ಹಾವೇರಿಯಲ್ಲಿ ಅಕ್ಷರ ಜಾತ್ರೆಗೆ ಚಾಲನೆ
News

ಹಾವೇರಿಯಲ್ಲಿ ಅಕ್ಷರ ಜಾತ್ರೆಗೆ ಚಾಲನೆ

January 7, 2023

ಹಾವೇರಿ, ಜ.6-ಏಲಕ್ಕಿ ಕಂಪಿನ ನಗರಿ ಹಾವೇರಿ ಯಲ್ಲಿ ಶುಕ್ರವಾರ ಬೆಳಗ್ಗೆ 3 ದಿನಗಳ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ ಗೊಂಡಿದ್ದು, ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಿಗದಿತ ಸಮಯಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿಯ 130 ಎಕರೆ ವಿಸ್ತೀರ್ಣ ಜಾಗದಲ್ಲಿ `ಕನಕ-ಶರೀಫ-ಸರ್ವಜ್ಞ ವೇದಿಕೆ’ ಮುಂಭಾಗ ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಹೇಶ್ ಜೋಶಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ ಹೀರೇಮಠ ನಾಡ ಧ್ವಜದ ಧ್ವಜಾರೋಹಣ ನೆರವೇರಿಸಿದರು.

ವಿವಿಧ ಕಲಾತಂಡಗಳು ಸಾಹಿತ್ಯ ಮೆರವಣಿಗೆ ಯಲ್ಲಿ ಪಾಲ್ಗೊಂಡು ಮೆರುಗು ನೀಡಿದವು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್, ನ ಭೂತೋ, ನ ಭವಿಷ್ಯತಿ ಎನ್ನುವ ರೀತಿಯಲ್ಲಿ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಕನ್ನಡಿಗರು ಮತ್ತು ಸಾಹಿತ್ಯಾಸಕ್ತರ ನೆನಪಿ ನಲ್ಲಿ ಉಳಿಯುವಂತೆ ಆಯೋಜಿಸಲಾಗಿದೆ. ಕನ್ನಡಿ ಗರ ಬಗ್ಗೆ, ಭಾಷೆ, ನಾಡು-ನುಡಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವವರಿಗೆ ತಕ್ಕ ಉತ್ತರ ನೀಡ ಲಾಗುವುದು. ನಾಡು ನುಡಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಹಾವೇರಿಗೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಜಿಲ್ಲಾಡಳಿತ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಗಿದೆ. ಸಮ್ಮೇಳನ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಲಿ ಎಂದು ನಿಗದಿತ ಸಮಯಕ್ಕೆ ಧ್ವಜಾರೋಹಣ ಮಾಡಿದ್ದೇವೆ. ಕನ್ನಡ ನಾಡು ನುಡಿ ಭಾಷೆ ಬಗ್ಗೆ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಉತ್ತಮ ಚರ್ಚೆ ನಡೆಯಲಿದೆ. ಸಮ್ಮೇಳನದಲ್ಲಿ ಯಾವುದೇ ಅಭಾಸ, ಕುಂದುಕೊರತೆಯಾಗದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚರಿಕೆಯಿಂದ ಕೆಲಸ ಮಾಡಿದೆ. ಕನ್ನಡವೇ ಸತ್ಯ-ಕನ್ನಡವೇ ನಿತ್ಯ ಎಂಬ ಘೋಷಣೆಯನ್ನು ಜಾರಿಗೆ ತರಲು ಸರ್ಕಾರ ಸರ್ವರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ನಾಡು ನುಡಿಯ ವಿಚಾರದಲ್ಲಿ ಭಿನ್ನತೆ ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಇನ್ನು, 86ನೇ ಸಮ್ಮೇಳನಕ್ಕೆ ಸಾಂಕೇತಿಕವಾಗಿ 86 ಪುಸ್ತಕಗಳನ್ನು ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ 49 ಪುಸ್ತಕಗಳನ್ನು ಪ್ರಕಟಿಸಿದರೆ, 37 ಪುಸ್ತಕಗಳನ್ನು ಪರಿಷತ್ತಿನ ಹಾವೇರಿ ಜಿಲ್ಲಾ ಘಟಕ ಮುದ್ರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆಗೊಳಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ, ?ಕನ್ನಡದ ಕೆಚ್ಚು ಹೆಚ್ಚಿಸಲು, ಕನ್ನಡ ಭಾಷೆ ಬೆಳವಣಿಗೆಗೆ ನುಡಿಹಬ್ಬಗಳು ಪೂರಕ. ಭಾಷೆ ಅನ್ನ ನೀಡಬೇಕು. ಕನ್ನಡ ಮನಸ್ಸುಗಳೆಲ್ಲ ಒಂದಾಗಬೇಕು. ಅಡುಗೆ ಮನೆಗೆ ಅನ್ಯ ಭಾಷೆ ಪ್ರವೇಶಿಸಿದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಮೂಲಕ ಕನ್ನಡ ನುಡಿ ಸಂಸ್ಕೃತಿ ಸಂರಕ್ಷಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚದ ಹಾಗೆ ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿ ಸುತ್ತದೆ ಎಂಬ ನಂಬಿಕೆ ಇದೆ. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ, ಭಾಷಾ ಶಾಸ್ತ್ರೀಯ ಯೋಜನೆಗೆ ಸಂಬಂಧಿಸಿ ನಿಯಮಗಳನ್ನು ರೂಪಿಸಿ ಕನ್ನಡವನ್ನು ಇನ್ನಷ್ಟು ಬಲವರ್ಧನೆಗೊಳಿಸಬೇಕಿದೆ. ಕನ್ನಡ ಸಮ್ಮೇಳನಗಳು ಕನ್ನಡಿಗರ ಅಸ್ಮಿತೆಯ ಹಬ್ಬ. ಸಾಮರಸ್ಯದ ಭಾವ, ಕನ್ನಡದ ಜೀವ ಧ್ಯೇಯವಾಗಿಟ್ಟುಕೊಂಡು ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಉದ್ದೇಶ ವಿವರಿಸಿದರು.

ಸಮ್ಮೇಳನದ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿಮುಖ್ಯಮಂತ್ರಿ, ಶಾಸಕ ಬಿ.ಎಸ್. ಯಡಿಯೂರಪ್ಪ, ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆ ಮಾತನಾಡಲು ಹಿಂಜರಿಯುತ್ತಿರುವುದು ಆತಂಕದ ವಿಷಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನದ ಅಗತ್ಯವಾಗಿದ್ದರೂ ಕನ್ನಡ ಉಳಿಸಬೇಕಿದೆ. ಕನ್ನಡ ನಾಡು, ನುಡಿ, ಜಲ ಉಳಿಸಲು ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಕನ್ನಡ ವಿಧೇಯಕ ಮಂಡಿಸಲಾಗಿದೆ. ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸಲಾಗಿದೆ ಎಂದು ತಿಳಿಸಿದರು.

ಇಂದು ಶಿಕ್ಷಣ ಇದೆ. ಆದರೆ, ಸಂಸ್ಕಾರ ಇಲ್ಲದಂತಾಗಿದೆ. ಅದಕ್ಕೆ ಅವಕಾಶ ಸಿಗಬಾ ರದು. ನುಡಿಯನ್ನು ಬಹುತ್ವದ ನೆಲೆಯಲ್ಲಿ ನೋಡಬೇಕಿದೆ. ಕನ್ನಡ ನಾಡು ಒಂದು ಪ್ರದೇಶವಲ್ಲ. ಅದೊಂದು ಸಂಸ್ಕೃತಿ, ಪರಂಪರೆ. ಕನ್ನಡದ ಶ್ರೀಮಂತ ಪರಂಪರೆಗೆ ವಿದೇಶಿಯರು ಮಾರು ಹೋಗಿದ್ದಾರೆ. ಮನೆಯಲ್ಲಿ ನಿಮ್ಮ ಭಾಷೆ, ಹೊರಗೆ ಕನ್ನಡ ಮಾತಾಡಿ ಎಂಬ ಹೇಳುವ ವಿಶಾಲ ಮನೋಭಾವದವರು ಕನ್ನಡಿಗರು ಎಂದರು.

ಸಿದ್ದೇಶ್ವರ ಸ್ವಾಮೀಜಿಗೆ ಶ್ರದ್ಧಾಂಜಲಿ: ಶುಕ್ರವಾರ ಆರಂಭಗೊಂಡ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ ವಿಜಯಪುರ ಜ್ಞಾನ ಯೋಗಾ ಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಸ್ಮರಣಾರ್ಥ ಎರಡು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯ ಮುಂಭಾಗದಲ್ಲಿ ಅವರ ಭಾವಚಿತ್ರ ಇರಿಸಲಾಗಿತ್ತು.

Translate »