ಪ್ರಾಣಿ ಪ್ರಿಯೆ ವಿಶಾಲಾಕ್ಷಿದೇವಿ ಒಡೆಯರ್
ಮೈಸೂರು

ಪ್ರಾಣಿ ಪ್ರಿಯೆ ವಿಶಾಲಾಕ್ಷಿದೇವಿ ಒಡೆಯರ್

October 21, 2018

ಮೈಸೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದ ಜಯಚಾಮ ರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿ ವಿಶಾಲಾಕ್ಷಿ ದೇವಿ ಅವರು ಪ್ರಾಣಿಪ್ರಿಯರೂ ಆಗಿದ್ದು, ಈ ಹಿಂದೆ ತಮ್ಮ ಮನೆಯಲ್ಲಿಯೇ ಚಿರತೆಗಳನ್ನು ಸಾಕಿದ್ದರು.

ಬಂಡೀಪುರ ಅಭಯಾರಣ್ಯದ ಸಮೀಪವಿರುವ ತಮ್ಮ ರೆಸಾರ್ಟ್‍ನಲ್ಲಿ ಈ ಹಿಂದೆ ಹಲವು ಚಿರತೆಗಳನ್ನು ಸಾಕಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಅಲ್ಲದೆ ಬಂಡೀಪುರ ಕ್ಯಾಂಪ್‍ನಲ್ಲಿದ್ದ ದಸರಾ ಆನೆ ಚೈತ್ರ, ಲಕ್ಷ್ಮೀ, ಜಯಪ್ರಕಾಶ ಸೇರಿದಂತೆ ಇನ್ನಿತರ ಆನೆಗಳಿಗೆ ಆಹಾರ ಪದಾರ್ಥಗಳನ್ನು ತಂದು ಕೊಡುವ ಮೂಲಕ ಸಾಕಾನೆ ಗಳನ್ನು ಪ್ರೀತಿ ಮಾಡುತ್ತಿದ್ದರು. ಮನೆಯಲ್ಲಿ ಸಾಕಲಾಗಿದ್ದ ಚಿರತೆಗಳು ಮಕ್ಕಳಂತೆ ಇವರೊಂದಿಗೆ ಬೆರೆತಿದ್ದವು.

12 ದಿನದ ಮರಿಗಳಿಗೆ ಆರೈಕೆ: 1992ರಲ್ಲಿ ಗುಂಡ್ಲುಪೇಟೆಯ ಕಬ್ಬಿನ ಗದ್ದೆಯೊಂದರಲ್ಲಿ ಅನಾಥವಾಗಿದ್ದ 12 ದಿನಗಳ ಎರಡು ಚಿರತೆ ಮರಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದರು. ಆದರೆ ಆ ಮರಿಗಳನ್ನು ಸಾಕಲು ಮೈಸೂರು ಮೃಗಾಲಯದ ಅಧಿಕಾರಿಗಳು ನಿರಾಕರಿಸಿದ್ದರು. ಇದರಿಂದ ಬಂಡೀಪುರದ ಅರಣ್ಯ ಸಿಬ್ಬಂದಿ ವಿಶಾಲಾಕ್ಷಿದೇವಿ ಅವರನ್ನು ಸಂಪರ್ಕಿಸಿ, ‘12 ದಿನದ ಎರಡು ಚಿರತೆ ಮರಿಗಳಿವೆ. ಅವುಗಳನ್ನು ಸಾಕುವಿರಾ?’ ಎಂದು ಕೋರಿದ್ದರು. ಇದಕ್ಕೆ ಒಪ್ಪಿಕೊಂಡ ವಿಶಾಲಾಕ್ಷಿದೇವಿ ಅವರು ಎರಡು ಮರಿಗಳನ್ನು ರೆಸಾರ್ಟ್‍ಗೆ ತಂದು ಆರೈಕೆ ಮಾಡಿ ಬೆಳೆಸಿದರು. ಗಂಡು ಚಿರತೆ ಮರಿಗೆ ಬುಲ್ಲಿ, ಹೆಣ್ಣು ಚಿರತೆ ಮರಿಗೆ ಬೇಬಿ ಎಂದು ನಾಮ ಕರಣ ಮಾಡಿದ್ದರು. ಎರಡು ವರ್ಷಗಳ ಕಾಲ ಮರಿ ಗಳನ್ನು ಸಾಕಿ, ಮುದ್ದಿಸಿ ಬೆಳೆಸಿದ್ದರು.

1999ರಲ್ಲಿ ಕಾಡಿಗೆ ಬಿಟ್ಟರು: ಬುಲ್ಲಿ ಮತ್ತು ಬೇಬಿಯನ್ನು 1999ರಲ್ಲಿ ವಿಶಾಲಾಕ್ಷಿದೇವಿ ಹಾಗೂ ಅವರ ಪತಿ ಗಜೇಂದ್ರ ಸಿಂಗ್ ಅವರು, ಚಿರತೆ ಮರಿಗಳಿಗೆ 2 ವರ್ಷ ತುಂಬಿದ ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರ ದಿಂದ ರೇಡಿಯೊ ಕಾಲರ್ ಅಳವಡಿಸಿ ಓಜಿಮುಂಟಿ ಎಂಬ ಕಾಡಿಗೆ ಬಿಡಲಾಗಿತ್ತು. ಕಾಡಿಗೆ ಬಿಡುವ ಮುನ್ನ ಚಿರತೆಗಳಿಗೆ ಜೀವಂತ ಕೋಳಿ, ಮೇಕೆಯನ್ನು ನೀಡಿ ಬೇಟೆಯಾಡುವ ಕಲೆಯನ್ನು ಕಲಿಸಲಾಗಿತ್ತು. ಅಲ್ಲದೆ ವಾಹನಗಳಿಗೆ ಸಿಲುಕಿ ಮೃತಪಡುತ್ತಿದ್ದ ಜಿಂಕೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳೇ ಈ ಎರಡು ಚಿರತೆಗಳಿಗೆ ತಂದು ನೀಡುತ್ತಿದ್ದರು.

ಕಾಡಿಗೆ ಹೋಗಿ ಸತ್ತ ಬುಲ್ಲಿ: ಕಾಡಿಗೆ ಬಿಟ್ಟ ಕೆಲ ದಿನದಲ್ಲಿಯೇ ಬುಲ್ಲಿ ಸಾವಿಗೀಡಾಗಿದ್ದ. ಕಡವೆಯೊಂದನ್ನು ಬೇಟೆಯಾಡಲು ಯತ್ನಿಸಿದ್ದ ಬುಲ್ಲಿ, ಕಡವೆಯ ತಿವಿತದಿಂದ ಗಾಯಗೊಂಡು ಮೃತಪಟ್ಟಿದ್ದ. ಅಣ್ಣ ಬುಲ್ಲಿ ಸಾವಿಗೀಡಾಗಿದ್ದನ್ನು ಕಂಡ ಬೇಬಿ ಆತಂಕಕ್ಕೆ ಒಳಗಾಗಿದ್ದಳು. ಸೊರಗಿ ಹೋಗಿದ್ದಳು. ವಿಶಾಲಾಕ್ಷಿ ದೇವಿ ಹಾಗೂ ಅವರ ಪತಿ ಗಜೇಂದ್ರ ಸಿಂಗ್ ಅವರು ಕಾಡಿಗೆ ಭೇಟಿ ನೀಡಿದಾಗ ಅವರನ್ನು ಬುಲ್ಲಿಯ ಕಳೆಬರದತ್ತ ಬೇಬಿ ಕರೆದೊಯ್ದು ತೋರಿಸಿತ್ತು.

ಕಾಡಿಗೆ ಕರೆದಳು ಬೇಬಿ: ಅಣ್ಣ ಬುಲ್ಲಿ ಸತ್ತ ಹಿನ್ನೆಲೆಯಲ್ಲಿ ಸೊರಗಿ ಹೋಗಿದ್ದ ಬೇಬಿಯನ್ನು ವಿಶಾಲಾಕ್ಷಿ ದೇವಿ ಒಡೆಯರ್ ಅವರು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಕಾಡು ಸೇರಿದ್ದ ಬೇಬಿ ಆಗಾಗ ರೆಸಾರ್ಟ್‍ಗೆ ಬಂದು ಹೋಗುತ್ತಿತ್ತು. ಕೆಲ ವರ್ಷಗಳಾದ ನಂತರ ಬೇಬಿ ಐದಾರು ದಿನ ರೆಸಾರ್ಟ್‍ಗೆ ಬಾರದೆ ಎಲ್ಲರಲ್ಲಿಯೂ ಆತಂಕವನ್ನುಂಟು ಮಾಡಿತ್ತು. ಆದರೆ ಐದಾರು ದಿನದ ನಂತರ ಬಂದ ಬೇಬಿ, ಕಾಡಿಗೆ ಬರುವಂತೆ ಸಂಜ್ಞೆ ಮಾಡಿದ್ದಳು. ಇದನ್ನು ಅರಿತುಕೊಂಡ ವಿಶಾಲಾಕ್ಷಿದೇವಿ ಅವರು ಪತಿ ಗಜೇಂದ್ರಸಿಂಗ್ ಬೇಬಿಯನ್ನು ಹಿಂಬಾಲಿಸಿದ್ದರು. ದಟ್ಟ ಕಾಡಿಗೆ ಕರೆದುಕೊಂಡು ಹೋಗಿದ್ದ ಬೇಬಿ ತಾನು ಜನ್ಮ ನೀಡಿದ್ದ ಮರಿಗಳನ್ನು ತೋರಿಸಿತ್ತು. ಈ ಎಲ್ಲಾ ಘಟನೆಗಳು ವಿಶಾಲಾಕ್ಷಿದೇವಿ ಅವರು ಪ್ರಾಣಿಗಳೊಂದಿಗೆ ಅದೆಷ್ಟರ ಮಟ್ಟಿಗೆ ಬಾಂಧವ್ಯ ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.

Translate »