ಅಧ್ಯಕ್ಷನಾಗಿ ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತಂದು ಕುರ್ಚಿ ಬಿಡಲು ಸಿದ್ಧನಿಲ್ಲ
News

ಅಧ್ಯಕ್ಷನಾಗಿ ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತಂದು ಕುರ್ಚಿ ಬಿಡಲು ಸಿದ್ಧನಿಲ್ಲ

January 7, 2023

ಬೆಂಗಳೂರು, ಜ.6(ಕೆಎಂಶಿ)-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದರೆ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರಾಕರಿಸಿದ್ದಾರೆ.

ಅಧ್ಯಕ್ಷನಾಗಿ ಪಕ್ಷವನ್ನು ಸಂಘಟಿಸಿ, ಅಧಿ ಕಾರಕ್ಕೆ ತಂದು ಇನ್ನೊಬ್ಬರಿಗೆ ಕುರ್ಚಿ ಬಿಟ್ಟು ಕೊಡಲು ನಾನು ಸಿದ್ಧ ಇಲ್ಲ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರಿಗೆ ನೇರವಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುವ ಸಿದ್ದ ರಾಮಯ್ಯ ಬೆಂಬಲಿಗರು ತಮ್ಮ ನಾಯಕನನ್ನು ಮೊದಲಾವಧಿಗೆ ಮುಖ್ಯಮಂತ್ರಿ ಮಾಡಲು ಲೆಕ್ಕಾಚಾರ ಹಾಕಿದ್ದಾರೆ. ತಲಾ ಎರಡೂ ವರೆ ವರ್ಷಗಳಂತೆ ಅಧಿಕಾರ ಹಂಚಿಕೊಂಡು, ನೀವು ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಎಂದಿದ್ದಾರೆ. ಚುನಾವಣೆಗೂ ಮುನ್ನವೇ ಅಧಿಕಾರ ಹಂಚಿಕೆ ನಿರ್ಧಾ ರವಾಗುವುದು ಸೂಕ್ತ. ನಾವು ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಶಿವಕುಮಾರ್ ಅವರ ಮನವೊಲಿಸುವ ಕೆಲಸ ಮಾಡಿದ್ದರು.

ಸಿದ್ದು ಬೆಂಬಲಿಗರ ಮನವಿಯನ್ನು ನಯವಾಗಿ ತಿರಸ್ಕರಿಸಿದ ಶಿವಕುಮಾರ್ ಪಕ್ಷವನ್ನು ಸಂಘಟಿಸಿ, ಗೆಲುವನ್ನು ಇನ್ನೊಬ್ಬರ ಮಡಿಲಿಗೆ ಹಾಕಲು ಸಿದ್ಧನಿಲ್ಲ. ನಾನು ಹಗಲು ರಾತ್ರಿ ದುಡಿಯುತ್ತಿದ್ದೇನೆ. ನಾವು ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ. ವರಿಷ್ಠರು ಮುಂದಿನದನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ನಾನಂತೂ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಒಲವು ತೋರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಶಿವಕುಮಾರ್ ಅವರು ಅಧಿಕಾರ ಹಂಚಿಕೆಗೆ ನಿರಾಸಕ್ತಿ ತೋರಿದ ಬೆನ್ನಲ್ಲೇ ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದಿರುವ ಸಿದ್ದು ಬೆಂಬಲಿಗರು ಪಕ್ಷವನ್ನು ತಮಗಿಷ್ಟ ಬಂದಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಾರರು ನೀಡುವ ಸಲಹೆ-ಸೂಚನೆಗಳನ್ನು ಪಾಲಿ ಸುತ್ತಿಲ್ಲ. ತಾವು ತಮ್ಮ ಸಹೋದರರು
ತೆಗೆದುಕೊಂಡ ತೀರ್ಮಾನಗಳನ್ನೇ ನಮ್ಮ ಮೇಲೆ ಹೇರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಇದರ ನಡುವೆ ಶಿವಕುಮಾರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್ ನೀಡಿ ಅವರನ್ನು ವಿಧಾನಸಭೆಗೆ ಗೆಲ್ಲಿಸಿಕೊಂಡು ಬಂದು ನಂತರ ಆಟ ಆಡೋಣ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ. ತಾವು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳನ್ನೇ ಮುಂದಿಟ್ಟುಕೊಂಡು ತಮ್ಮದೇ ಆದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ನೆಪಮಾತ್ರಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಚುನಾವಣಾ ಸಮಿತಿ ಎಂದಿದ್ದರಾದರೂ ಅಂತಿಮವಾಗಿ ವರಿಷ್ಠರ ಮೇಲೆ ಒತ್ತಡ ತಂದು ತಮ್ಮ ಪಟ್ಟಿಯಲ್ಲಿರುವ ಹೆಚ್ಚು ಮಂದಿಗೆ ಟಿಕೆಟ್ ಕೊಡಿಸಲು ಲೆಕ್ಕಾಚಾರ ಹಾಕಿದ್ದಾರೆ. ಹೀಗಾಗಿ ವರಿಷ್ಠರು ಪದೆ ಪದೇ ಮಾತುಕತೆ ನಡೆಸಿ ಉಭಯ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದು ಸೂಚನೆ ನೀಡುತ್ತಿದ್ದರೂ, ಅವರ ತಾಕೀತು ಕಾರ್ಯ ರೂಪಕ್ಕೆ ಬರುತ್ತಿಲ್ಲ. ನಾನೊಂದು ತೀರಾ, ನೀನೊಂದು ತೀರ ಎಂಬ ಪರಿಸ್ಥಿತಿ ಕಾಂಗ್ರೆಸ್ ನಲ್ಲಿ ನಿರ್ಮಾಣವಾಗಿದೆ. ಉಭಯ ನಾಯಕರ ಬೆಂಬಲಿಗರು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ತಮ್ಮ ತಮ್ಮ ನಾಯಕರನ್ನು ಮುಖ್ಯಮಂತ್ರಿ ಗಾದಿಯಲ್ಲಿ ನೋಡಲು ಹವಣಿಸುತ್ತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ರೀತಿಯ ತಂತ್ರ ಹಾಗೂ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.

Translate »