ಫೆಬ್ರವರಿಯಿಂದ ಖಾತಾ ನೀಡಿಕೆ
ಮೈಸೂರು

ಫೆಬ್ರವರಿಯಿಂದ ಖಾತಾ ನೀಡಿಕೆ

January 7, 2023

ಮೈಸೂರು, ಜ.6(ಎಂಟಿವೈ)- ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ನೂತನ ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಫೆಬ್ರವರಿ ಮೊದಲ ವಾರದಿಂದ ಖಾತಾ ನೀಡಲಾಗುವುದು. ಇದಕ್ಕಾಗಿ `ಇ-ಆಸ್ತಿ’ ತಂತ್ರಾಂಶ ರೂಪಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಮೈಸೂರು ಮಹಾ ನಗರ ಪಾಲಿಕೆ ಗಡಿಗೆ ಹೊಂದಿಕೊಂಡಿ ರುವ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ 10 ಗ್ರಾಮ ಪಂಚಾಯ್ತಿಗಳನ್ನು(ಕೆಲವು ಪೂರ್ಣ ಮತ್ತು ಕೆಲವು ಭಾಗಶಃ) ಮೇಲ್ದರ್ಜೆಗೇರಿಸಿ ಹೂಟಗಳ್ಳಿ ನಗರಸಭೆ, ಬೋಗಾದಿ, ರಮ್ಮನ ಹಳ್ಳಿ, ಶ್ರೀರಾಂಪುರ ಹಾಗೂ ಕಡಕೊಳ ಪಟ್ಟಣ ಪಂಚಾಯ್ತಿ ರಚಿಸಿದ ನಂತರ ಆಸ್ತಿ ಗಳಿಗೆ ಖಾತೆ ಮಾಡಿಕೊಡುವ ಪ್ರಕ್ರಿಯೆಗೆ ಉಂಟಾಗಿದ್ದ ತೊಡಕು ನಿವಾರಣೆಯಾ ಗಿದ್ದು, ಫೆಬ್ರವರಿ ಮೊದಲ ವಾರದಿಂದ ಅಧಿ ಕೃತ ಹಾಗೂ ಅನಧಿಕೃತವೆಂದು ವಿಂಗಡಿಸಿ ಆಸ್ತಿಗಳಿಗೆ ನಮೂನೆ-3(ಖಾತೆ) ನೀಡಲಾ ಗುವುದು. ಇದರಿಂದ ಸುಮಾರು 103 ಬಡಾ ವಣೆಯ 54 ಸಾವಿರಕ್ಕಿಂತ ಹೆಚ್ಚು ಆಸ್ತಿ ಮಾಲೀಕರಿಗೆ ಕ್ರಯ, ವಿಕ್ರಯ, ಬ್ಯಾಂಕ್ ಸಾಲಸೌಲಭ್ಯ, ಖಾತಾ ಬದಲಾವಣೆ, ಕಟ್ಟಡ ನಿರ್ಮಾಣದ ನಕ್ಷೆ ಅನುಮೋದನೆ, ಪರವಾನಗಿ ಪಡೆಯಲು ಅನುಕೂಲವಾಗಲಿದೆ ಎಂದರು.

10 ಗ್ರಾಪಂ ಮೇಲ್ದರ್ಜೆಗೆ: ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಇರುವ 10 ಗ್ರಾಪಂಗಳನ್ನು ಮೇಲ್ದರ್ಜೆಗೇರಿಸಲು ಈ ಹಿಂದೆ ಒತ್ತಾಯಿಸಿದ್ದೆ. 2021ರ ಏ.1ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ, ಹೂಟಗಳ್ಳಿ ನಗರಸಭೆ, ಬೋಗಾದಿ, ರಮ್ಮನಹಳ್ಳಿ, ಶ್ರೀರಾಮಪುರ, ಕಡಕೊಳ ಪಟ್ಟಣ ಪಂಚಾಯ್ತಿಯಾಗಿ ಘೋಷಿಸಿತು. ಆ.1ರಂದು ಈ ನಾಲ್ಕು ಹೊಸ ಸ್ಥಳೀಯ ಸಂಸ್ಥೆಗಳು ಕಾರ್ಯಾರಂಭ ಮಾಡಿ ದ್ದವು. ಆದರೆ, ಕೆಲವು ಆಡಳಿತಾತ್ಮಕ ತೊಡಕು ಎದುರಾದ ಹಿನ್ನೆಲೆಯಲ್ಲಿ ಈ 5 ಹೊಸ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಜನರು ತಮ್ಮ ಆಸ್ತಿಗಳ ಬಗ್ಗೆ ದಾಖಲೆ ಪಡೆಯಲು ಆಗದೆ ತೊಂದರೆ ಅನುಭವಿಸಿದ್ದರು. ಕಳೆದ ಒಂದು ವರ್ಷದಿಂದಲೂ ಈ ಹೊಸ ಸಂಸ್ಥೆಗಳಿಗೆ ಸೇರಿದ ಆಸ್ತಿಯನ್ನು ಮಾರಾಟ, ಪರಭಾರೆ ಮಾಡಲು, ಖಾತೆ ವರ್ಗಾವಣೆ, ಸಾಲ ಪಡೆಯಲು ಸಾಧ್ಯವಾಗದೆ ಜನರು ತೊಂದರೆಗೀಡಾಗಿದ್ದರು. ಇದರಿಂದ ಯಾಕಾದರೂ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಪಟ್ಟೆವೋ ಎಂದೆನಿಸಿತ್ತು. ಈ ಸಮಸ್ಯೆಯನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ, ಎದುರಾಗಿರುವ ಆಡಳಿತಾತ್ಮಕ ತೊಡಕು ನಿವಾರಿಸುವಂತೆ ಒತ್ತಾಯಿಸಿದ್ದೆ ಎಂದರು.

ಮನವಿಗೆ ಮನ್ನಣೆ: ನನ್ನ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಉಪಸಮಿತಿ ರಚಿಸಿ ಅದಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಅಧ್ಯಕ್ಷರಾಗಿ ನಿಯೋಜಿಸಿ, ಸಚಿವರಾದ ಎಂ.ಟಿ.ಬಿ. ನಾಗರಾಜ್, ಮಾಧುಸ್ವಾಮಿ, ಕೋಟಾ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮಂಜುಶ್ರೀ ಅವ ರನ್ನು ಸದಸ್ಯರಾಗಿ ನಿಯೋಜಿಸಿದ್ದರು. ಇದೀಗ ಈ ಸಮಿತಿಯು ಪರಿಶೀಲನೆ ಮಾಡಿ ವರದಿ ನೀಡಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಐದೂ ಹೊಸ ಸ್ಥಳೀಯ ಸಂಸ್ಥೆಗಳೂ ಒಳಗೊಂಡಂತೆ ರಾಜ್ಯದಲ್ಲಿರುವ 61 ನಗರಸಭೆ, 124 ಪುರಸಭೆ, 114 ಪಟ್ಟಣ ಪಂಚಾಯ್ತಿಗಳಲ್ಲಿ ಆಸ್ತಿಗಳ ದಾಖಲೆಗಳ ಬಗ್ಗೆ ಇದ್ದ ತೊಡಕು ನಿವಾರಿಸುವುದರೊಂದಿಗೆ, ಅಧಿಕೃತಗೊಳಿಸಿ ದಾಖಲೆ ನೀಡಲು ಕ್ರಮಕೊಳ್ಳಲಾಗಿದೆ. ಇದಕ್ಕಾಗಿ `ಇ-ಆಸ್ತಿ’ ತಂತ್ರಾಂಶ ರೂಪಿಸಲು ಸರ್ಕಾರ ಸೂಚನೆ ನೀಡಿದೆ. ಫೆಬ್ರವರಿ ಮೊದಲ ವಾರದಿಂದ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಈಗಾಗಲೇ ಎಲ್ಲಾ ಆಸ್ತಿಗಳ ದಾಖಲೆಗಳನ್ನು ಸಾಫ್ಟ್‍ವೇರ್‍ಗೆ ಅಳವಡಿಸುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

ಹೊಸ ತಂತ್ರಾಂಶ ಅಭಿವೃದ್ಧಿ: ತಂತ್ರಾಂಶ ರೂಪಿಸಿದ ಮೇಲೆ ಖಾತೆ ನೀಡುವುದಕ್ಕೆ ಚಾಲನೆ ನೀಡಲಾಗುತ್ತದೆ. ನಗರ ಹಾಗೂ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲ್ಪಟ್ಟ ವ್ಯಾಪ್ತಿಯಲ್ಲಿ ರುವ ಆಸ್ತಿಗಳನ್ನು ಅಧಿಕೃತ, ಅನಧಿಕೃತ ಎಂದು ವಿಂಗಡಿಸಿ ಅವುಗಳಿಗೆ ನಮೂನೆ-3 ನೀಡಲು(ಖಾತೆ) ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ ವ್ಯಾಪ್ತಿಯ ಅಂದಾಜು 103 ಬಡಾವಣೆ ಹಾಗೂ ಈ ವ್ಯಾಪ್ತಿಯಲ್ಲಿರುವ 53,853 ಅನಧಿಕೃತ ಆಸ್ತಿ ಮಾಲೀಕರುಗಳಿಗೆ ಅನುಕೂಲವಾಗಲಿದೆ. ಮಾತ್ರವಲ್ಲದೇ ಇದರಿಂದ ಕ್ರಯ, ವಿಕ್ರಯ ಮಾಡಲು, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು, ಖಾತಾ ಬದಲಾವಣೆ, ಕಟ್ಟಡ ನಿರ್ಮಾಣ, ನಕ್ಷೆ ಅನುಮೋದನೆ ಮತ್ತು ಪರವಾನಿಗೆ ಪಡೆಯಲು ಸಹಕಾರಿಯಾಗಲಿದೆ.

ಮೇಲ್ದರ್ಜೆಗೇರಿಸುವ ಮುನ್ನ ಗ್ರಾಪಂಗಳಲ್ಲಿ ಕ್ರಮಬದ್ಧ ಆಸ್ತಿ (9, 11ಎ) ಕ್ರಮಬದ್ಧವಲ್ಲದ ಆಸ್ತಿ (9, 11ಬಿ) ಎಂದು ವರ್ಗೀಕರಿಸಿ ಖಾತೆ ವಿತರಿಸಲಾಗುತ್ತಿತ್ತು. ಆದರೆ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಂದ ನಂತರ ಖಾತೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಪ.ಪಂ ಹಾಗೂ ನಗರಸಭೆ ವ್ಯಾಪ್ತಿಯ ಭೂ ಪರಿವರ್ತನೆ ಅನುಮೋದನೆ ಯಾಗದೆ ಬಡಾವಣೆ ನಿರ್ಮಾಣ ಹಾಗೂ ಮೂಲ ಸೌಲಭ್ಯ ಗಳನ್ನು ಕಲ್ಪಿಸದ ರೆವಿನ್ಯೂ ಬಡಾವಣೆಯ ಆಸ್ತಿಗಳಿಗೆ (ನಮೂನೆ-3) ಖಾತೆ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮ ಜಾರಿಗೆ ಬಂದ ನಂತರ ಅನಧಿಕೃತ ಆಸ್ತಿಗಳಿಗೆ ತೆರಿಗೆ, ಒಂದು ಪಟ್ಟು ದಂಡ ಪಾವತಿಸಿ ಭೂ ಪರಿವರ್ತನೆ ಮಾಡಿಸಿಕೊಂಡ ಬಳಿಕ ಅಧಿಕೃತ ದಾಖಲೆ ಅವರ ಕೈ ಸೇರಲಿದೆ. ಖಾತೆ ಮಾಡಿಸಿಕೊಳ್ಳಲು ಯಾರೂ ಏಜೆಂಟರ ಮೊರೆ ಹೋಗ ಬಾರದು. ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ, ಖಾತೆಗೆ ಅರ್ಜಿ ಸಲ್ಲಿಸಬಹುದು. ಮಧ್ಯವರ್ತಿಗಳ ಹಾವಳಿಯಿಂದ ಅಮಾಯಕರ ಶೋಷಣೆ ತಪ್ಪಿಸಲು ಈ ಹೊಸ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅದಾಲತ್ ಮಾಡಿ, ಖಾತೆ ಮಾಡಿಕೊಡುವ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ಆಧಾರ್ ಕಾರ್ಡ್ ಇದ್ದರೆ ಕುಡಿಯುವ ನೀರು ಪೂರೈಕೆ: ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಹಲವು ಗ್ರಾಮಗಳಿಗೆ ಕಬಿನಿ ಯಿಂದ ಶುದ್ಧ ಕುಡಿಯುವ ನೀರು ಪೂರೈಸಲು ಈ ಹಿಂದೆಯೇ ಉದ್ದೇಶಿಸಲಾಗಿತ್ತು. ಅದಕ್ಕಾಗಿ ಹಳೆ ಉಂಡುವಾಡಿ ಯೋಜನೆ ಯನ್ನೂ ಅನುಷ್ಠಾನಗೊಳಿಸಲಾಗಿತ್ತು. ಆದರೆ ಮತದಾರರ ಗುರುತಿನ ಚೀಟಿ ಸೇರಿದಂತೆ ಇನ್ನಿತರ ದಾಖಲೆ ಇದ್ದವರಿಗೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡುವ ನಿರ್ಬಂಧ ಹೇರಲಾಗಿತ್ತು. ಇದರಿಂದ ದಾಖಲೆ ಹೊಂದಿಲ್ಲದವರಿಗೆ ನೀರು ಪೂರೈಸುತ್ತಿರಲಿಲ್ಲ. ಈಗ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಆಧಾರ್ ಕಾರ್ಡ್ ಇದ್ದರೆ ನೀರಿನ ಸರಬರಾಜು ಮಾಡಲು ಸೂಚಿಸಲಾಗಿದೆ. ಇದರೊಂದಿಗೆ ನಿಗಧಿತ ಅರ್ಜಿ ಸಮೂನೆ ಭರ್ತಿ ಮಾಡಿಕೊಡುವಂತೆ ಸರ್ಕಾರ ನಿರ್ದೇಶಿಸಿದೆ ಎಂದರು.

203.53 ಕೋಟಿ ಬಿಡುಗಡೆ: ಚಾಮುಂಡೇಶ್ವರಿ ಕ್ಷೇತ್ರದ ಹೂಟ ಗಳ್ಳಿ ನಗರಸಭೆ, ಬೋಗಾದಿ, ರಮ್ಮನಹಳ್ಳಿ, ಶ್ರೀರಾಂಪುರ, ಕಡಕೊಳ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಈಗಾಗಲೇ 203,53 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಎಸ್‍ಎಫ್‍ಸಿ ಯೋಜನೆಯಲ್ಲಿ 909.5 ಕೋಟಿ ರೂ, 15ನೇ ಹಣಕಾಸು ಯೋಜನೆಯಲ್ಲಿ 944 ಕೋಟಿ ರೂ., ನಗರೋತ್ಥಾನ ಯೋಜನೆಯಡಿ 5000 ಕೋಟಿ ರೂ., ಅಮೃತ್ 2.0 ಯೋಜನೆಯಡಿ 135 ಕೋಟಿ ರೂ. ಸೇರಿದೆ ಎಂದು ತಿಳಿಸಿದರು.

550 ಮನೆ ಮಂಜೂರು: ಹೊಸದಾಗಿ ಉದಯಿಸಿದ ಐದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಸಾಮಾನ್ಯ ಜನರಿಗೆ 363 ಮನೆ, ಪರಿಶಿಷ್ಟ ಜಾತಿಗೆ 99, ಪರಿಶಿಷ್ಟ ಪಂಗಡಕ್ಕೆ 33, ಹಿಂದುಳಿದ ವರ್ಗಕ್ಕೆ 55 ಮನೆ ಸೇರಿದಂತೆ 550 ಮನೆ ಮಂಜೂರಾಗಿದೆ. ಈ ಮನೆಗಳನ್ನು ಫಲಾನು ಭವಿಗಳಿಗೆ ಹಂಚಿಕೆ ಮಾಡಲಾಗಿದ್ದು, ಮನೆಗಳು ನಿರ್ಮಾಣ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲಾಗಿದ್ದು, ಮನೆ ಮನೆ ಕಸ ಸಂಗ್ರಹಣೆಗಾಗಿ 39 ಆಟೋ ಟಿಪ್ಪರ್‍ಗಳು, 8 ಟ್ಯಾಕ್ಟರ್, 2 ಜೆಸಿಬಿ, 2 ಜಟ್ಟಿಂಗ್ ಯಂತ್ರಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

Translate »