ನಂಜನಗೂಡು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ:ಬಿ.ಹರ್ಷವರ್ಧನ್
ಮೈಸೂರು ಗ್ರಾಮಾಂತರ

ನಂಜನಗೂಡು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ:ಬಿ.ಹರ್ಷವರ್ಧನ್

May 3, 2020

ನಂಜನಗೂಡು, ಮೇ 2(ರವಿ)-ಕೊರೊನಾ ರೆಡ್‍ಜೋನ್ ಆಗಿ ಪರಿವರ್ತನೆ ಗೊಂಡಿರುವುದರಿಂದ ನಂಜನಗೂಡಿನ ನಾಗರಿಕರು ಸಂಕಷ್ಟಕ್ಕೆ ಒಳಗಾಗಿದ್ದು ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಅವರು, ಮೈಸೂರಿನ ಜಿಪಂ ಸಭಾಂಗಣದಲ್ಲಿ ಜರುಗಿದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಕ್ಷೇತ್ರದ ಜನರ ಬವಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗಮನಕ್ಕೆ ತರಲಾಗಿದೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಸರ್ಕಾರದಿಂದಲೇ ದಿನಸಿ ಕಿಟ್ ಒದಗಿಸಿ: ಕ್ಷೇತ್ರ ವ್ಯಾಪ್ತಿಯಲ್ಲಿ ವೈಯಕ್ತಿಕವಾಗಿ ಈಗಾಗಲೇ ಸಾಧ್ಯವಾದ ಮಟ್ಟಿಗೆ ಕೊರೊನಾ ಸಂತ್ರಸ್ತರಿಗೆ ನೆರವು ನೀಡಿದ್ದೇನೆ. ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಸಹ ದಿನಸಿ ಕಿಟ್‍ಗಳನ್ನು ನೀಡಿದ್ದಾರೆ. ಆದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಗರಿಷ್ಠ ಸಂಖ್ಯೆಯ ಕುಟುಂಬಗಳು ಜೀವನ ನಿರ್ವಹಣೆಗಾಗಿ ಪರದಾಡುತ್ತಿವೆ. ಇಂತಹ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ಸರ್ಕಾರದಿಂದಲೇ ದಿನಸಿ ಕಿಟ್ ಒದಗಿಸಲು ಮುಂದಾಗುವಂತೆ ಮನವಿ ಮಾಡಲಾಗಿದೆ. ಲಾಕ್‍ಡೌನ್ ವಿಸ್ತರಣೆಯಿಂದಾಗಿ ಸಣ್ಣಪುಟ್ಟ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಜೀವನ ನಿರ್ವಹಣೆಗೂ ನೆರವಾಗ ಬೇಕಿದೆ. ಪ್ರವಾಸೀ ತಾಣವಾಗಿರುವ ನಂಜನಗೂಡನ್ನು ಸಹಜ ಸ್ಥಿತಿಗೆ ತರುವ ಸಲುವಾಗಿ ಆರ್ಥಿಕ ಚಟುವಟಿಕೆಗೆ ನೆರವಾಗುವಂತೆ ಸರ್ಕಾರದಿಂದ ಅಗತ್ಯ ವಿನಾಯಿತಿಗಳನ್ನು ಘೋಷಿಸುವಂತೆ ಒತ್ತಾಯಿಸಲಾಗಿದೆ ಎಂದರು.

ಸಕ್ಕರೆ, ಎಣ್ಣೆ ನೀಡಲು ಮನವಿ: ಪಡಿತರ ಆಹಾರ ಪದಾರ್ಥಗಳೊಂದಿಗೆ ನಂಜನ ಗೂಡು ತಾಲೂಕಿಗೆ ಸಕ್ಕರೆ ಮತ್ತು ಎಣ್ಣೆಯನ್ನು ಕೊಡಿಸಿಕೊಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯನವರಿಗೆ ಮನವಿ ಮಾಡಲಾಗಿದ್ದು, ಸಚಿವರು ಎನ್‍ಡಿಆರ್‍ಎಫ್ ಅನುದಾನದ ಮೂಲಕ ಸಕ್ಕರೆ ಮತ್ತು ಎಣ್ಣೆ ಖರೀದಿಸಿ, ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ಪರಿಶೀಲಿಸಿ, ಸ್ಪಂದಿಸುವ ಭರವಸೆಯನ್ನೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೀಡಿದ್ದಾರೆ ಎಂದು ಹರ್ಷವರ್ಧನ್ ಹೇಳಿದರು.

Translate »