ಮೈಸೂರು, ಜೂ.10(ವೈಡಿಎಸ್)- ಕೊರೊನಾ ಹಾವಳಿ ಮಧ್ಯೆಯೂ ರಂಗ ಭೂಮಿಯನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಮೈಸೂರು ರಂಗಾಯಣವು ಈ ಬಾರಿ `ಅಲ್ಪಾವಧಿ ರಂಗ ಶಿಕ್ಷಣ’ ಮತ್ತು `ಮಕ್ಕಳಿಗಾಗಿ ರಂಗಶಿಕ್ಷಣ’ ಎಂಬ ಹೊಸ ಯೋಜನೆಗಳನ್ನು ರೂಪಿಸಿದೆ.
`ಅಲ್ಪಾವಧಿ ರಂಗ ಶಿಕ್ಷಣ’: ಹವ್ಯಾಸಿ ರಂಗ ಕಲಾವಿದರನ್ನು ಗಮನದಲ್ಲಿಟ್ಟುಕೊಂಡು `ಅಲ್ಪಾವಧಿ ರಂಗ ಶಿಕ್ಷಣ’ ಯೋಜನೆ ರೂಪಿ ಸಿದ್ದು, ವರ್ಷದ 2 ಅವಧಿಯಲ್ಲಿ ಶಿಬಿರ ಗಳು ನಡೆಯಲಿವೆ. ಈ ಶಿಕ್ಷಣದ ಅವಧಿ 3 ತಿಂಗಳು. ಎಸ್‍ಎಸ್‍ಎಲ್‍ಸಿ ಪಾಸಾದ 18 ರಿಂದ 30 ವರ್ಷದೊಳಗಿನ 25 ಯುವಕ -ಯುವತಿಯರಿಗೆ ಪ್ರತಿದಿನ ಸಂಜೆ 5ರಿಂದ ರಾತ್ರಿ 8ರವರೆಗೆ ತರಗತಿಗಳು ನಡೆಯಲಿವೆ. ಮೊದಲ ಅವಧಿ ಶಿಬಿರ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಹಾಗೂ 2ನೇ ಅವಧಿ ಶಿಬಿರ ನವೆಂಬರ್, ಡಿಸೆಂಬರ್, ಜನವರಿವರೆಗೆ ನಡೆಯಲಿವೆ. ಇದರಲ್ಲಿ 2 ತಿಂಗಳು ರಂಗ ಭೂಮಿ ಕುರಿತು ಮಾಹಿತಿ ನೀಡಿದರೆ, 1 ತಿಂಗಳು ಪೂರ್ಣ ನಾಟಕ ಕಲಿಸಿ, ಪ್ರದರ್ಶಿ ಸಲಾಗುತ್ತದೆ. ಜತೆಗೆ ಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.
ಮಕ್ಕಳಿಗಾಗಿ ರಂಗಶಿಕ್ಷಣ: 7ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ರಂಗಭೂಮಿ ಬಗ್ಗೆ ಆಸಕ್ತಿ ಮೂಡಿಸಿ, ಭವಿಷ್ಯದಲ್ಲಿ ರಂಗ ಪ್ರತಿಭೆ ಗಳನ್ನು ಹೊರಹೊಮ್ಮಿಸಲು `ಮಕ್ಕಳಿಗಾಗಿ ರಂಗಶಿಕ್ಷಣ’ ಯೋಜನೆ ರೂಪಿಸಲಾಗಿದೆ.
ಈ ಯೋಜನೆಯ ಅವಧಿ 6 ತಿಂಗಳು. ಪ್ರತಿ ಶನಿವಾರ ಮಧ್ಯಾಹ್ನ 2ರಿಂದ ಸಂಜೆ 5 ಮತ್ತು ಭಾನುವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರಂಗಶಿಕ್ಷಣ ತರಗತಿ ನಡೆಸಲಾಗುವುದು. ಮಕ್ಕಳಿಗಾಗಿಯೇ ಪೂರ್ಣ ಪ್ರಮಾ ಣದ ಮಕ್ಕಳ ನಾಟಕ ಸಿದ್ಧಪಡಿಸಿ ಕಲಿಸಲಾಗುತ್ತದೆ. ರಜಾ ದಿನಗಳಲ್ಲಿ ಉಳಿದ 3 ರಂಗಾಯಣ ಕೇಂದ್ರಗಳಾದ ಧಾರವಾಡ, ಶಿವಮೊಗ್ಗ, ಕಲಬುರಗಿಗೆ ಪ್ರವಾಸ ಕರೆದು ಕೊಂಡು ಹೋಗಲಾಗುತ್ತದೆ. 30 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ರಂಗಶಿಕ್ಷಣ ಪೂರ್ಣಗೊಳಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಗುವುದು. ರಂಗಾಯಣ ಮತ್ತು ಅದರ ಹಿರಿಯ ಕಲಾವಿದರ 30 ವರ್ಷಗಳ ರಂಗಾನುಭವವನ್ನು ಹೊಸ ಪೀಳಿಗೆಗೆ ದಾಟಿಸುವುದು, ಆ ಮೂಲಕ ರಂಗಭೂಮಿಯ ನಿರಂತರತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ `ಮೈಸೂರು ಮಿತ್ರ’ನಿಗೆ ತಿಳಿಸಿದರು