ಮೈಸೂರು, ಮಂಡ್ಯ, ಚಾ.ನಗರ ಸೇರಿ ರಾಜ್ಯಾದ್ಯಂತ ‘ಧಮ್ಮ ಜಾಗೃತಿ ಅಭಿಯಾನ’
ಮೈಸೂರು

ಮೈಸೂರು, ಮಂಡ್ಯ, ಚಾ.ನಗರ ಸೇರಿ ರಾಜ್ಯಾದ್ಯಂತ ‘ಧಮ್ಮ ಜಾಗೃತಿ ಅಭಿಯಾನ’

January 11, 2021

ಮೈಸೂರು, ಜ.10(ಎಂಕೆ)- ವಿಶ್ವ ಬುದ್ಧ ಧಮ್ಮ ಸಂಘದ ವತಿಯಿಂದ ಜ.24 ರಿಂದ ಮೈಸೂರು, ಮಂಡ್ಯ, ಚಾ.ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಧಮ್ಮ ಜಾಗೃತಿ ಅಭಿಮಾನ’ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮತಾ ಸೈನಿಕ ದಳ, ದಲಿತ ಸಂಘ ಟನೆಗಳ ಒಕ್ಕೂಟ, ವಿಶ್ವ ಬುದ್ಧ ಧಮ್ಮ ಸಂಘ, ಬುದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾ ಸಹಕಾರದೊಂದಿಗೆ ಮೈಸೂರಿನಲ್ಲಿ ಜ.24 ರಂದು ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ. ನಂತರ ಜ.31ರಂದು ಮಂಡ್ಯ, ಫೆ.7ರಂದು ಚಾ.ನಗರ, ಫೆ.21ರಂದು ಹುಬ್ಬಳ್ಳಿ, ಫೆ.28ರಂದು ಗುಲ್ಬರ್ಗ ಜಿಲ್ಲೆಯ ಷಾಹಪುರದಲ್ಲಿ ಧಮ್ಮ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಾಗೃತಿ ಅಭಿಯಾನದ ನಂತರ ಅ.14 ರಂದು ಬೆಂಗಳೂರಿನ ಅರಮನೆ ಮೈದಾನ ದಲ್ಲಿ ರಾಷ್ಟಮಟ್ಟದ ಮಹಾ ಧಮ್ಮ ದೀಕ್ಷಾ ಸಮ್ಮೇಳನ ನಡೆಯಲಿದ್ದು, ಸುಮಾರು 10 ಲಕ್ಷ ಜನರು ದೀಕ್ಷೆ ಪಡೆದುಕೊಳ್ಳಲಿದ್ದಾರೆ. 1956ರ ಅ.14ರಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು, ನಾಗಪುರದಲ್ಲಿ ಮಹಾ ಧಮ್ಮ ದೀಕ್ಷಾ ಕಾರ್ಯಕ್ರಮವನ್ನು ನಡೆಸಿದ್ದರು. ಇಂದಿಗೆ 65 ವರ್ಷಗಳಾಗಿದೆ. ಅಂದು 5 ಲಕ್ಷ ಮಂದಿ ದೀಕ್ಷೆ ಪಡೆದಿದ್ದರು. ಅದರಂತೆ ಇದೀಗ 10 ಲಕ್ಷ ಜನರು ಧಮ್ಮ ದೀಕ್ಷೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್, ದಲಿತ ಸಂಘಟನೆಗಳ ಒಕ್ಕೂಟದ ಪಿಳ್ಳೆರಾಜು ಭೋಸಪ್ಪ, ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ಡಿ.ಶಿವಮಾದು, ನಗರಾಧ್ಯಕ್ಷ ಎನ್.ವೆಂಕಟೇಶ್, ಎಸ್.ಅಮೃತ್, ಎಂ.ಮುರಳೀಧರ್, ಚಿಕ್ಕನಂಜು, ಕೃಷ್ಣ ಉಪಸ್ಥಿತರಿದ್ದರು.

 

 

Translate »