ಜನವರಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಪರೀಕ್ಷೆ ಉಚಿತ
ಮೈಸೂರು

ಜನವರಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಪರೀಕ್ಷೆ ಉಚಿತ

November 22, 2020

ಬೆಳಗಾವಿ,ನ.21- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡನ್ನೂ ಒಂದೇ ಇಲಾಖೆ ಯಾಗಿಸುವ ಚಿಂತನೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನ ವರಿಯಿಂದಲೇ ಎಲ್ಲ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದರು.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸ ಆಕ್ಸಿಜನ್ ಘಟಕ, 200 ಹಾಸಿಗೆಗಳ ನೇತ್ರ, ಇಎನ್‍ಟಿ ವಾರ್ಡ್, 90 ಹಾಸಿಗೆಗಳ ಮಕ್ಕಳ ವಾರ್ಡ್ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಈ ಎರಡೂ ಇಲಾಖೆಗಳು ಒಂದೇ ನಿರ್ವಹಣೆಯಲ್ಲಿರಬೇಕು ಎಂಬ ಕಾರಣಕ್ಕೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡೂ ಇಲಾಖೆ ಗಳ ಹೊಣೆಯನ್ನು ನನಗೆ ನೀಡಿದ್ದಾರೆ. ಇದರಿಂದ ಆರೋಗ್ಯ ಕ್ಷೇತ್ರದ ನಿರ್ವಹಣೆ ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಎರಡನ್ನೂ ಒಂದೇ ಇಲಾಖೆಯಾಗಿಸುವ ಚಿಂತನೆ ಇದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಬಗೆಯ ಪರೀಕ್ಷೆಗಳನ್ನು ಜನ ವರಿಯಿಂದಲೇ ಉಚಿತ ಮಾಡಲಾಗುವುದು ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ, ವಾರ್ಡ್ ಸ್ವಚ್ಛವಿಲ್ಲ ಎಂಬ ಆಪಾದನೆ ಇದೆ. ಬೆಳಗಾವಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ತಿಂಗಳಿಗೆ 36 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಸ್ವಚ್ಛವಿಲ್ಲ ಎಂದರೆ ನೋವಾಗುತ್ತದೆ. ಖಾಸಗಿಗಿಂತ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಖರ್ಚು ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗೆ ಸಿಗುವ ಸೌಲಭ್ಯ ಹಾಗೂ ಅವರು ಮಾಡುವ ಸೇವೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲೂ ದೊರೆಯಬೇಕು. ಎಲ್ಲರೂ ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಲಸಿಕೆ ವಿತರಣೆಗೆ ಸಿದ್ಧತೆ: ಕೋವಿಡ್ ಲಸಿಕೆ ಬಂದ ನಂತರ ವಿತರಣೆಯಲ್ಲಿ ತೊಂದರೆ ಆಗಬಾರದೆಂದು ಈಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ವಿತರಿಸಲಾಗುವುದು. ಲಸಿಕೆ ಸಂಗ್ರಹಣೆಗೆ ಎಲ್ಲ ಜಿಲ್ಲೆ ಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ವೈದ್ಯಾಧಿಕಾರಿಗಳು ವಾರದಲ್ಲಿ ಒಂದೆರಡು ದಿನ ಪ್ರವಾಸ ಮಾಡಿ, ಸ್ಥಳೀಯ ಸರ್ಕಾರಿ ಆರೋಗ್ಯ ಸೇವೆಯಲ್ಲಿನ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಜನಸಂಖ್ಯೆಗೆ ತಕ್ಕಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುವುದು. ಕೋವಿಡ್ ನಿಯಂತ್ರಣದಲ್ಲಿ ಬೆಳಗಾವಿ ಮಾದರಿ. ಈ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೊಳಗಾದವರಲ್ಲಿ 97%ರಷ್ಟು ಮಂದಿ ಗುಣಮುಖರಾಗಿದ್ದಾರೆ. 2 ಲಕ್ಷ ಜನರಿಗೆ ಪರೀಕ್ಷೆ ಮಾಡಲಾಗಿದೆ. ಕೋವಿಡ್ ಮರಣ ಪ್ರಮಾಣ 0.8% ರಷ್ಟಿದೆ ಎಂದು ಇದೇವೇಳೆ ಡಾ.ಸುಧಾಕರ್ ವಿವರಣೆ ನೀಡಿದರು.

ಪ್ರತಿ ಹಳ್ಳಿಯಲ್ಲಿ ಜನೌಷಧ ಮಳಿಗೆ

ವಿಜಯಪುರ: ಗ್ರಾಮೀಣ ಪ್ರದೇಶದ ಜನಾರೋಗ್ಯದ ಸಲುವಾಗಿ ಪ್ರತಿಹಳ್ಳಿಯಲ್ಲಿ ಜನೌಷಧ ಮಳಿಗೆ ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಹಕಾರ ಇಲಾಖೆ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ಹೇಳಿದ್ದಾರೆ. ವಿಜಯಪುರ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಜರುಗಿದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಆದ್ಯತೆ ಮೇರೆಗೆ ಜನೌಷಧ ಮಳಿಗೆಗಳನ್ನು ಆರಂಭಿಸಿ ಅವರಿಗೆ ಕಡಿಮೆ ದರದಲ್ಲಿ ಔಷಧ ಪಡೆಯುವ ಸೌಲಭ್ಯವನ್ನು ಇಲಾಖೆ ಶೀಘ್ರದಲ್ಲಿಯೇ ರೂಪಿಸಿ ಅನುಷ್ಠಾನಗೊಳಿಸಲಿದೆ. ಗ್ರಾಮೀಣ ಜನತೆಗೆ ಈ ಜನೌಷಧ ಮಳಿಗೆಗಳು ವರ ದಾನವಾಗಲಿವೆ ಎಂದರು. ಇದೀಗ ಕರ್ನಾಟಕ ರಾಜ್ಯವು ಸಹಕಾರ ರಂಗದಲ್ಲಿ ನಂ.1 ಸ್ಥಾನದಲ್ಲಿದೆ. ರಾಷ್ಟ್ರಮಟ್ಟ ದಲ್ಲಿ ಸಹಕಾರ ಸಂಘಗಳ ಸಾಧನೆಯ ವಿಷಯ ಬಂದಾಗ ಕರ್ನಾಟಕದ ಸ್ಥಾನ ಅಗ್ರಗಣ್ಯವಾಗಿದೆ ಎಂದರು.

Translate »