ಆನಂದನಗರಕ್ಕೆ ಜಲಗಂಡಾಂತರ…!
ಮೈಸೂರು

ಆನಂದನಗರಕ್ಕೆ ಜಲಗಂಡಾಂತರ…!

July 1, 2020

ಮೈಸೂರು, ಜೂ.30- ಮೈಸೂರಿನ ಆನಂದ ನಗರಕ್ಕೆ ಜಲಗಂಡಾಂತರ…! ಮಳೆ ಬಂತೆಂದರೆ ಮನೆ ಒಳ-ಹೊರಗೆ ಎಲ್ಲೆಲ್ಲೂ ನೀರು…

ಹೌದು, ನಗರದ ಕಾಂತರಾಜ್ ಅರಸ್ ರಸ್ತೆ ಮಾರ್ಗ ದಲ್ಲಿರುವ ಆನಂದ ನಗರಕ್ಕೆ ಮಳೆಗಾಲ ಬಂತೆಂದರೆ ಜಲಗಂಡಾಂತರವೇ ಎದುರಾದಂತೆ ಕಾಣುತ್ತದೆ. ಜೋರು ಮಳೆ ಬಂದರೆ ಸಾಕು, ಎಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆಯೋ ಎಂದು ಪರಿತಪಿಸುವ ಆನಂದ ನಗರದ ನಿವಾಸಿಗಳು ಆನಂದವನ್ನೇ ಕಳೆದುಕೊಂಡಿ ದ್ದಾರೆ. ಮೈಸೂರಿನಲ್ಲಿ ಜೂ.28ರ ಭಾನುವಾರ ಸುರಿದ ಮಳೆ ಸೃಷ್ಟಿಸಿದ ಅವಾಂತರವೇ ಇದಕ್ಕೆ ಸಾಕ್ಷಿ.

ಹಲವು ವರ್ಷಗಳಿಂದ ಶಾಶ್ವತ ಪರಿಹಾರಕ್ಕಾಗಿ ಕಾಯುವಂತಹ ದುಃಸ್ಥಿತಿ ನಿವಾಸಿಗಳದ್ದಾಗಿದೆ. ಲಕ್ಷಾಂ ತರ ಹಣ ಖರ್ಚು ಮಾಡಿ ಇಷ್ಟಪಟ್ಟಂತೆ ಕಷ್ಟಪಟ್ಟು ಮನೆ ಕಟ್ಟಿಕೊಂಡು, ಕಂದಾಯ ಕಟ್ಟುತ್ತಿದ್ದರೂ ನೆಮ್ಮದಿ ಇಲ್ಲದಂತಾಗಿದೆ. ಒಂದೆಡೆ ನೀರಿನಿಂದ ತೊಂದರೆಯಾದರೆ, ಮತ್ತೊಂದೆಡೆ ದುರ್ವಾಸನೆ, ಸೊಳ್ಳೆಗಳ ಕಾಟದಿಂದ ಕಿರಿಕಿರಿ ಉಂಟಾಗುತ್ತಿದೆ ಎಂಬುದು ಆನಂದನಗರ ನಿವಾಸಿಗಳ ಅಳಲು.

ಆನಂದನಗರದಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಾರು ಜನ ವಾಸವಿದ್ದಾರೆ. ಆನಂದ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಸಹಕಾರ ದೊಂದಿಗೆ ಬಡಾವಣೆ ನಿರ್ಮಾಣವಾಗಿದ್ದು, ನಿರ್ವ ಹಣೆ ಜವಾಬ್ದಾರಿ ನಗರ ಪಾಲಿಕೆಗೆ ವಹಿಸಲಾಗಿದೆ.

ನಗರದ ತಗ್ಗು ಪ್ರದೇಶಗಳಲ್ಲಿ ಒಂದಾಗಿರುವ ಆನಂದ ನಗರ ಪಾಲಿಕೆಯ ವಾರ್ಡ್ ನಂ.45ರ ವ್ಯಾಪ್ತಿ ಯಲ್ಲಿದ್ದು, ನಿರ್ವಹಣೆ ಮತ್ತು ಅಭಿವೃದ್ಧಿ ಕೊರತೆ ಯಿಂದಾಗಿ ಸಮಸ್ಯೆಗಳ ಸರಮಾಲೆಯನ್ನೇ ಇಲ್ಲಿನ ನಿವಾಸಿಗಳು ಎದುರಿಸುತ್ತಿದ್ದಾರೆ. ಆನಂದನಗರದ ಜೋಡಿ ರಸ್ತೆಯ ಮಧ್ಯದಲ್ಲಿರುವ ಮೋರಿಗೆ ಬೋಗಾದಿ ಕೆರೆ(ಮರಿಯಪ್ಪನ ಕೆರೆ), ಬೋಗಾದಿ, ಜನತಾ ನಗರ, ಶಾರದಾದೇವಿ ನಗರ, ನಿವೇದಿತಾ ನಗರ, ರಾಜ ರಾಜೇಶ್ವರಿ ನಗರ ಮತ್ತಿತರ ಕಡೆಗಳಿಂದ ನೀರು ಹರಿದು ಬರಲಿದ್ದು, ಮೋರಿ ಚಿಕ್ಕದಾಗಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯ ನಿವಾಸಿಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಪ್ರತಿವರ್ಷವೂ ಸಮಸ್ಯೆ: ಪ್ರತಿವರ್ಷವೂ ಮಳೆಗಾಲ ದಲ್ಲಿ ನೀರಿನಿಂದಾಗುವ ಸಮಸ್ಯೆ ತಪ್ಪಿದ್ದಲ್ಲ. ಮೋರಿ ಯಲ್ಲಿ ಕಸವನ್ನು ಆಗಾಗ ತೆರವುಗೊಳಿಸದೇ ಇರು ವುದರಿಂದ ಜೋರಾಗಿ ಮಳೆ ಬಂದಾಗಲೆಲ್ಲಾ ಮೋರಿ ತುಂಬಿ ರಸ್ತೆಯಲ್ಲೆಲ್ಲಾ ನೀರು ಹರಿಯುತ್ತದೆ. ಸಮಸ್ಯೆ ಯಾದಾಗಲ್ಲೆಲ್ಲಾ ಪಾಲಿಕೆ ಅಧಿಕಾರಿಗಳು ಬಂದು ನೋಡುತ್ತಿದ್ದಾರೆಯೇ ಹೊರತು, ಯಾವುದೇ ಕೆಲಸ ಗಳು ಆಗುತ್ತಿಲ್ಲ. ಅಲ್ಲದೇ ಒಳಚರಂಡಿಯ ಕೊಳಚೆ ನೀರು ಮೋರಿಯಲ್ಲಿ ಹರಿಯುತ್ತಿದೆ ಎಂದು ಸ್ಥಳೀಯ ನಿವಾಸಿ ಶಿವಪ್ರಸಾದ್ ದೂರಿದರು.

ಸೊಳ್ಳೆ ಕಾಟ: ಗಾಳಿ ಬಂದರೆ ಮನೆಯೊಳಗೆಲ್ಲಾ ದುರ್ವಾಸನೆ ಹರಡುತ್ತದೆ. ವಿಪರೀತ ಸೊಳ್ಳೆಗಳ ಕಾಟ. ಆಗಾಗ ಮೋರಿಯನ್ನು ಸ್ವಚ್ಛಗೊಳಿಸಬೇಕು. ಅಲ್ಲದೆ ಮೋರಿ ತಡೆಗೋಡೆಯನ್ನು ಮತ್ತಷ್ಟು ಎತ್ತರ ಮಾಡಬೇಕು. ಬೋಗಾದಿ ಕೆರೆ ಮಾರ್ಗವಾಗಿ ಬರುವ ಬಡಾವಣೆಗಳು ಹಾಗೂ ರಾಜರಾಜೇಶ್ವರಿ ನಗರದ ಕಡೆಯಿಂದ ಹರಿದುಬರುವ ನೀರಿನಿಂದಾಗಿ ಮೋರಿ ತುಂಬಿ, ರಸ್ತೆಯಲ್ಲೆÉಲ್ಲಾ ಹರಿಯುತ್ತದೆ. ಭಾನುವಾರ ಸುರಿದ ಮಳೆಗೆ ರಸ್ತೆ ಎಲ್ಲಿದೆ, ಮೋರಿ ಎಲ್ಲಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಸ್ವಿಮ್ಮಿಂಗ್ ಪೂಲ್‍ನಂತೆ ಕಾಣುತ್ತಿತ್ತು. ಮನೆಯೊಳಗೂ ನೀರು ನುಗ್ಗಿತ್ತು ಎಂದು ನಿವಾಸಿ ವನಜಾಕ್ಷಿ ಸಮಸ್ಯೆಯ ಚಿತ್ರಣ ನೀಡಿದರು.

ಕೇಳುವವರು ಯಾರೂ ಇಲ್ಲ: ಲಕ್ಷಾಂತರ ಹಣ ಖರ್ಚು ಮಾಡಿ ಮನೆ ಕಟ್ಟಿದ್ದೇವೆ. ಸರಿಯಾದ ರಸ್ತೆ ಯಿಲ್ಲ. ಮಳೆ ಬಂದಾಗಲೆಲ್ಲಾ ಮನೆ ಮುಂದೆ ಮೂರಡಿ ನೀರು ನಿಲ್ಲುತ್ತದೆ. ಕಳೆದ ಭಾನುವಾರ ಸುರಿದ ಮಳೆ ನೀರು ಮನೆಯೊಳಗೆಲ್ಲಾ ನುಗ್ಗಿದೆ. ಪಾಲಿಕೆಯವರು ಜೆಸಿಬಿ ಕರೆಸಿ, ಸಣ್ಣದಾಗಿ ಕಾಲುವೆ ಮಾಡಿ ನಿಂತಿದ್ದ ನೀರು ಮೋರಿಗೆ ಹರಿಯುವಂತೆ ಮಾಡಿದ್ದಷ್ಟೇ, ನಮ್ಮ ಕಷ್ಟಗಳನ್ನು ಯಾರೂ ಕೇಳುತ್ತಿಲ್ಲ. ಪಾಲಿಕೆಯವರಿಂದ ಸಾಧ್ಯವಾದರಷ್ಟೇ ಮಾಡಲಿ. ಇಲ್ಲವಾದರೆ ಸುಮ್ಮ ನಿರಲಿ. ಆಗಾಗ ಬಂದು ನೋಡುವುದಾದರೂ ಏತಕ್ಕೆ? ಎಂದು ನಿವಾಸಿ ಜಯಲಕ್ಷ್ಮಿ ಕಿಡಿಕಾರಿದರು.

ಮೋಹನ್ ಕಾಯಕ

Translate »