ನಂಜನಗೂಡು ಕೆಎಸ್‍ಆರ್‍ಟಿಸಿ ಘಟಕವನ್ನು ಮೈಸೂರು ಗ್ರಾಮಾಂತರ ವಿಭಾಗಕ್ಕೆ ವರ್ಗಾಯಿಸಲು ತನ್ವೀರ್ ಸೇಠ್ ಮನವಿ
ಮೈಸೂರು

ನಂಜನಗೂಡು ಕೆಎಸ್‍ಆರ್‍ಟಿಸಿ ಘಟಕವನ್ನು ಮೈಸೂರು ಗ್ರಾಮಾಂತರ ವಿಭಾಗಕ್ಕೆ ವರ್ಗಾಯಿಸಲು ತನ್ವೀರ್ ಸೇಠ್ ಮನವಿ

November 21, 2019

ಮೈಸೂರು, ನ.20- ನಂಜನಗೂಡು ಕೆಎಸ್‍ಆರ್‍ಟಿಸಿ ಘಟಕವು ಹಾಲಿ ಚಾಮರಾಜ ನಗರ ವಿಭಾಗಕ್ಕೆ ಸೇರಿದ್ದು, ಈ ಘಟಕವನ್ನು ಮೈಸೂರು ಗ್ರಾಮಾಂ ತರ ವಿಭಾಗಕ್ಕೆ ವರ್ಗಾಯಿಸಬೇಕೆಂದು ಉಪ ಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ತನ್ವೀರ್ ಸೇಠ್ ಮಾರಣಾಂತಿಕ ಹಲ್ಲೆಗೊಳಗಾಗುವ ಮುನ್ನಾ ದಿನ (ನ.17) ಸಚಿವರಿಗೆ ಈ ಪತ್ರ ಬರೆದಿದ್ದು, ನಂಜನಗೂಡು, ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ(ಮುಡಾ) ವ್ಯಾಪ್ತಿಗೆ ಸೇರಿದ್ದು, ಪಟ್ಟಣದ ಅಭಿವೃದ್ಧಿ ಮುಡಾ ದಿಂದಲೇ ನಡೆಯುತ್ತಿದೆ. ನಂಜನಗೂಡು ತಾಲೂಕು ಮೈಸೂರು ಕಂದಾಯ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಎಲ್ಲಾ ಸರ್ಕಾರಿ ಆಡಳಿತ ವ್ಯವಹಾರಗಳೂ ಮೈಸೂರು ಜಿಲ್ಲಾ ಕೇಂದ್ರದ ನಿಯಂತ್ರಣದಲ್ಲಿದೆ. ಆದರೆ, ಕೆಎಸ್‍ಆರ್‍ಟಿಸಿ ಘಟಕವನ್ನು ಮಾತ್ರ ಚಾಮರಾಜನಗರ ಜಿಲ್ಲೆಗೆ ಸೇರಿಸಲ್ಪಟ್ಟಿದೆ ಎಂದು ಅವರು ವಿವರಿಸಿದ್ದಾರೆ.

ಭೌಗೋಳಿಕವಾಗಿ ಕೂಡ ಮೈಸೂರು ಜಿಲ್ಲಾ ಕೇಂದ್ರದ ಜೊತೆ ವ್ಯವಹಾರಿಕ ಸಂಬಂಧಗಳನ್ನು ನಂಜನಗೂಡು ಹೊಂದಿದೆ. ಆದರೆ ಈ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು ಚಾಮರಾಜನಗರಕ್ಕೆ ಸಾರಿಗೆ ಸೌಲಭ್ಯಕ್ಕಾಗಿ ಅಲೆದಾಡುತ್ತಿರುವುದನ್ನು ತಪ್ಪಿಸಲು ನಂಜನಗೂಡು ಘಟಕವನ್ನು ಮೈಸೂರು ಗ್ರಾಮಾಂತರ ಕೆಎಸ್‍ಆರ್‍ಟಿಸಿ ವಿಭಾಗಕ್ಕೆ ವರ್ಗಾಯಿಸಬೇಕು ಎಂದು ಶಾಸಕ ತನ್ವೀರ್ ಸೇಠ್ ಕೋರಿದ್ದಾರೆ.

Translate »