ಅಮಚವಾಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆ ಭರ್ತಿಗೆ ಆಗ್ರಹ
ಚಾಮರಾಜನಗರ

ಅಮಚವಾಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆ ಭರ್ತಿಗೆ ಆಗ್ರಹ

November 4, 2020

ಚಾಮರಾಜನಗರ, ನ.3- ತಾಲೂಕಿನ ಅಮಚ ವಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ 5 ಕೆರೆಗಳಿಗೆ ನೀರು ತುಂಬಿಸದೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಸೋಮಲಿಂಗಪ್ಪ ದೂರಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಲಗೆರೆ ಕೆರೆ, ನರಸಮಂಗಲ ಕೆರೆ, ದೊಡ್ಡಕೆರೆ, ಮೇಲೂರು ಕೆರೆ, ಮೂರು ತೂಬಿನ ಕೆರೆ, ಎಣ್ಣೆಹೊಳೆ ಕೆರೆಗಳಿಗೆ ನೀರು ಬಿಡದೆ ವಡ್ಡಗೆರೆ ಕೆರೆಗೆ ಬಿಟ್ಟಿದ್ದಾರೆ. ಅಲ್ಲದೇ ಗುಂಡ್ಲುಪೇಟೆ ಕೆರೆಗಳಿಗೆ ಮಾತ್ರ ನೀರು ಬಿಡಲಾಗುತ್ತಿದ್ದು, ಚಾಮರಾಜನಗರ ತಾಲೂಕಿನ ಕೆರೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೆಲವು ಕೆರೆಗಳಿಗೆ ನೀರು ತುಂಬಿಸಿದರೆ, ಮತ್ತೆ ಕೆಲ ಕೆರೆಗಳಿಗೆ ನೀರು ತುಂಬಿಸದೆ ನಿರ್ಲಕ್ಷ್ಯ ಮಾಡಿರುವುದು ಈ ಭಾಗದ ರೈತರಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ. ಆದ್ದರಿಂದ ಕೆರೆ ನೀರು ತುಂಬಿಸುವ ಯೋಜನೆಯ ಮಾರ್ಗ ಸೂಚಿಯಂತೆ ನೀರು ತುಂಬಿಸಲು ಅಧಿಕಾರಿಗಳು ಮುಂದಾಗಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿ ಗಳನ್ನು ಕೇಳಿದರೆ ಒತ್ತಡ ಇದೆ ಸ್ವಲ್ಪ ಸಮಯ ಕೊಡಿ ಕೆರೆಗಳಿಗೆ ನೀರು ಬಿಡುತ್ತೇವೆ ಎಂಬ ಉತ್ತರ ನೀಡುತ್ತಾರೆ. ಆದ್ದರಿಂದ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇತ್ತ ಗಮನಹರಿಸಿ ಈ ಭಾಗದ ಕೆರೆಗಳಿಗೂ ನೀರು ತುಂಬಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರ ಜೊತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ತಾಪಂ ಸದಸ್ಯರಾದ ದೊಡ್ಡಮ್ಮ, ದೊಡ್ಡತಾಯಮ್ಮ, ಬಾಲಚಂದ್ರಮೂರ್ತಿ ಇದ್ದರು.