ಈ ಬಾರಿ ದಸರಾ ಉತ್ಸವದ ಬಗ್ಗೆ ಸಮಗ್ರ ತನಿಖೆ  ಆಗಬೇಕು: ಶಾಸಕ ತನ್ವೀರ್ ಸೇಠ್ ಆಗ್ರಹ
ಮೈಸೂರು

ಈ ಬಾರಿ ದಸರಾ ಉತ್ಸವದ ಬಗ್ಗೆ ಸಮಗ್ರ ತನಿಖೆ  ಆಗಬೇಕು: ಶಾಸಕ ತನ್ವೀರ್ ಸೇಠ್ ಆಗ್ರಹ

October 21, 2018

ಮೈಸೂರು:  ದಸರಾ ಮಹೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರ ಕೈಗೊಂಬೆಯಂತೆ ಮೈಸೂರು ಜಿಲ್ಲಾಡಳಿತ ನಡೆದುಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ್ದು, ಪಾಸ್ ವಿತರಣೆ, ಶಿಷ್ಟಾಚಾರ ಪಾಲನೆ ಸೇರಿದಂತೆ ಈ ಬಾರಿ ದಸರಾ ಮಹೋತ್ಸವ ಸಂಬಂಧ ಸಮಗ್ರ ತನಿಖೆಯಾಗಬೇಕೆಂದು ಶಾಸಕರೂ ಆದ ಮಾಜಿ ಸಚಿವ ತನ್ವೀರ್‍ಸೇಠ್ ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಾಡಹಬ್ಬ ದಸರಾದಲ್ಲಿ ಕಾಂಗ್ರೆಸ್‍ನ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ದಸರಾ ಮಹೋತ್ಸವ ಸುಗಮವಾಗಿ ನಡೆಯಲೆಂದು ಇಷ್ಟು ದಿನ ಸುಮ್ಮನಿರಬೇಕಾಯಿತು. ದಸರಾ ಆರಂಭ ದಿಂದಲೂ ಗೊಂದಲದ ಗೂಡಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪರಸ್ಪರ ಪ್ರೀತಿ-ವಿಶ್ವಾಸದ ಸಂಕೇತವಾಗಿ ದಸರಾ ಉತ್ಸವ ಗೋಚರಿಸಿತು ಎಂದು ಲೇವಡಿ ಮಾಡಿದರು.

ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ದಸರಾ ಉಪಸಮಿತಿಗಳಿಗೆ ಅಧಿಕಾರೇತರರನ್ನು ನಿಯೋಜನೆ ಮಾಡಲಿಲ್ಲ. ಇದರಿಂದ 800 ಮಂದಿಯಷ್ಟು ಕಾರ್ಯಕರ್ತರು ಯಾವುದೇ ಸ್ಥಾನಮಾನವಿಲ್ಲದೇ ದಸರೆಯಿಂದ ಹೊರಗುಳಿಯಬೇಕಾಯಿತು. 3 ಸಾವಿರ ಪಾಸ್ ಬಗ್ಗೆ ಯಾವುದೇ ಲೆಕ್ಕ ಸಿಗುತ್ತಿಲ್ಲ. ಜೊತೆಗೆ ಸ್ಥಳಾವಕಾಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಸ್‍ಗಳನ್ನು ಮುದ್ರಿಸಿ ಅವಾಂತರ ಸೃಷ್ಟಿಸಲಾಯಿತು. ಇದರಿಂದ ಗೋಲ್ಡ್ ಕಾರ್ಡ್ ಹಾಗೂ ಪಾಸ್ ಹೊಂದಿದ್ದವರೂ ಅರಮನೆ ಪ್ರವೇಶ ಪಡೆಯಲಾಗದೇ ವಿಜಯದಶಮಿ ಮೆರವಣಿಗೆಯಿಂದ ವಂಚಿತರಾದರು ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‍ಗೆ ಕೇವಲ 8 ಪಾಸ್: ಕಾಂಗ್ರೆಸ್‍ನ ಮೈಸೂರು ಜಿಲ್ಲಾಧ್ಯಕ್ಷರಿಗೆ ಕೇವಲ 8 ಪಾಸ್‍ಗಳನ್ನು (ವಿಜಯದಶಮಿ ಮೆರವ ಣಿಗೆ ಪಾಸ್) ಕಳುಹಿಸಿಕೊಡಲಾಗಿತ್ತು. ಸ್ಥಳೀಯ ಶಾಸಕನಾದ ನನಗೆ 100 ವೀಕ್ಷಕರ ಗ್ಯಾಲರಿ ಪಾಸ್ ಕಳುಹಿಸಿದ್ದರು. ಈ ಎಲ್ಲವನ್ನೂ ವಾಪಸ್ಸು ಕಳುಹಿಸಿಕೊಟ್ಟಿದ್ದೇವೆ. 10 ಸಾವಿರ ಪಾಸ್ ಗಳನ್ನು ಜಿ.ಟಿ.ದೇವೇಗೌಡರು ಹಾಗೂ 5 ಸಾವಿರ ಪಾಸ್‍ಗಳನ್ನು ಸಾ.ರಾ.ಮಹೇಶ್ ತೆಗೆದುಕೊಂಡಿದ್ದು, 2 ಸಾವಿರ ಪಾಸ್‍ಗಳನ್ನು ಸಿಎಂ ಕಚೇರಿಗೆ ಕಳುಹಿಸಿಕೊಡಲಾಗಿದೆ. ಪಾಸ್ ವಿತರಣೆಯಲ್ಲಿ ಲೋಪ ಎಸಗಲಾಗಿದೆ. ಪಾಸ್‍ಗಳ ಮಾರಾಟವೂ ನಡೆದಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವರು ಸ್ಪಷ್ಟೀಕರಣ ನೀಡಬೇಕು. ಪಾಸ್ ಮುದ್ರಣಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪಾಸ್ ವಿತರಣೆ ವೇಳೆ 2 ದಿನಗಳು ಜಿ.ಟಿ. ದೇವೇಗೌಡರ ಮೊಬೈಲ್ ಸ್ವೀಚ್ ಆಫ್ ಆಗಿತ್ತು. ಜಿಲ್ಲಾಡಳಿತವೂ ಜವಾಬ್ದಾರಿ ಮರೆತು ಲೋಪದೋಷಗಳಿಗೆ ಕಾರಣವಾಗಿದೆ. ಸ್ಥಳೀಯ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೇ ದಸರಾ ಮಹೋತ್ಸವ ನಡೆಸಿದ್ದು, ನಾಡ ಹಬ್ಬಕ್ಕೆ ಅಡಚಣೆ ಮಾಡಬಾರದು ಎಂಬ ಕಾರಣಕ್ಕೆ ಇಷ್ಟು ದಿನ ಸುಮ್ಮನೆ ಇರ ಬೇಕಾ ಯಿತು. ಇನ್ನು ಮುಂದೆ ನಮ್ಮ ಹೋರಾಟ ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದರು.

ದಸರಾದಲ್ಲಿ ಎಲ್ಲವೂ ಅಧ್ವಾನವೇ ಆಗಿದ್ದು, ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಹೆಣ್ಣು ಮಕ್ಕಳೊಂದಿಗೆ ಕಿಡಿಗೇಡಿಗಳು ಅನುಚಿತ ವಾಗಿ ವರ್ತಿಸಿರುವ ಘಟನೆಗಳು ನಡೆದಿವೆ. ಯುವ ದಸರಾದಲ್ಲಿ ಯುವತಿಯರ ಮೇಲೆ ಪೊಲೀಸರು ದರ್ಪ ತೋರಿದ್ದಾರೆ. ಇಂತಹ ಅವ್ಯವಸ್ಥೆಯಿಂದ ಕೂಡಿದ ದಸರಾ ಈ ಹಿಂದೆ ಎಂದೂ ನಡೆದಿರಲಿಲ್ಲ. ಮೈತ್ರಿ ಸರ್ಕಾರದಲ್ಲಿ ದ್ದೇವೆ ಎಂದ ಮಾತ್ರಕ್ಕೆ ನಮ್ಮ ವಿರುದ್ಧ ನಡೆ ಯುವ ಅನ್ಯಾಯವನ್ನು ಸಹಿಸಿಕೊಳ್ಳಬೇಕಿಲ್ಲ. ಒಂದಿಬ್ಬರು ಸಚಿವ ಸಂಪುಟದಲ್ಲಿರುವ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದರೆ ಸಾಲದು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯದಶಮಿ ಮೆರವಣಿಗೆ ವೇಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ವಿನಾಕಾರಣ ಮುಂಗಡವಾಗಿಯೇ ಕರೆತಂದು ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಬರುವಿಕೆಗಾಗಿ ಕಾದು ಕುಳಿತುಕೊಳ್ಳುವಂತೆ ಮಾಡಲಾಗಿದೆ. ಸತತವಾಗಿ ಐದು ಬಾರಿ ಶಾಸಕನಾಗಿ ಆಯ್ಕೆಯಾದ ನನಗೆ ಶಿಷ್ಟಾಚಾರದಂತೆ ಹಿರಿಯತನ ಲಭ್ಯವಾಗುತ್ತದೆ. ಆ ಪ್ರಕಾರ ಆಹ್ವಾನ ಪತ್ರಿಕೆಗಳಲ್ಲಿ ನನ್ನ ಹೆಸರು ಮೊದಲು ಬರಬೇಕಿತ್ತು. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷರ ಹೆಸರನ್ನು ಮೊದಲು ಹಾಕಿಸಿದ್ದರು ಎಂದರು.

ಜಿ.ಟಿ.ದೇವೇಗೌಡ ಅವರು ಎಲ್ಲರನ್ನೂ ಕರೆ ಮಾಡಿ ಆಹ್ವಾನಿಸಿದ್ದೇನೆ ಎಂದು ಹಲವು ಬಾರಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿ ಸಿದ ತನ್ವೀರ್ ಸೇಠ್, ಹಾಗಾದರೆ, ಅವರ ಫೋನ್ ಕರೆಗಳ ದಾಖಲಾತಿಗಳನ್ನು ಪರಿಶೀಲಿಸಿ ನೋಡಿದರೆ ಸತ್ಯಾಂಶ ಹೊರ ಬರಲಿದೆ ಎಂದರಲ್ಲದೆ, ದಸರಾದ ಸಮಗ್ರ ತನಿಖೆ ಯಾವ ರೀತಿಯಲ್ಲಿ ನಡೆಯಬೇಕು ಎಂಬ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳ ಬೇಕು. ನಾವು ನಮ್ಮ ವರಿಷ್ಠರ ಗಮನಕ್ಕೆ ಇದನ್ನು ತರಲಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

Translate »