ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ
ಚಾಮರಾಜನಗರ

ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ

November 4, 2020

ಗುಂಡ್ಲುಪೇಟೆ, ನ.3(ಸೋಮ್.ಜಿ)- ಕಾಂಗ್ರೆಸ್ ಕಾರ್ಯ ಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಬಿಜೆಪಿ ಸರ್ಕಾರದ ವೈಫÀಲ್ಯ ಗಳು ಹಾಗೂ ಕಾಂಗ್ರೆಸ್ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿಗಳ ಬಗ್ಗೆ ಜನತೆಗೆ ಮನವರಿಕೆ ಮಾಡುವ ಮೂಲಕ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಲು ಶ್ರಮಿಸಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಹೆಚ್.ಎಂ.ಗಣೇಶ್‍ಪ್ರಸಾದ್ ಹೇಳಿದರು.

ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಬೇಗೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬರಿಗೂ ಉದ್ಯೋಗ ನೀಡದೆ ಸುಳ್ಳು ಆಶ್ವಾಸನೆ ನೀಡುತ್ತಿದೆ. ಭೂ ಸುಧಾರಣಾ ಕಾಯ್ದೆ, ಎಪಿ ಎಂಸಿ ತಿದ್ದುಪಡಿ ಮೂಲಕ ರೈತ ವಿರೋಧಿ ನೀತಿ ಅನುಸರಿ ಸುತ್ತಿದ್ದು, ಸಾಮಾನ್ಯ ಜನತೆಯ ಆಕ್ರೋಶಕ್ಕೆ ಒಳಗಾಗಿದೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ: ಕ್ಷೇತ್ರದ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ತಾಲೂಕಿನ ಅಭಿವೃದ್ಧಿಗೆ ಯಾವುದೇ ಅನುದಾನ ತಂದಿಲ್ಲ. ಹಿಂದೆ ದಿ.ಮಹದೇವಪ್ರಸಾದ್ ಹಾಗೂ ಡಾ.ಗೀತಾ ಮಹದೇವ ಪ್ರಸಾದ್ ಅವರು ತಂದಿರುವ ಅನುದಾನದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಕೆಲಸ ಗಳಿಗೆ ಭೂಮಿ ಪೂಜೆ ಮಾಡುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರದ ಜನತೆಗೆ ಸತ್ಯದ ಅರಿವಾಗಿದ್ದು ಆಡಳಿತ ವಿರೋಧಿ ಅಲೆ ಎದ್ದಿದೆ ಎಂದರು.

ಸಭೆಯಲ್ಲಿ ಮಾಜಿ ಸಂಸದ ಎ.ಸಿದ್ದರಾಜು, ಚಾಮುಲ್ ಅಧ್ಯಕ್ಷ ಹೆಚ್.ಎಸ್.ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಮುನಿರಾಜು, ಜಿಪಂ ಮಾಜಿ ಸದಸ್ಯ ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷರಾದ ಪುಟ್ಟಣ್ಣ, ಬಸವರಾಜು, ಗಂಗಾಧರಪ್ಪ, ಮುಖಂಡರಾದ ರಮೇಶ್‍ಬೇಗೂರು, ಕೆ.ಮಹದೇವಶೆಟ್ಟಿ, ಸೂರಿ, ರವಿ, ಭಾಸ್ಕರ್, ನಾರಾಯಣ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.