ಗಣ್ಯರಿಂದ ತನ್ವೀರ್ ಸೇಠ್ ಆರೋಗ್ಯ ವಿಚಾರಣೆ
ಮೈಸೂರು

ಗಣ್ಯರಿಂದ ತನ್ವೀರ್ ಸೇಠ್ ಆರೋಗ್ಯ ವಿಚಾರಣೆ

November 19, 2019

ಮೈಸೂರು, ನ. 18(ಆರ್‍ಕೆ,ಎಂಕೆ)- ತೀವ್ರ ಹಲ್ಲೆಗೊಳಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಸುತ್ತೂರು ಶ್ರೀಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

ಮುಂಜಾನೆ 4 ಗಂಟೆ ವೇಳೆಗೆ ಮಾಜಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ತನ್ವೀರ್, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಸಚಿವ ಶ್ರೀರಾಮುಲು, ಶಾಸಕರಾದ ಜಿ.ಟಿ.ದೇವೇಗೌಡ, ಪುಟ್ಟ ರಂಗ ಶೆಟ್ಟಿ, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ಮಾಜಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಚಲುವರಾಯ ಸ್ವಾಮಿ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ವಾಟಾಳ್ ನಾಗರಾಜ್, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮಾಜಿ ಮುಡಾ ಅಧ್ಯಕ್ಷ ಪಿ. ಗೋವಿಂದರಾಜು, ಮಾಜಿ ಮೇಯರ್ ಗಳಾದ ಅಯೂಬ್ ಖಾನ್, ಸಂದೇಶ್ ಸ್ವಾಮಿ, ಪುಷ್ಪಲತಾ ಚಿಕ್ಕಣ್ಣ, ಟಿ.ಬಿ. ಚಿಕ್ಕಣ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ಎಸ್.ಧೃವರಾಜ್, ಡಾ. ರವೀಂದ್ರ, ಟಿ.ಎಸ್. ರವಿಶಂಕರ್ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ತನ್ವೀರ್ ಸೇಠ್ ಗುಣಮುಖರಾಗುತ್ತಿದ್ದಾರೆ. ನÀಮ್ಮೊಂದಿಗೆ ಅವರು ಮಾತನಾಡಿದರು. ಆತಂಕ ಪಡುವ ಅಗತ್ಯವಿಲ್ಲ. ಇದೊಂದು ಹೀನ ಕೃತ್ಯವಾ ಗಿದ್ದು, ತೀವ್ರವಾಗಿ ಖಂಡಿಸುತ್ತೇನೆ. ದುಷ್ಕರ್ಮಿಗಳು ಈ ಕೃತ್ಯವನ್ನು ಪೂರ್ವ ಸಿದ್ಧತೆ ಮಾಡಿಕೊಂಡೆ, ಕಾದು ಮಾಡಿದ್ದಾರೆ ಅನ್ನಿಸುತ್ತದೆ. ಆರೋಪಿ ಎಸ್‍ಡಿಪಿಐಗೆ ಸೇರಿ ದವನು ಎಂದು ಹೇಳಲಾಗುತ್ತಿದೆ. ಹಳೆಯ ವೈರತ್ವದಿಂದಲೇ ಹಲ್ಲೆ ಮಾಡಿರ ಬಹುದು. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚಿಸಿ, ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಇಂತಹ ಘಟನೆಗಳು ನಡೆ ಯುತ್ತಲೇ ಇವೆ. ಜನರ ಮಧ್ಯದಲ್ಲಿಯೇ ಹಲ್ಲೆ ಮಾಡಿದ್ದಾರೆ. ಘಟನೆ ಕುರಿತು ಸರ್ಕಾ ರದ ವಿರುದ್ಧ ಮತ್ತು ಪೊಲೀಸರ ವಿರುದ್ಧ ಮಾತನಾಡುವುದಿಲ್ಲ. ಶಾಸಕರುಗಳಿಗೆ ರಕ್ಷಣೆ ಇಲ್ಲದಂತಾದರೆ ಬೇರೆಯವರಿಗೆ ರಕ್ಷಣೆ ಇದೆಯೇ ಎಂಬ ಭಾವನೆ ಬರುತ್ತದೆ. ಜನರಿಗೆ ಪೊಲೀಸರ ಮತ್ತು ಕಾನೂನಿನ ಭಯ ಇಲ್ಲದಂತಾಗಿದೆ. ಆದ್ದರಿಂದ ಕೂಲಂಕುಶ ವಾಗಿ ತನಿಖೆಯಾಗಬೇಕು. ಯಾರೇ ಆದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ಎನ್.ಆರ್.ಕ್ಷೇತ್ರದಲ್ಲಿ ಭದ್ರತೆ ಅಗತ್ಯ ವಾಗಿರಬೇಕಾಗಿದೆ. ಆದರೆ ಗನ್‍ಮ್ಯಾನ್ ಇದ್ದರೂ ಹೊಂಚು ಹಾಕಿ ದುಷ್ಕರ್ಮಿ ಹಲ್ಲೆ ಮಾಡಿದ್ದಾನೆ. ಇದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ವೈದ್ಯರೇ ಶಿಫಾರಸ್ಸು ಮಾಡುತ್ತಾರೆ. ಆರೋಪಿ ಎಸ್‍ಡಿಪಿಐ ಕಾರ್ಯಕರ್ತನೋ ಅಥವಾ ಬೇರೆ ಯಾರೋ ಎಂಬುದನ್ನು ತಿಳಿ ಯಲು ಮೊದಲು ಸೂಕ್ತ ತನಿಖೆಯಾಗ ಬೇಕು ಎಂದು ತಿಳಿಸಿದರು.

ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಎಲ್ಲರೊಂದಿಗೆ ಸದಾ ಸಲುಗೆಯಿಂದಿರು ತ್ತಿದ್ದ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿ ರುವುದು ದುರದೃಷ್ಟಕರ. ಎನ್.ಆರ್. ಕ್ಷೇತ್ರದಲ್ಲಿ ಆಗಿಂದಾಗ್ಗೆ ಈ ರೀತಿಯ ಘಟನೆ ಗಳು ನಡೆಯುತ್ತಿರುವ ಬಗ್ಗೆ ಪೊಲೀಸರು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಈ ಹಿಂದೆ ರಾಜು ಹತ್ಯೆಯಾಯಿತು, ಗಿರಿ ಧರ್ ಮೇಲೆ ಮಾರಣಾಂತಿಕ ಹಲ್ಲೆಯಾ ಗಿತ್ತು. ಇದೀಗ ಹಾಲಿ ಶಾಸಕರನ್ನೇ ಹತ್ಯೆ ಮಾಡಲು ಯತ್ನಿಸಿರುವುದರಿಂದ ಎನ್.ಆರ್. ಕ್ಷೇತ್ರದಲ್ಲಿ ಪೊಲೀಸರು ದುಷ್ಟ ಶಕ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸಬೇಕು ಎಂದರು.

ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿ, ಹಾಲಿ ಶಾಸಕರ ಮೇಲೆ ಇಂತಹ ದಾಳಿ ನಡೆಸಿದರೆ, ಉಳಿದ ರಾಜಕಾರಣಿಗಳ ಪಾಡೇನು ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು.

ಪ್ರತೀ ಶಾಸಕರಿಗೂ ಗನ್‍ಮ್ಯಾನ್ ಭದ್ರತೆ ಒದಗಿಸಿ ರಕ್ಷಣೆ ನೀಡುವುದು ಸೂಕ್ತ. ಸದಾ ಎಲ್ಲರೊಟ್ಟಿಗೆ ಪ್ರೀತಿಯಿಂದಿರುತ್ತಿದ್ದ ತನ್ವೀರ್, ಗುಣಮುಖರಾಗಲಿ ಎಂದು ಪ್ರಾರ್ಥಿ ಸುತ್ತೇನೆ ಎಂದು ನುಡಿದರು.

ಮಾಜಿ ಸಂಸದ ಆರ್. ಧ್ರುವನಾರಾ ಯಣ ಅವರು, ತನ್ವೀರ್ ಸೇಠ್ ಕಾಂಗ್ರೆಸ್ ಪಕ್ಷಕ್ಕೆ ಒಂದು ಆಸ್ತಿ ಇದ್ದಂತೆ. ಚೇತರಿಸಿ ಕೊಳ್ಳುತ್ತಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿ ದ್ದಾರೆ. ಶಾಸಕರಿಗೆ ಸೂಕ್ತ ರಕ್ಷಣೆ ನೀಡು ವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಇದೊಂದು ಆತಂಕಕಾರಿ ಘಟನೆ. ಶಾಸಕ ತನ್ವೀರ್ ಸೇಠ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪ್ರಾಣಾಪಾಯ ವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಶೀಘ್ರ ಪ್ರಕರಣ ಪತ್ತೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.

Translate »