ಪ್ರಧಾನಿ ಮೋದಿ ನಾಯಕತ್ವ ದೊರೆತಿರುವುದು ಭಾರತೀಯರ ಪುಣ್ಯ: ಸಚಿವ ಸುಧಾಕರ್
ಮೈಸೂರು

ಪ್ರಧಾನಿ ಮೋದಿ ನಾಯಕತ್ವ ದೊರೆತಿರುವುದು ಭಾರತೀಯರ ಪುಣ್ಯ: ಸಚಿವ ಸುಧಾಕರ್

June 8, 2020

ಚಿಕ್ಕಬಳ್ಳಾಪುರ, ಜೂ.7- ಕೊರೊನಾ ತಂದೊಡ್ಡಿರುವ ಈ ಸಂಕಷ್ಟ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ದೊರೆತಿರುವುದು ಭಾರತೀಯರ ಪುಣ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಬಣ್ಣಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುವ ಸಮರ್ಥ ನಾಯಕತ್ವವನ್ನು ಮೋದಿ ದೇಶಕ್ಕೆ ನೀಡಿದ್ದಾರೆ ಎಂದು ನಗರದ ಒಕ್ಕಲಿಗರ ಭವನದಲ್ಲಿ ನಡೆದ ಕೊರೋನಾ ಯೋಧರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಎಂತಹ ವೈರಾಣು ಬಂದರೂ ಅದನ್ನು ಹಿಮ್ಮೆಟ್ಟಿಸಬಹುದು. ಅಂತಹ ಒಗ್ಗಟ್ಟನ್ನು ದೇಶ ಪ್ರದರ್ಶಿಸಿದೆ. ಅದಕ್ಕೆ ಮೋದಿಯವರ ಸಮರ್ಥ ನಾಯಕತ್ವ ಕಾರಣ. ಸತತವಾಗಿ ಎಲ್ಲ ರಾಜ್ಯಗಳ ಜೊತೆ ವೀಡಿಯೊ ಸಂವಾದದ ಮೂಲಕ ಮಾಹಿತಿ ತಿಳಿದು ಕೊಂಡು ಸೂಕ್ತ ಮಾರ್ಗ ಸೂಚಿಗಳನ್ನು ನೀಡಿದರು. ನಾನು ಸಹ 4 ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ ಅವರ ತಾಳ್ಮೆ ಮತ್ತು ಜಾಣ್ಮೆಯ ನಡೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಸರ್ಕಾರದ ಜೊತೆಗೆ ಆಡಳಿತಶಾಹಿ ಕೈಜೋಡಿಸಿದಾಗ ಮಾತ್ರ ಯಾವುದೇ ನಿರ್ಧಾರಗಳ ಯಶಸ್ವಿ ಅನುಷ್ಠಾನ ಸಾಧ್ಯವಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು.

ಜಿಲ್ಲಾಡಳಿತದ ಪರಿಶ್ರಮದಿಂದಲೇ ಕೊರೊನಾ ನಿಯಂತ್ರಣ ಸಾಧ್ಯವಾಗಿದೆ ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಶ್ರಮವನ್ನು ಮೆಚ್ಚಿ ಸಾರ್ವಜನಿಕರು ಅವರನ್ನು ಸನ್ಮಾನಿಸುತ್ತಿರುವುದು ವಿನೂತನವಾದ ಕಾರ್ಯಕ್ರಮ ಇದು ನನ್ನಲ್ಲಿ ಹೆಮ್ಮೆ ಮೂಡಿಸಿದೆ ಎಂದರು.

ಮುಂದಿನ ದಿನಗಳಲ್ಲಿ ಸಾರ್ವಜನಿಕರು ಸರ್ಕಾರದ ಸೂಚನೆಗಳ ಪ್ರಕಾರ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಮಾಸ್ಕ್ ಧರಿಸುವುದು, ಶುಚಿತ್ವ ಕಾಯ್ದುಕೊಳ್ಳುವುದು, ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವ ಡಾ.ಸುಧಾಕರ್ ಸಲಹೆ ನೀಡಿದರು.

Translate »