ಬಡವರ ಹಿತ ಕಾಯುವ ಚಿಟ್ ಫಂಡ್ಸ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು
ಮೈಸೂರು

ಬಡವರ ಹಿತ ಕಾಯುವ ಚಿಟ್ ಫಂಡ್ಸ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

November 21, 2019

ನವದೆಹಲಿ: ಚಿಟ್ ಫಂಡ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಬಡವರು, ಮತ್ತು ಮಧ್ಯಮ ವರ್ಗದ ಹಿತಾಸಕ್ತಿ ಕಾಪಾಡುವ 2019ರ ಚಿಟ್ ಫಂಡ್ಸ್ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಬುಧವಾರ ಧ್ವನಿ ಮತದಿಂದ ಅಂಗೀಕರಿಸಿದೆ. ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವ ಅನುರಾಗ್ ಠಾಕೂರ್, ಬಡವರ ಹಿತ ಮತ್ತು ಅವರು ಮೋಸ ಹೋಗದಂತೆ ತಡೆಯುವುದೇ ಈ ಮಸೂದೆಯ ಉದ್ದೇಶವಾಗಿದೆ ಎಂದರು. ಮುಂಬರುವ ವರ್ಷದಲ್ಲಿ 15000ಕ್ಕೂ ಹೆಚ್ಚು ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದರು. ಹೆಚ್ಚಿನ ಬಡ್ಡಿ ಆಸೆಗೆ ಜನರು ಮೋಸ ಹೋಗದಂತೆ ತಡೆಯುವ ಉದ್ಧೇಶ ಸಹ ಇದರಲ್ಲಿ ಅಡಗಿದೆ ಎಂದರು. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಸದರ ಸಹಕಾರವು ಬಹಳ ಮುಖ್ಯವಾಗಿದೆ ಎಂದು ಮನವಿ ಮಾಡಿದರು. ಚಂದಾದಾರ ಆಧಾರಿತ ಚಿಟ್ ಫಂಡ್ ಕಾನೂನುಬದ್ಧ ವಾಗಿದೆ. ಚಿಟ್ ಫಂಡ್ ನೋಂದಾಯಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಪ್ರಧಾನ್ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ), ಯುಪಿಐ ಪಾವತಿ, ಡಿಜಿಟಲ್ ವಹಿವಾಟು ಮತ್ತು ರುಪೇ ಡೆಬಿಟ್ ಕಾರ್ಡ್‍ಗಳ ಬಗ್ಗೆಯೂ ಸಚಿವರು ಉಲ್ಲೇಖಿಸಿದ್ದು, ಗರಿಷ್ಠ ಸಂಖ್ಯೆಯ ಜನರನ್ನು ಬ್ಯಾಂಕ್ ಖಾತೆಗಳ ಮೂಲಕ ಆರ್ಥಿಕ ಪಾಲುದಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ ಎಂದರು. ಚರ್ಚೆಯಲ್ಲಿ ಪಾಲ್ಗೊಂಡ ಸೌಗತಾ ರಾಯ್ ಮಸೂದೆ ತರುವಲ್ಲಿ ಸರಕಾರದ ವಿಳಂಬ ನೀತಿಯನ್ನೂ ಪ್ರಶ್ನೆ ಮಾಡಿ, ಕಳೆದ ಲೋಕಸಭೆಯಲ್ಲಿಯೂ ಈ ಮಸೂದೆಯನ್ನು ಮಂಡಿಸಿ ಹಣಕಾಸು ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.

Translate »