ಜೋಡಿ ತೆಂಗಿನ ಮರ ರಸ್ತೆಯಲ್ಲಿ ವಾಹನ ಸವಾರರಿಗೆ ಚರಂಡಿ ನೀರಿನ ಅಭಿಷೇಕ
ಮೈಸೂರು

ಜೋಡಿ ತೆಂಗಿನ ಮರ ರಸ್ತೆಯಲ್ಲಿ ವಾಹನ ಸವಾರರಿಗೆ ಚರಂಡಿ ನೀರಿನ ಅಭಿಷೇಕ

December 18, 2020

ಮೈಸೂರು, ಡಿ.17(ಆರ್‍ಕೆಬಿ)- ಮೈಸೂರಿನ ಹಲವೆಡೆ ಉತ್ತಮ ರಸ್ತೆಗಳು ವಿದ್ಯುತ್ ಮತ್ತು ಫೋನ್ ಕೇಬಲ್‍ಗಳನ್ನು ಅಳವಡಿಸಲು ಗುತ್ತಿಗೆ ತೆಗೆದುಕೊಂಡಿರುವವರಿಂದ ಹಾಳಾ ಗುತ್ತಿವೆ. ತಮ್ಮ ಕಾಮಗಾರಿಗೆಂದು ಅಗೆದ ರಸ್ತೆಗಳನ್ನು ಅವರು ಸರಿಯಾದ ರೀತಿಯಲ್ಲಿ ಮುಚ್ಚದ ಕಾರಣ ಅವು ಗುಂಡಿ ಬಿದ್ದು ಸಾರ್ವಜನಿಕರು, ವಾಹನ ಸವಾರರು ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ನಗರದ ಹೈವೇ ವೃತ್ತ ದಿಂದ ಶಿವರಾತ್ರೀಶ್ವರನಗರ ಹಾಗೂ ಬನ್ನಿಮಂಟಪ ಕೈಗಾ ರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜೋಡಿ ತೆಂಗಿನ ಮರ ರಸ್ತೆ. ಈ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದೆ. ವಿದ್ಯುತ್ ಕೇಬಲ್ ಅಳವಡಿಸಲೆಂದು ರಸ್ತೆ ತುಂಡರಿಸಲಾಗಿದ್ದು, ಅದನ್ನು ಮುಚ್ಚದೇ ಇರುವುದರಿಂದ ಗುಂಡಿಗೆ ಸಮೀಪದ ನರ್ಮ್ ಮನೆಗಳ ಕೊಚ್ಚೆ ನೀರು ಪ್ರತಿನಿತ್ಯ ರಾತ್ರಿ, ಬೆಳಿಗ್ಗೆ ಹರಿ ಯುತ್ತಿದೆ. ವಿದ್ಯುತ್‍ಗಾಗಿ ರಸ್ತೆ ತುಂಡರಿಸಲಾಗಿದ್ದರಿಂದ ಉಂಟಾದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಭಾರಿ ಹಳ್ಳ ಏರ್ಪಟ್ಟು ಚರಂಡಿ ನೀರು ಗುಂಡಿಯಲ್ಲಿ ಹರಿದು ಜೋಡಿ ತೆಂಗಿನ ಮರ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಹರಿಯು ತ್ತಿದೆ. ಕೆಲವೊಮ್ಮೆ ವಾಹನಗಳು ಸಾಗುವಾಗ ಕೆಲವರಿಗೆ ಚರಂಡಿ ಹೇಸಿಗೆ ನೀರಿನ ಅಭಿಷೇಕವೂ ಆಗಿದೆ. ಈ ಬಗ್ಗೆ ನಗರಪಾಲಿಕೆ ಸಹಾಯವಾಣಿ ಕೇಂದ್ರಕ್ಕೂ ಸಾರ್ವಜನಿಕರು ಸಾಕಷ್ಟು ದೂರು ನೀಡಿದ್ದರೂ ಅಧಿಕಾರಿಗಳಾಗಲೀ, ಈ ಭಾಗದ ನಗರ ಪಾಲಿಕೆ ಸದಸ್ಯರಾಗಲೀ ಗಣನೆಗೆ ತೆಗೆದು ಕೊಂಡಂತೆ ಕಾಣುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಇದೇ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿಯಲ್ಲೂ ವಿದ್ಯುತ್ ಕೇಬಲ್‍ಗಾಗಿ ಅಗೆದ ರಸ್ತೆ ಸರಿಯಾಗಿ ಮುಚ್ಚಿಲ್ಲ. ಗುಂಡಿ ಬಿದ್ದು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.

ಗುತ್ತಿಗೆ ಕಾಮಗಾರಿ ಪಡೆದವರು ತಮ್ಮ ಕೆಲಸ ಮುಗಿ ಯುತ್ತಿದ್ದಂತೆ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಬಿಟ್ಟಿದ್ದಾರೆ. ನಗರ ಪಾಲಿಕೆಯವರಂತೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಾಮಗಾರಿ ನಡೆಸಿದವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಕೆಲವೊಮ್ಮೆ ದಂಡ ವಿಧಿಸಿ, ಪಾಲಿಕೆಗೆ ಆದಾಯ ಮಾಡಿಕೊಳ್ಳುತ್ತಾರೆಯೇ ಹೊರತು, ರಸ್ತೆಯತ್ತ ಸುಳಿಯುವುದೂ ಇಲ್ಲ. ದುರಸ್ತಿಯನ್ನೂ ಮಾಡು ತ್ತಿಲ್ಲ ಎಂದು ಸಾರ್ವಜನಿಕರು, ವಾಹನ ಸವಾರರು ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Translate »