ಮೈಸೂರು, ಸೆ.6(ಪಿಎಂ)- ಅಮೃತ್ ಯೋಜನೆಯಡಿ ಮೈಸೂರು ನಗರಕ್ಕೆ ಹೆಚ್ಚು ವರಿ ಕುಡಿಯುವ ನೀರು ಪೂರೈಸುವ ಸಂಬಂಧ ಕೆಆರ್‍ಎಸ್ ಜಲಾಶಯದಿಂದ ಇಲ್ಲಿಗೆ ಸಮೀಪದ ಹೊಂಗಳ್ಳಿಯಿಂದ ಮೈಸೂರಿನ ವಿಜಯನಗರದ ವಾಟರ್ ಟ್ಯಾಂಕ್‍ವರೆಗೆ (ಜಲಸಂಗ್ರಹಗಾರ ಘಟಕ) ಕೈಗೊಂಡಿದ್ದ ಪೈಪ್‍ಲೈನ್ ಕಾಮ ಗಾರಿ ಅಂತಿಮ ಘಟ್ಟ ತಲುಪಿದೆ.
ಬೆಳಗೊಳ ಗ್ರಾಮದ ಬಳಿ 20 ಮೀಟರ್ ಉದ್ದದ ಪೈಪ್‍ಲೈನ್ ಕಾಮಗಾರಿಗೆ ಗ್ರಾಮ ಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಗ್ರಾಮಕ್ಕೂ ಕುಡಿಯುವ ನೀರು ಪೂರೈಸುವ ಬೇಡಿಕೆ ಮುಂದಿಟ್ಟು ಬೆಳಗೊಳ ಗ್ರಾಮ ಸ್ಥರು ಕಾಮಗಾರಿಗೆ ತಡೆಯೊಡ್ಡಿದ್ದರು.
ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಪ್ರತಾಪ್‍ಸಿಂಹ ಅವರು ಗ್ರಾಮಸ್ಥರ ಅಹ ವಾಲು ಆಲಿಸಿ, ಬೆಳಗೊಳ ಗ್ರಾಮಕ್ಕೂ ಕುಡಿ ಯುವ ನೀರಿನ ವ್ಯವಸ್ಥೆ ಮಾಡುವ ಭರ ವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೆನೆ ಗುದಿಗೆ ಬಿದ್ದಿದ್ದ 20 ಮೀಟರ್ ಉದ್ದದ ಬಾಕಿ ಪೈಪ್‍ಲೈನ್ ಅಳವಡಿಕೆ ಕಾಮಗಾರಿ ಸಂಸದ ಪ್ರತಾಪ್ ಸಿಂಹ ಉಪಸ್ಥಿತಿಯಲ್ಲಿ ಯಾವುದೇ ಅಡೆತಡೆ ಇಲ್ಲದೇ ಒಂದೇ ದಿನದಲ್ಲಿ ಭಾನುವಾರ ಪೂರ್ಣಗೊಂಡಿತು.
ಹೊಂಗಳ್ಳಿ ಜಲಶುದ್ಧೀಕರಣಾಗಾರ ಘಟಕ ದಿಂದ ಮೈಸೂರಿನ ವಿಜಯನಗರದ ವಾಟರ್ ಟ್ಯಾಂಕ್‍ವರೆಗೆ (ಜಲಸಂಗ್ರಹಗಾರ ಘಟಕ) ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಭಾಗಶಃ ಪೂರ್ಣವಾಗಿದ್ದರೂ ಬೆಳಗೊಳ ಗ್ರಾಮದ 20 ಮೀಟರ್‍ನಷ್ಟು ಪೈಪ್‍ಲೈನ್ ಕಾಮಗಾರಿ ಬಾಕಿ ಉಳಿದಿಕೊಂಡಿತ್ತು. ಗುರುವಾರ ಹೊಂಗಳ್ಳಿ ಜಲಶುದ್ಧೀಕರಣ ಗಾರ ಘಟಕದ ಪರಿಶೀಲನೆಗೆ ತೆರಳಿದ್ದ ಸಂಸದ ಪ್ರತಾಪ್ ಸಿಂಹ ಅವರಲ್ಲಿ ಬೆಳಗೊಳ ಗ್ರಾಮಸ್ಥರು ತಮ್ಮ ನೀರಿನ ಬವಣೆ ತೋಡಿ ಕೊಂಡು ಈ ಪೈಪ್‍ಲೈನ್ ಮೂಲಕ ತಮ್ಮ ಗ್ರಾಮಕ್ಕೂ ಕುಡಿಯುವ ನೀರಿನ ಸರಬರಾಜು ಮಾಡುವಂತೆ ಸಂಸದರಲ್ಲಿ ಮನವಿ ಮಾಡಿ ದ್ದರು. ನಮ್ಮ ಗ್ರಾಮದ ಮೂಲಕ ನೀರು ಸರಬ ರಾಜು ಯೋಜನೆ ನಡೆಯುತ್ತಿದೆ. ನೀರಿನ ಸಮಸ್ಯೆ ಹೊಂದಿರುವ ನಮ್ಮ ಗ್ರಾಮಕ್ಕೂ ಸದರಿ ಪೈಪ್‍ಲೈನ್ ಮೂಲಕ ನೀರು ಪೂರೈಕೆಯಾಗಲು ಅವಕಾಶ ಕಲ್ಪಿಸುವಂತೆ ಗ್ರಾಮಸ್ಥರು ಕೋರಿದ್ದರು.
ಗ್ರಾಮಸ್ಥರ ಮನವಿ ಸ್ಪಂದಿಸಿದ ಸಂಸದರು, ಗ್ರಾಮಕ್ಕೆ ಈಗಾಗಲೇ ಮಂಜೂರಾಗಿರುವ ಕುಡಿಯುವ ನೀರಿನ ಪೂರೈಕೆ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನ ದೊರೆಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಈ ಪೈಪ್‍ಲೈನ್ ಮಾರ್ಗದಲ್ಲಿ ಗ್ರಾಮಕ್ಕೆ ನೀರು ಪೂರೈಕೆಯಾಗುವಂತೆ ಒಂದು ಪಾಯಿಂಟ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದರಿ 20 ಮೀಟರ್ ಪೈಪ್‍ಲೈನ್ ಕಾಮಗಾರಿ ಕೈಗೆತ್ತುಕೊಳ್ಳಲು ಗ್ರಾಮಸ್ಥರು ಸಮ್ಮತಿಸಿದ್ದರು. ಅದರಂತೆ ಬೆಳಗೊಳ ಗ್ರಾಮದ ನೀರಿಗಾಗಿ ಒಂದು ಪಾಯಿಂಟ್ ವ್ಯವಸ್ಥೆ ಮಾಡಿ, ಭಾನುವಾರ ಬೆಳಿಗ್ಗೆ ಕಾಮಗಾರಿ ಪುನರಾರಂಭಿಸಿ, ಸಂಜೆ ವೇಳೆಗೆ ಪೂರ್ಣಗೊಳಿಸಲಾಯಿತು.