ಮೈಸೂರು, ಅ.18(ಎಂಟಿವೈ)- ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ದಸರಾ ಮಹೋತ್ಸವ ವೇಳೆ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಕ್ಕೆ ಪ್ರವೇಶ ನಿರ್ಬಂಧಿಸಿದ್ದ ಆದೇಶ ಹಿಂಪಡೆದಿದ್ದರೂ, ಭಾನು ವಾರ ಮೈಸೂರು ಮೃಗಾಲಯ, ಅರಮನೆ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ದೀಪಾಲಂಕಾರ ನೋಡಲು ಬೇರೆ ಬೇರೆ ಸ್ಥಳಗಳಿಂದ ಪ್ರವಾಸಿಗರು ಬಂದಿದ್ದರಾದರೂ ಪ್ರವಾಸಿ ಕ್ಷೇತ್ರಗಳತ್ತ ಮುಖ ಮಾಡಲು ಹಿಂದೇಟು ಹಾಕಿದರು.
ಪ್ರತಿ ವರ್ಷ ನವರಾತ್ರಿ ವೇಳೆ ಜಗಮಗಿಸುವ ಮೈಸೂರು ನಗರವನ್ನು ಕಣ್ತುಂಬಿಕೊಳ್ಳಲು ತಂಡೋಪತಂಡ ವಾಗಿ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಆಗಮಿಸುತ್ತಿದ್ದ ಪ್ರವಾಸಿಗರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಭೇಟಿ ನೀಡುವ ಪದ್ಧತಿ ಅನುಸರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಳಿಸಿರು ವುದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ರದ್ದಾಗಿವೆ. ಅಲ್ಲದೇ ಸೋಂಕು ಹರಡುವುದನ್ನು ತಡೆ ಗಟ್ಟಲು ಅ.14ರಿಂದ ಅ.18, ಅ.23ರಿಂದ ನ.1ರವ ರೆಗೆ ಮೈಸೂರು, ಮಂಡ್ಯ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸುವ ಕುರಿತಂತೆ ಮೈಸೂರು ಜಿಲ್ಲಾ ಡಳಿತ ಆದೇಶಿಸಿತ್ತು. ಆದರೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮೈಸೂರು ಜಿಲ್ಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದಿನಿಂದ ಮೃಗಾಲಯ, ಚಾಮುಂಡಿಬೆಟ್ಟ, ಅರಮನೆ, ಕೆಆರ್‍ಎಸ್, ರಂಗನ ತಿಟ್ಟು ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾ ಗಿತ್ತು. ಶನಿವಾರ ಸಂಜೆ ಮೈಸೂರು ನಗರದಲ್ಲಿ ದೀಪಾಲಂಕಾರ ನೋಡಲು ಮುಗಿ ಬಿದ್ದಿದ್ದ ಜನತೆ ವಾರಾಂತ್ಯ ರಜೆ ದಿನವಾದ ಭಾನುವಾರ ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆ ಯಲ್ಲಿ ಭೇಟಿ ನೀಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಪ್ರವಾಸಿಗರು ಸೋಂಕಿನ ಭಯಕ್ಕೆ ಹೆದರಿದಂತೆ ಕಂಡು ಬಂತು. ಎಲ್ಲೆಡೆ ಪ್ರವಾಸಿಗರ ಕೊರತೆ ಎದ್ದು ಕಾಣು ತ್ತಿತ್ತು. ಸಾಮಾನ್ಯ ಸಂದರ್ಭ ಗಳಲ್ಲಿಯೂ ಭಾನುವಾರ ಪ್ರವಾಸಿ ತಾಣಗಳಿಗೆ ಬರುತ್ತಿದ್ದ ಅರ್ಧದಷ್ಟು ಜನರು ಇಂದು ಬಾರದ ಕಾರಣ ಪ್ರವಾಸೋದ್ಯಕ್ಕೆ ಭಾರೀ ಹಿನ್ನಡೆಯಾದಂತೆ ಕಂಡುಬಂತು.
ಮೃಗಾಲಯ: ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭಾನುವಾರ ಬಂತೆಂದರೆ ಪ್ರವಾಸಿಗರ ದಂಡೇ ಹರಿದು ಬರುತ್ತಿತ್ತು. ವರ್ಷದಿಂದ ವರ್ಷಕ್ಕೆ ನವರಾತ್ರಿ ವೇಳೆ ದಾಖಲೆಯ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಮೃಗಾಲಯಕ್ಕೆ ಲಾಕ್‍ಡೌನ್ ನಿಂದಾಗಿ ಆದಾಯ ಸಂಗ್ರಹಕ್ಕೆ ಧಕ್ಕೆಯಾಗಿತ್ತು. ಲಾಕ್‍ಡೌನ್ ತೆರವಿನ ಬಳಿಕ ಬೆರಳೆಣಿಕೆ ಯಷ್ಟು ಮಂದಿ ಮೃಗಾಲಯಕ್ಕೆ ಬರುತ್ತಿದ್ದರು. ಆದರೆ ನವರಾತ್ರಿ ವೇಳೆ ಪ್ರವಾಸಿಗರಿಗೆ ನಿರ್ಬಂಧ ವಿದೆ ಎಂಬ ಸಂದೇಶದಿಂದ ಇಂದು ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಮೃಗಾಲಯಕ್ಕೆ ಬರದಿರುವುದು ಸಿಬ್ಬಂದಿಗೆ ನಿರಾಸೆಯುಂಟು ಮಾಡಿತು. ಬೆಳಗ್ಗೆ 8.30ರಿಂದ ಸಂಜೆ 5 ಗಂಟೆವರೆಗೆ 1950 ಮಂದಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. 2.45 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹವಾಗಿದೆ.
ಅರಮನೆ: ದಸರಾ ಮಹೋತ್ಸವದ ವೇಳೆ ಮೈಸೂರು ಅರಮನೆಯಲ್ಲಿ ರಾಜ ಮನೆತನದ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಈ ವೇಳೆ ಮದುವಣಗಿತ್ತಿಯಂತೆ ಕಂಗೊಳಿಸಲಿರುವ ಅರಮನೆಯ ಸೌಂದರ್ಯ ವೀಕ್ಷಣೆಗೆ ಪ್ರವಾಸಿಗರು ಮುಗಿ ಬೀಳುತ್ತಿದ್ದರು. ಆದರೆ ಭಾನುವಾರ ಅರಮನೆಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ 75 ಮಕ್ಕಳು, 8 ವಿದೇಶಿಗರು, 1620 ವಯಸ್ಕರು ಸೇರಿದಂತೆ 1703 ಮಂದಿ ಪ್ರೇಕ್ಷ ಕರು ಭೇಟಿ ನೀಡಿದ್ದಾರೆ. 1,16,210 ರೂ. ಅದಾಯ ಸಂಗ್ರಹವಾಗಿದೆ.