ಮುಡಾದಲ್ಲಿ ನಿವೇಶನಗಳ `ಗೋಲ್‍ಮಾಲ್’: ಎಸಿಬಿ ತನಿಖೆ
ಮೈಸೂರು

ಮುಡಾದಲ್ಲಿ ನಿವೇಶನಗಳ `ಗೋಲ್‍ಮಾಲ್’: ಎಸಿಬಿ ತನಿಖೆ

November 22, 2020

ಮೈಸೂರು, ನ.21(ಆರ್‍ಕೆ)-ಮುಡಾಗೆ ನಿವೇಶನ ಮರಳಿಸಿದ್ದರೂ, ನಿವೃತ್ತ ಐಎಫ್‍ಎಸ್ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಅಧಿಕಾರಿ ಪತ್ನಿಗೆ ಮತ್ತೆ ಸುಮಾರು ಮೂರೂವರೆ ಕೋಟಿ ರೂ. ಬೆಲೆಬಾಳುವ ಸದರಿ ನಿವೇ ಶನದ ಕ್ರಯಪತ್ರ ನೀಡಿರುವುದೂ ಸೇರಿದಂತೆ ಮುಡಾ ದಿಂದ ಮಂಜೂರಾಗಿದ್ದ ಏಳು ನಿವೇಶನಗಳನ್ನು ಒಂದೇ ದಿನ ಪ್ರಾಧಿಕಾರ ವಶಕ್ಕೆ ತೆಗೆದುಕೊಂಡಿರುವ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

ಮುಡಾ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಿವೃತ್ತ ಐಎಫ್‍ಎಸ್ ಅಧಿಕಾರಿ ನಾಗರಾಜು ಅವರಿಗೆ ಮೈಸೂರಿನ ವಿಜಯನಗರ 4ನೇ ಹಂತ, 2ನೇ ಫೇಸ್‍ನಲ್ಲಿ 1994ರ ಸೆಪ್ಟೆಂಬರ್ 8ರಂದು ಮಂಜೂರಾಗಿದ್ದ ನಿವೇಶನ ಸಂಖ್ಯೆ 3165 ಅನ್ನು ಮಂಜೂರಾತಿದಾರರೇ ರದ್ದು ಪಡಿಸಿ ಎಂದು ಮನವಿ ಮಾಡಿದ್ದರೂ ಕ್ರಮ ವಹಿಸದೇ ಅಧಿಕಾರಿಗಳು ಲೋಪವೆಸಗಿದ್ದಾರೆ ಎಂದರು.

ನಾಗರಾಜು ಅವರ ನಿಧನದ ನಂತರ ಅವರ ಪತ್ನಿ ಶಶಿಕಲಾ ಹಾಗೂ ಪುತ್ರ ಸಮರ್ಥ್ ಹೆಸರಿಗೆ ನಿವೇ ಶನದ ಪೌತಿ ಖಾತೆ ಮತ್ತು ಕ್ರಯಪತ್ರ ಕೋರಿದ ಮನವಿ ಮೇರೆಗೆ ಆತುರಾತುರವಾಗಿ 2020ರ ಸೆಪ್ಟೆಂಬರ್ 21ರಂದು ಪೌತಿ ಖಾತೆ ಮಾಡಿ, ಅದೇ ದಿನ ಸದರಿ ನಿವೇಶನದ ಕ್ರಯಪತ್ರ ಕೊಟ್ಟಿರುವುದು ತಡವಾಗಿ ನನ್ನ ಗಮನಕ್ಕೆ ಬಂತು ಎಂದು ರಾಜೀವ್ ತಿಳಿಸಿದರು.

ಅನುಮಾನ ಬಂದು ಸದರಿ ಕಡತವನ್ನು ತರಿಸಿ ಕೊಂಡು ನೋಡಿದಾಗ ಅದರಲ್ಲಿ ಟಿಪ್ಪಣಿ ಹಾಳೆಗಳು ಕಾಣೆಯಾಗಿರುವುದು, ಅಕ್ರಮವಾಗಿ ಪೌತಿ ಖಾತೆ ಮತ್ತು ಟೈಟಲ್ ಡೀಡ್ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ತಾವು ಆಯುಕ್ತರಿಗೆ ನೋಟ್ ಹಾಕಿ, ಸದರಿ ನಿವೇಶನದ ಪೌತಿ ಖಾತೆ ಮತ್ತು ಕ್ರಯಪತ್ರವನ್ನು ರದ್ದುಪಡಿಸಿ ಅನುಪಾಲನಾ ವರದಿ ನೀಡುವಂತೆ ಆದೇಶ ನೀಡಿದ ಕಾರಣ ಶಶಿಕಲಾ ಅವರಿಂದ ನಿವೇಶನವನ್ನು ಹಿಂಪಡೆಯಲಾಗಿದೆ ಎಂದು ರಾಜೀವ್ ತಿಳಿಸಿದರು. ಕಡತದಲ್ಲಿ ಟಿಪ್ಪಣಿ ಹಾಳೆಗಳು ನಾಪತ್ತೆಯಾ ಗಿರುವುದು, ನಾಗರಾಜು ಅವರ ಹಂಚಿಕೆ ರದ್ದು ಮಾಡಿ ಎಂದು ಮನವಿ ನೀಡಿದರೂ, ಅದನ್ನು ಕಡತದಲ್ಲಿ ನಮೂದಿಸದೆ, ಒಂದೇ ದಿನದಲ್ಲಿ ಪೌತಿ ಖಾತೆ, ಕ್ರಯಪತ್ರ ಮಾಡಿಕೊಟ್ಟಿರುವುದೂ ಸೇರಿದಂತೆ ಈ ನಿವೇಶನ ಸಂಬಂಧ ನಡೆದಿರುವ ಅಕ್ರಮಗಳಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಲು ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಎರಡು ದಿನದೊಳಗಾಗಿ ಒಪ್ಪಿಸಲಾಗುವುದು ಎಂದು ತಿಳಿಸಿದರು.

ಅದೇ ರೀತಿ ಒಂದೇ ದಿನ 7 ನಿವೇಶನಗಳನ್ನು ಪ್ರಾಧಿಕಾರ ವಾಪಸ್ ಪಡೆದಿದ್ದು, ಇದರಲ್ಲಿಯೂ ನಡೆದಿರಬಹುದಾದ `ಗೋಲ್‍ಮಾಲ್’ ಬಯಲಿಗೆಳೆಯಲು ಎಸಿಬಿಯಿಂದ ತನಿಖೆ ಮಾಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಬದಲಿ ನಿವೇಶನ ಹಾಗೂ ತುಂಡು ಜಾಗ (ಬಿಟ್ ಆಫ್ ಲ್ಯಾಂಡ್) ಮಂಜೂ ರಾತಿಯಲ್ಲಿ ಕಳೆದ 10 ವರ್ಷಗಳಿಂದ ನಡೆದಿರುವ ಅಕ್ರಮಗಳನ್ನು ತನಿಖೆಗೊಳಪಡಿಸಿ ಅದರಲ್ಲಿ ಯಾವ್ಯಾವ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದಾರೆಂಬ ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವುದಾಗಿಯೂ ರಾಜೀವ್ ತಿಳಿಸಿದರು.

ನಿವೇಶನಗಳ ಪಕ್ಕದಲ್ಲಿ ಉಳಿದಿರುವ ಜಾಗದ ವಿಸ್ತೀರ್ಣ ಹೆಚ್ಚಾಗಿದ್ದರೂ, ತುಂಡು ಜಾಗ ಎಂದು ನೋಟ್ ಬರೆದು ಪಕ್ಕದ ನಿವೇಶನದಾರನಿಗೇ ಹಂಚಿಕೆ ಮಾಡಿರುವುದು, ವಾಸಕ್ಕೆ ಯೋಗ್ಯವಿದ್ದರೂ, ತಪ್ಪು ಮಾಹಿತಿ ನೀಡಿ ಹಂಚಿಕೆಯಾದ ನಿವೇಶನಕ್ಕಿಂತ ಹೆಚ್ಚು ಬೆಲೆಬಾಳುವ ನಿವೇಶನವನ್ನು ಪ್ರತಿಷ್ಠಿತ ಬಡಾವಣೆಯಲ್ಲಿ ಬದಲಿ ನಿವೇಶನ (Change of Site) ಮಂಜೂರು ಮಾಡಿರುವ ಹಲವು ಪ್ರಕರಣಗಳು ಮುಡಾದಲ್ಲಿ ನಡೆದಿರುವು ದರಿಂದ ಎಸಿಬಿ ಪೊಲೀಸರಿಂದ ತನಿಖೆ ಮಾಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

Translate »