4 ಕಾರ್ಮಿಕ ಸಂಹಿತೆ ಹಿಂಪಡೆಯಲು ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ 
ಮೈಸೂರು

4 ಕಾರ್ಮಿಕ ಸಂಹಿತೆ ಹಿಂಪಡೆಯಲು ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ 

October 8, 2020

ಮೈಸೂರು, ಅ.7(ಪಿಎಂ)- ಕಾರ್ಮಿಕ ಪರ ಕಾಯ್ದೆಗಳನ್ನು ರದ್ದು ಗೊಳಿಸಿರುವ ಕೇಂದ್ರ ಸರ್ಕಾರ, ಮಾರಕವಾಗುವಂತಹ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಕೂಡಲೇ ಅವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಯುನೈ ಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ನ (ಎಐಯುಟಿಯುಸಿ) ಜಿಲ್ಲಾ ಸಮಿತಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರದ ಕ್ರಮ ಗುಲಾಮಗಿರಿಗೆ ನಾಂದಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈಗಾರಿಕಾ ವಿವಾದ ಕಾಯ್ದೆ-1947ರ ಪ್ರಕಾರ 100ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಯು ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಹಾಗೂ ಕಾರ್ಖಾನೆ ಮುಚ್ಚುವ ಮುನ್ನ ಸರ್ಕಾರದ ಅನುಮತಿ ಪಡೆಯಬೇಕು. ಆದರೆ ಈಗ ಈ ಮಿತಿಯನ್ನು 100ರಿಂದ 300 ಕಾರ್ಮಿಕರ ಲೆಕ್ಕಕ್ಕೆ ಹೆಚ್ಚಳ ಮಾಡಲಾಗಿದೆ. ಇದು ಕಾರ್ಮಿಕರನ್ನು ಶೋಷಣೆ ಮಾಡಲು ಕಾರ್ಖಾನೆ ಮಾಲೀಕರಿಗೆ ಅವಕಾಶ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೈಗಾರಿಕಾ ಕಾಯ್ದೆ-1948ರ ಪ್ರಕಾರ ವಿದ್ಯುತ್ ಬಳಕೆಯೊಂ ದಿಗೆ 10 ಕಾರ್ಮಿಕರನ್ನು ಹೊಂದಿರುವ ಹಾಗೂ ವಿದ್ಯುಚ್ಛಕ್ತಿ ಇಲ್ಲದೇ 20 ಕಾರ್ಮಿಕರನ್ನು ಹೊಂದಿರುವ ಒಂದು ಉತ್ಪಾದನಾ ಘಟಕವನ್ನು ಕಾರ್ಖಾನೆ ಎಂದು ಪರಿಗಣಿಸಬಹುದು. ಆದರೆ ಈಗ ಈ ಮಿತಿಯನ್ನು ಕಾರ್ಮಿಕರ ವಿರೋಧದ ನಡುವೆಯೂ ಕ್ರಮವಾಗಿ 20 ಮತ್ತು 30ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಕಿಡಿಕಾರಿದರು.

ಹೊಸ ಕಾರ್ಮಿಕ ಸಂಹಿತೆಗಳು ಶೇ.75ರಷ್ಟು ಕಾರ್ಮಿಕರು ಹಾಗೂ ಶೇ.70ರಷ್ಟು ಕೈಗಾರಿಕಾ ಘಟಕಗಳಿಗೆ ಇದ್ದ ಕಾನೂನಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲಿವೆ. ಅಲ್ಲದೇ, ಎಲ್ಲಾ ಉದ್ಯೋಗ ಭದ್ರತೆಯೂ ನಾಶವಾಗಲಿದೆ. ಮಾಲೀಕರು ಮನಬಂದಂತೆ ನಡೆದುಕೊಳ್ಳಲು ಅವಕಾಶವಾಗಲಿದೆ. ಇಲ್ಲಿಯವರೆಗೆ ಕಾನೂನಾತ್ಮಕವಾಗಿ ಕಾರ್ಮಿಕರಿಗೆ ಲಭ್ಯವಿದ್ದ ಪ್ರತಿಭಟನೆ ಹಕ್ಕನ್ನು ಮೊಟಕುಗೊಳಿಸ ಲಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಮಾರಕವಾದ ಸಂಹಿತೆಗಳನ್ನು ಹಿಂಪಡೆದು, ಕಾರ್ಮಿಕ ಪರ ಕಾಯ್ದೆಗಳನ್ನೇ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಮುಖಂಡರಾದ ಹರೀಶ್, ಸತೀಶ್, ಮಹದೇವಮ್ಮ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

 

 

 

 

Translate »