ನಿರೀಕ್ಷಿತ ಗುರಿಸಾಧನೆಗೆ ವಿದ್ಯಾರ್ಹತೆ ಜೊತೆಗೆ ಕೌಶಲ್ಯ ಅತ್ಯಗತ್ಯ
ಮೈಸೂರು

ನಿರೀಕ್ಷಿತ ಗುರಿಸಾಧನೆಗೆ ವಿದ್ಯಾರ್ಹತೆ ಜೊತೆಗೆ ಕೌಶಲ್ಯ ಅತ್ಯಗತ್ಯ

January 7, 2023

ಮೈಸೂರು, ಜ. 6 (ಆರ್‍ಕೆ)-ಜೀವನದಲ್ಲಿ ಗುರಿ ಸಾಧನೆಗೆ ವಿದ್ಯಾರ್ಹತೆ ಜೊತೆಗೆ ಕೌಶಲ್ಯಾಭಿವೃದ್ಧಿ ಅತ್ಯಗತ್ಯ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ)ದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ.ಗೌಡ, ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್.ಬಹ ದ್ದೂರ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸಸ್ (ಬಿಎಂಎಂಎಸ್) ವತಿಯಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಿದ್ದ `ಕೌಶಲ್ಯ’ ಭಾರತ-ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿಜ್ಞಾನ-ತಂತ್ರಜ್ಞಾನ ಅತೀ ವೇಗವಾಗಿ ಬೆಳೆಯುತ್ತಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ, ಸ್ನಾತಕೋತ್ತರ ಪದವಿ ಪಡೆದುಕೊಂಡರೆ ಸಾಲದು. ಶೈಕ್ಷಣಿಕ ಜ್ಞಾನದ ಜೊತೆಗೆ ವೃತ್ತಿ ಕೌಶಲ್ಯ, ಭಾಷಾ ಜ್ಞಾನ ಹೊಂದುವುದು ಅತ್ಯವಶ್ಯ ಎಂದರು.

ಇಂದು ಕೈಗಾರಿಕೋದ್ಯಮ, ಐಟಿ-ಬಿಟಿ ಉದ್ಯಮ ಬೃಹದಾಕಾರವಾಗಿ ಬೆಳೆದಿದೆ. ಉದ್ಯೋಗಾವಕಾಶ ಗಳೂ ವಿಫುಲವಾಗಿದೆ. ಆದರೆ, ತಾಂತ್ರಿಕ ಜ್ಞಾನ, ಕೌಶಲ್ಯ ಇಲ್ಲದಿದ್ದರೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಎಷ್ಟೇ ಉನ್ನತ ಶಿಕ್ಷಣ ಪಡೆದಿದ್ದರೂ, ಕೌಶಲ್ಯ ಇಲ್ಲದಿದ್ದರೆ ಯಾವ ಕಂಪನಿಯೂ ಬರೀ ಶೈಕ್ಷಣಿಕ ವಿದ್ಯಾರ್ಹತೆ ಮೇಲೆ ಉದ್ಯೋಗಾವಕಾಶ ನೀಡುವು ದಿಲ್ಲ. ಡೊಮೈನ್ ಮತ್ತು ಸಾಫ್ಟ್‍ಸ್ಕಿಲ್ಸ್ ಹೊಂದಿದರೆ ಮಾತ್ರ ದೇಶದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಅವ ಕಾಶ ದೊರೆಯಲಿದೆ ಎಂದರು. ದೇಶದ ಅಭಿವೃದ್ಧಿ ಯಲ್ಲಿ ಯುವಕರ ಪಾತ್ರ ಪ್ರಮುಖವಾದುದು. ಕೌಶಲ್ಯ ಹೊಂದಿರುವ ಯುವಕರಿಗೆ ವಿದೇಶದಿಂದಲೂ ಭಾರೀ ಬೇಡಿಕೆ ಇದೆ. ಅವರ ಅಗತ್ಯಕ್ಕೆ ತಕ್ಕಂತೆ ತರಬೇತಿ ನೀಡಿ ಕಳುಹಿಸುವುದು, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿ ಯುವಕರನ್ನು ತಯಾರು ಮಾಡಲು ಕರ್ನಾ ಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮವು ಹಲವು ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದ್ದು, ವಿದ್ಯಾರ್ಥಿಗಳೂ ಅದನ್ನು ಬಳಸಿಕೊಳ್ಳಬೇಕೆಂದು ಅವರು ಇದೇ ವೇಳೆ ನುಡಿದರು.

ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ತಮ್ಮ ಶೈಕ್ಷಣಿಕ ಗುಣಮಟ್ಟ, ಸಂಶೋಧನೆಗೆ ಹೆಚ್ಚು ಗಮನ ಹರಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಇಂದಿನ ಅಗತ್ಯಕ್ಕೆ ಅನುಗುಣವಾಗಿ ಕೌಶಲ್ಯ ಅಭಿವೃದ್ದಿ ಬಗ್ಗೆ ತರಬೇತಿ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸುವುದು ಸೂಕ್ತ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.
ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ಮೈಸೂರು ವಲಯ ಉಪಾಧ್ಯಕ್ಷ ಸ್ಯಾಮ್ ಚೆರಿಯನ್ ಕೊಂಬುಕಟ್ಟು, ಕೈಗಾರಿಕೆಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ್ಯ ಹೊಂದಿರುವ ಯುವಕರಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತಂತೆ ಮಾತನಾಡಿದರು. ಬಿ.ಎನ್.ಬಹದ್ದೂರ್ ಇನ್ಸ್‍ಟಿ ಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸಸ್ ಅಧ್ಯಕ್ಷ ಪ್ರೊ.ಡಿ.ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿ ಸಿದ್ದು, ವಿಚಾರ ಸಂಕಿರಣದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುಲಸಚಿವರಾದ ವಿ.ಆರ್. ಶೈಲಜಾ, ವಿಚಾರ ಸಂಕಿರಣದ ಸಂಯೋಜಕಿ ಡಾ. ಎಂ. ಅಮೂಲ್ಯ, ಸಂಘಟನಾ ಸಮಿತಿ ಸದಸ್ಯರಾದ ಪ್ರೊ. ಆಯಿಷಾ ಎಂ. ಷರೀಫ್, ಪ್ರೊ. ಎಸ್.ಜೆ. ಮಂಜುನಾಥ್ ಹಾಗೂ ಪ್ರೊ. ಆರ್. ಮಹೇಶ್ ಪಾಲ್ಗೊಂಡಿದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ಟ್ರಾನ್ಸ್‍ಫರ್ಮೇಷನ್ ಪ್ರೋಟೋಕಾಲ್ ದಿ ನ್ಯೂ ಮಂತ್ರ ಆಫ್ ದಿ ಸ್ಕಿಲ್ ಡೆವಲಪ್‍ಮೆಂಟ್ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಿದರು.

Translate »