ಕಾರು, ಬೈಕ್ ಕಳವು: ಖದೀಮನ ಬಂಧನ
ಮೈಸೂರು

ಕಾರು, ಬೈಕ್ ಕಳವು: ಖದೀಮನ ಬಂಧನ

November 21, 2019

ಮೈಸೂರು, ನ.20(ಎಂಕೆ)- ಎರಡು ಸ್ಕೋಡಾ ಕಾರು ಹಾಗೂ ಮೂರು ಬೈಕ್ ಕಳ್ಳತನ ಮಾಡಿದ್ದ ಖದೀಮನನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಲಕ್ಷ್ಮೀಪುರಂನ ಟ್ಯಾಟೋ ಕೆಲಸ ಮಾಡುವ ಕೃಷ್ಣ (24) ಬಂಧಿತ ಆರೋಪಿ. ಈತ ಮಂಗಳವಾರ ಸಂಜೆ ಈದ್ಗಾ ಮೈದಾ ನದ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ರಾಯಲ್ ಎನ್‍ಫೀಲ್ಡ್ ಬೈಕ್ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಬಳಿಕ ವಿಚಾರಣೆ ಮಾಡಿದಾಗ ತನ್ನ ಬಳಿಯಿದ್ದ ಬೈಕ್ ಅನ್ನು ಮಂಚೇಗೌಡನಕೊಪ್ಪಲಿನಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ವಿಜಯನಗರ ವಾಟರ್ ಟ್ಯಾಂಕ್ ಬಳಿ ರಾಯಲ್ ಎನ್‍ಫೀಲ್ಡ್ ಬೈಕ್, ಹೆಬ್ಬಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಟಿಎಂ ಡ್ಯೂಕ್ ಬೈಕ್ ಮತ್ತು ಮತ್ತೊಂದು ರಾಯಲ್ ಎನ್‍ಫೀಲ್ಡ್ ಬೈಕ್ ಹಾಗೂ ಓಎಲ್‍ಎಕ್ಸ್‍ನಲ್ಲಿ ಮಾರಾಟಕ್ಕೆ ಹಾಕಿದ್ದ ಎರಡು ಸ್ಕೋಡಾ ಕಂಪನಿಯ ಕಾರುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 6 ಲಕ್ಷ ಮೌಲ್ಯದ 1 ಬೈಕ್, 1 ಕಾರು ಮತ್ತು ಮೊಬೈಲ್ ವಶಪಡಿಸಿಕೊಂಡಿರುವ ಮಂಡಿ ಠಾಣೆ ಪೊಲೀಸರು, ಆರೋಪಿ ಕೃಷ್ಣ ಹಾಗೂ ಕಾರ್ ಸ್ಕ್ರಾಫ್ ಮಾಡಿದ್ದ ನದೀಂ ಖಾನ್ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Translate »