ಉಕ್ರೇನ್‍ನ ಕನ್ನಡಿಗರ ರಕ್ಷಣೆಗೆ ಸರ್ಕಾರದಿಂದ ಅಗತ್ಯ ಎಲ್ಲಾ ಕ್ರಮ: ಸಚಿವ ಎಸ್‍ಟಿಎಸ್
ಮೈಸೂರು

ಉಕ್ರೇನ್‍ನ ಕನ್ನಡಿಗರ ರಕ್ಷಣೆಗೆ ಸರ್ಕಾರದಿಂದ ಅಗತ್ಯ ಎಲ್ಲಾ ಕ್ರಮ: ಸಚಿವ ಎಸ್‍ಟಿಎಸ್

March 3, 2022

ಮೈಸೂರು,ಮಾ.2(ಎಂಟಿವೈ)-ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಎಷ್ಟು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿದ್ದಾರೆ ಎಂಬ ಮಾಹಿತಿ ಕಲೆ ಹಾಕು ವಂತೆ ಸೂಚಿಸಿದ್ದೆ. ಜಿಲ್ಲಾಧಿಕಾರಿಗಳು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಉಕ್ರೇನ್ ನಲ್ಲಿ ಮೈಸೂರಿನ 28 ವಿದ್ಯಾರ್ಥಿಗಳಿರುವ ಮಾಹಿತಿ ಇದೆ. ಜಿಲ್ಲಾಡಳಿತದಿಂದ ವಿದ್ಯಾರ್ಥಿಗಳ ಪೋಷಕರ ಮನೆಗೆ ಮಾಹಿತಿ ನೀಡುವುದು ಹಾಗೂ ಉಕ್ರೇನ್‍ನಲ್ಲಿನ ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಏನೆಲ್ಲಾ ಕ್ರಮ ಕೈಗೊಳ್ಳಬೇಕೋ, ಅದನ್ನೆಲ್ಲಾ ಕೈಗೊಳ್ಳಲಾಗಿದೆ ಎಂದರು. ರಷ್ಯಾ ನಡೆಸಿದ ದಾಳಿ ಯಲ್ಲಿ ಮೃತಪಟ್ಟ ಕನ್ನಡಿಗ ನವೀನ್ ನಂಜನಗೂಡಲ್ಲಿ ಓದಿರುವುದಾಗಿ ತಿಳಿದು ಬಂದಿದೆ. ಈ ಘಟನೆ ದುರಾದೃಷ್ಟಕರ, ಇದು ಆಗಬಾರದಿತ್ತು ಎಂದು ವಿಷಾದಿಸಿದರು.

Translate »