ವಾರಾಂತ್ಯ ಕಫ್ರ್ಯೂನ ಎರಡನೇ ದಿನವೂ ಮಾರುಕಟ್ಟೆಗಳಲ್ಲಿ ಗ್ರಾಹಕರಿಲ್ಲದೆ ಮಂಕಾದ ವ್ಯಾಪಾರಸ್ಥರು
ಮೈಸೂರು

ವಾರಾಂತ್ಯ ಕಫ್ರ್ಯೂನ ಎರಡನೇ ದಿನವೂ ಮಾರುಕಟ್ಟೆಗಳಲ್ಲಿ ಗ್ರಾಹಕರಿಲ್ಲದೆ ಮಂಕಾದ ವ್ಯಾಪಾರಸ್ಥರು

January 10, 2022

ಮೈಸೂರು,ಜ.9(ಪಿಎಂ)- ಕೋವಿಡ್ ವಾರಾಂತ್ಯ ಕಫ್ರ್ಯೂನ ಎರಡನೇ ದಿನ ವಾದ ಭಾನುವಾರವೂ ದೇವರಾಜ, ಮಂಡಿ ಹಾಗೂ ವಾಣಿವಿಲಾಸ ಮಾರುಕಟ್ಟೆಗಳಲ್ಲಿ ಗ್ರಾಹಕರು ಅತಿ ವಿರಳವಾಗಿದ್ದ ಹಿನ್ನೆಲೆ ವ್ಯಾಪಾರಸ್ಥರು ನಿರಾಸೆಗೊಂಡಿದ್ದರಲ್ಲದೆ, ಹಲವರು ಮಳಿಗೆ ಬಾಗಿಲು ಮುಚ್ಚಿ ಮನೆಗೆ ತೆರಳಿದರು.

ಅನುಮತಿ ಇದ್ದ ಹಿನ್ನೆಲೆಯಲ್ಲಿ ಮಾರು ಕಟ್ಟೆಗಳಲ್ಲಿ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆದಾರರು ಬಾಗಿಲು ತೆಗೆದು ಕಾದು ಕುಳಿತರೂ ಗ್ರಾಹಕರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಆಗಮಿ ಸಿದ್ದರು. ಹೀಗಾಗಿ ಹಲವು ಮಳಿಗೆದಾ ರರು ಕೆಲ ಸಮಯದ ಬಳಿಕ ಮಳಿಗೆ ಬಾಗಿಲು ಮುಚ್ಚಿ ಮನೆಯತ್ತ ಹೆಜ್ಜೆ ಹಾಕಿದರು.

ಮೈಸೂರು ನಗರದ ಹೃದಯ ಭಾಗದಲ್ಲಿ ರುವ ದೇವರಾಜ ಮಾರುಕಟ್ಟೆ ಸೇರಿದಂತೆ ಮಂಡಿ ಮತ್ತು ವಾಣಿವಿಲಾಸ ಮಾರುಕಟ್ಟೆಗಳಲ್ಲಿ ಇಂತಹ ಪರಿಸ್ಥಿತಿ ಇಂದು ಕಂಡು ಬಂದಿತು. ಇನ್ನು ವಿವಿಧ ಬಡಾವಣೆಗಳಲ್ಲಿ ಅಗತ್ಯ ವಸ್ತುಗಳ ವಹಿವಾಟು ತುಸು ಚುರುಕಾಗಿತ್ತಾದರೂ ಎಂದಿನಂತೆ ಗ್ರಾಹಕರು ಕಂಡು ಬರಲಿಲ್ಲ. ನಗರದ ಈ ಪ್ರಮುಖ ಮೂರು ಮಾರುಕಟ್ಟೆ ಗಳಂತೂ ಗ್ರಾಹಕರಿಲ್ಲದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಅತೀವ ಬೇಸರಗೊಂಡಿದ್ದರು.
ನಿನ್ನೆಯಂತೆಯೇ ಇಂದು ವ್ಯಾಪಾರ ಮಂಕು. ಸರ್ಕಾರಕ್ಕೆ ನಮ್ಮಂತಹವರ ಬಗ್ಗೆ ಕಳಕಳಿ ಇಲ್ಲ. ನಾವು ಅನುಭವಿಸುವ ನೋವು ಅವರಿಗೆ ಗೊತ್ತಾಗಲ್ಲ. ನಮ್ಮ ಹೊಟ್ಟೆಪಾಡು ಬಗ್ಗೆ ಸರ್ಕಾರಕ್ಕೆ ಚಿಂತನೆಯೇ ಇಲ್ಲ. ಬಡವರು, ಮಧ್ಯಮ ವರ್ಗದವರ ಬದುಕಿನ ಬಗ್ಗೆ ಕಿಂಚಿತ್ತೂ ಸರ್ಕಾರ ಯೋಚಿಸುತ್ತಿಲ್ಲ ಎಂದು ವ್ಯಾಪಾರಸ್ಥರು ಕಿಡಿಕಾರಿದರು.

ನಾವು ಕಾಲ ದೂಡುವವರಲ್ಲ, ದುಡಿ ಯುವವರು: ಗ್ರಾಹಕರಿಲ್ಲದ ಮೇಲೆ ಇಲ್ಲಿ ಏನು ಮಾಡುವುದು? ಮಳಿಗೆ ಮುಚ್ಚಿ ಮನೆಗೆ ಹೋಗುತ್ತೇವೆ. ಈಗಾಗಲೇ ಹಲವರು ಮಳಿಗೆ ಬಾಗಿಲು ಮುಚ್ಚಿ ಹೋಗಿದ್ದಾರೆ. ಜನತೆಗೆ ಎದುರಾಗುವ ನೈಜ ಸಮಸ್ಯೆ ಗಳನ್ನು ಸರ್ಕಾರ ಅವಲೋಕಿಸುವುದೇ ಇಲ್ಲ. ಈ ರೀತಿ ಕಫ್ರ್ಯೂನಿಂದ ಎಷ್ಟೋ ಜನ ಹಸಿವಿನ ಯಾತನೆ ಅನುಭವಿಸಬೇಕಿದೆ. ಉಳ್ಳವರು ಹೇಗೋ ಜೀವನ ಮಾಡು ತ್ತಾರೆ. ಅವರಿಗೆ ಕಾಲ ದೂಡಿದರೆ ಸಾಕು. ಆದರೆ ನಮಗೆ ಕಾಲವೆಂದರೆ ದುಡಿಮೆ. ದುಡಿದರಷ್ಟೇ ನಮ್ಮ ಹೊಟ್ಟೆ, ಬಟ್ಟೆ, ಬದುಕು ಎಂದು ದೇವರಾಜ ಮಾರುಕಟ್ಟೆ ವ್ಯಾಪಾರಿಗಳು ಅಳಲು ತೋಡಿಕೊಂಡರು.

`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ದೇವರಾಜ ಮಾರುಕಟ್ಟೆ ಪ್ರಾವಿ ಷನ್ ಸ್ಟೋರ್ ಮಾಲೀಕ ಆನಂದಕುಮಾರ್, ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ. ಆದರೆ ಮಳಿಗೆ ಬಾಗಿಲು ತೆರೆದರೂ ಗ್ರಾಹಕರೇ ಇಲ್ಲವಾಗಿದ್ದಾರೆ. ಖಾಲಿ ಕ್ರಿಕೆಟ್ ಮೈದಾನದಂತೆ ದೇವರಾಜ ಮಾರುಕಟ್ಟೆ ಆವರಣ ಗೋಚರಿಸುತ್ತಿದೆ. ಇಂದು ಬೆಳಗ್ಗೆ 9.30ಕ್ಕೆ ಮಳಿಗೆ ಬಾಗಿಲು ತೆರೆದು ಗ್ರಾಹಕರಿಲ್ಲದ ಹಿನ್ನೆಲೆಯಲ್ಲಿ ಮಧ್ಯಾಹ್ನ 1.30ಕ್ಕೆ ಬಾಗಿಲು ಮುಚ್ಚಿ ಮನೆಗೆ ಬಂದೆ ಎಂದು ಬೇಸರ ವ್ಯಕ್ತ ಪಡಿಸಿದರು. ಕಳೆದ ಲಾಕ್‍ಡೌನ್ ಸಂದರ್ಭದಲ್ಲಿ ದೇವರಾಜ ಮಾರು ಕಟ್ಟೆಯನ್ನು ಎರಡು ತಿಂಗಳಿಗೂ ಹೆಚ್ಚು ಕಾಲ ಬಂದ್ ಮಾಡಿಸಿದ್ದರು. ಈ ವೇಳೆ ಮಳಿಗೆ ಹೊಂದಿದ್ದರೂ ನಮ್ಮ ಮನೆಗೆ ಬೇಕಿರುವ ಸಾಮಗ್ರಿಗಳನ್ನು ಹೊರಗಡೆ ಖರೀದಿ ಮಾಡಬೇಕಾಯಿತು. ಬಾಗಿಲು ತೆರೆಯಲು ಅವಕಾಶ ನೀಡಿದಾಗ, ಅಂದಾಜು ಲಕ್ಷ ರೂ. ಮೌಲ್ಯದ ಸುಮಾರು 15 ಕ್ವಿಂಟಾಲ್‍ನಷ್ಟು ಪದಾರ್ಥಗಳು ಹಾಳಾಗಿದ್ದವು. ಇದೇ ರೀತಿ ಸಮಸ್ಯೆ ಹಲವು ವ್ಯಾಪಾರಸ್ಥರಿಗೂ ಎದುರಾಗಿದೆ. ಈ ನಷ್ಟ ತುಂಬಿಕೊಡುವವರು ಯಾರು? ಎಂದು ಬೇಸರದಿಂದ ಪ್ರಶ್ನಿಸಿದರು.

Translate »