ್ಯರ ಮೇಲೆ ಹಲ್ಲೆ, ಆಸ್ಪತ್ರೆಯ ಆಸ್ತಿ-ಪಾಸ್ತಿ ಹಾನಿ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಾಯು ಮಾಲಿನ್ಯ, ಪರಿಸರ ಮಾಲಿನ್ಯದಂತೆ ಬುದ್ದಿ ಮಾಲಿನ್ಯವೂ ಶುರುವಾಗಿದ್ದು, ಅತೀ ಬುದ್ಧಿವಂತರಿಂದಲೇ ದೇಶಕ್ಕೆ ಸಮಸ್ಯೆ ಹೆಚ್ಚಾಗುತ್ತಿದ್ದು, ಇವರು ಸಾಮಾಜ-ದೇಶಕ್ಕೆ ಮಾರಕ ಎಂದರು.

ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಕಾರಣ, ಗ್ರಾಮೀಣ ಭಾಗದ ಸ್ಥಳೀಯ ರಾಜಕೀಯ ಮುಖಂಡರು ವೈದ್ಯರ ಮೇಲೆ ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗಿರುವುದರಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇಂದು ವೈದ್ಯರಿಗೂ ನಿರಂತರವಾದ ಒತ್ತಡವಿದ್ದು, ಅವರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ ಎಂದ ಅವರು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಒಟ್ಟಾಗಿ ಕೆಲಸ ನಿರ್ವಹಿಸಬೇಕಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಡಾ.ಎಸ್.ಪಿ.ಯೋಗಣ್ಣ ಅವರು ಮೈಸೂರಿನಲ್ಲಿ 400 ಹಾಸಿಗೆಯುಳ್ಳ ಮಲ್ಟಿ ಸ್ಪೇಷಾಲಿಟಿ ಸುಯೋಗ್ ಆಸ್ಪತ್ರೆಯನ್ನು ತೆರೆದಿರುವುದು ಸಂತೋಷ ತಂದಿದೆ. ಇಷ್ಟು ದೊಡ್ಡ ಆಸ್ಪತ್ರೆಯನ್ನು ಕಟ್ಟಲು ಎದೆಗಾರಿಕೆ, ಧೈರ್ಯದ ಜತೆಗೆ ಹೃದಯ ಗಟ್ಟಿ ಇರಬೇಕು. ಈ ಆಸ್ಪತ್ರೆ ಮೈಸೂರು ಸೇರಿದಂತೆ ಸುತ್ತಮುತ್ತಲಿನ ಐದು ಜಿಲ್ಲೆಗಳ ರೋಗಿಗಳಿಗೆ ಉಪಯುಕ್ತವಾಗಲಿದ್ದು, ಒಂದೇ ಸೂರಿನಡಿಯಲ್ಲಿ ಎಲ್ಲಾ ರೀತಿಯ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯಲಿದೆ ಎಂದರು.

ಸಿಎಸ್‍ಐ ಮೈಸೂರು ಶಾಖೆ ಅಧ್ಯಕ್ಷ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ.ಜಿ.ರಾಜ್‍ಗೋಪಾಲ್, ಮೈಸೂರು ವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಸ್.ಎನ್.ಹೆಗಡೆ. ವೈದ್ಯರಾದ ಡಾ.ಮಹೇಶ್ ಕುಮಾರ್, ಡಾ.ಸುಜಾತರಾವ್, ಡಾ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಹೃದಯಶಾಸ್ತ್ರ ವಿಭಾಗವನ್ನು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿ, ವೀಕ್ಷಿಸಿದರು.

ಡಾ.ಸಿ.ಎನ್.ಮಂಜುನಾಥ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಬೇಕು. ಜತೆಗೆ ಮುಖ್ಯಮಂತ್ರಿಗಳು, ಸಂವಿಧಾನಿಕವಾಗಿ ಹುದ್ದೆಯೊಂದನ್ನು ಸೃಷ್ಟಿಸಿ ವೈದ್ಯಕೀಯ ಕ್ಷೇತ್ರದ ನಾಯಕತ್ವವನ್ನು ಮಂಜುನಾಥ್ ಅವರಿಗೆ ವಹಿಸಬೇಕು. ಆಗ ಮಾತ್ರ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ ಸಾಧ್ಯ. -ಡಾ.ಎಸ್.ಪಿ.ಯೋಗಣ್ಣ, ಅಧ್ಯಕ್ಷರು, ಸುಯೋಗ್ ಅಸ್ಪತ್ರೆ.

Translate »