ಮೈಸೂರು,ಅ.18(ಆರ್‍ಕೆಬಿ)-ಮೈಸೂರಿನ ಶ್ರೀರಾಮ ಕೃಷ್ಣ ವಿದ್ಯಾಶಾಲೆಯ ಶಿಕ್ಷಕ, ಮುಖ್ಯೋಪಾಧ್ಯಾಯ, ಪ್ರಾಂಶುಪಾಲ ಮತ್ತು ಸಂಯೋಜಕರಾಗಿ 65 ವರ್ಷ ಗಳ ಅವಿತರ ಸೇವೆ ಸಲ್ಲಿಸಿದ ಬಿ.ಎಸ್.ಶ್ರೀಕಂಠಯ್ಯ ಅವರನ್ನು ಭಾನುವಾರ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಶ್ರದ್ಧಾಂ ಜಲಿ ಸಭೆಯಲ್ಲಿ ಸ್ಮರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಮಾತನಾಡಿ, ಬಿ.ಎಸ್.ಎಸ್ ಅವರು ಯಾವುದೇ ಕೆಲಸ ವಾಗಲಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಪ್ರತಿಯೊಂದನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದ ಅವರೊಬ್ಬ ಕರ್ಮಯೋಗಿ. ವಿದ್ಯಾಶಾಲೆಯ ಶಿಕ್ಷಕರಾಗಿ, ಪ್ರಾಂಶು ಪಾಲರಾಗಿದ್ದಲ್ಲದೆ ತೀವ್ರ ಆಸಕ್ತಿಯಿಂದ ತಮ್ಮನ್ನು ಸಮರ್ಪಿಸಿಕೊಂಡು ಕೆಲಸ ಮಾಡಿದ್ದರು ಎಂದರು.
ಬಿ.ಎಸ್.ಶ್ರೀಕಂಠಯ್ಯ ಅವರನ್ನು ನಾವಿಂದು ಕಳೆದು ಕೊಂಡಿದ್ದೇವೆ. ಆದರೆ ಶಿಸ್ತು, ಕಾರ್ಯಬದ್ಧತೆಯಿಂದ ವಿದ್ಯಾಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಅವರು ವಿದ್ಯಾ ಶಾಲೆಗೆ ನೀಡಿರುವ ರಚನಾತ್ಮಕ ಶಾಶ್ವತ ಕೊಡುಗೆ ಗಳನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ ಎಂದು ಸ್ಮರಿಸಿದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಆಶ್ರಮದ ಕರೆಸ್ಪಾಂಡೆಂಟ್ ಸ್ವಾಮಿ ಯುಕ್ತೇಶಾನಂದಜೀ ಮಾತ ನಾಡಿ, ಬಿ.ಎಸ್.ಶ್ರೀಕಂಠಯ್ಯ ಅವರು ತಮ್ಮ ಕೆಲಸಕ್ಕೆ ಘನತೆ ತಂದುಕೊಟ್ಟಿದ್ದರು. ಪ್ರತಿಯೊಂದು ಕೆಲಸವನ್ನು ಗಂಭೀರವಾಗಿ ಸಮರ್ಪಣಾ ಮನೋಭಾವದಿಂದ ನಿರ್ವಹಿಸುತ್ತಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ. ಸುಜಯ್‍ಕುಮಾರ್, ಕೀರ್ತಿಕುಮಾರ್, ಮಹೇಶ್ ಕುಮಾರ್ ಜಂಬಾಡ್ದಿ, ಡಾ.ರಾಜಶೇಖರ ಚಕ್ರವರ್ತಿ, ನಿವೃತ್ತ ಶಿಕ್ಷಕ ಕೆ.ಪಿ.ಅನಂತ ಪದ್ಮನಾಭ, ಶ್ರೀಕೃಷ್ಣ ಶಾಂತ ಕುಮಾರ್, ಹಿರಿಯ ವಕೀಲ ಜಿ.ಆರ್.ನಟರಾಜ್, ಎಂ.ಪಿ. ಶ್ಯಾಮ್ ಇನ್ನಿತರರು ಮಾತನಾಡಿ ಬಿ.ಎಸ್. ಶ್ರೀಕಂಠಯ್ಯರನ್ನು ಸ್ಮರಿಸಿಕೊಂಡರು. ಇದಕ್ಕೂ ಮುನ್ನ ಬಿ.ಎಸ್.ಶ್ರೀಕಂಠಯ್ಯ ಅವರ ಭಾವಚಿತ್ರಕ್ಕೆ ಸ್ವಾಮಿ ಮುಕ್ತಿದಾನಂದಜೀ ಮಹರಾಜ್ ಇನ್ನಿತರರು ಪುಷ್ಪ ನಮನ ಸಲ್ಲಿಸಿದರು. ಬಳಿಕ ಬಿ.ಎಸ್.ಶ್ರೀಕಂಠಯ್ಯ ಅವರ ಜೀವನ, ಸಾಧನೆ ಮತ್ತು ವಿದ್ಯಾಶಾಲೆಯ ಅವರ ಸೇವೆಯನ್ನು ಕುರಿತ ವಿಡಿಯೋ ಪ್ರದರ್ಶಿಸಲಾಯಿತು.