ಮೈಸೂರು,ಸೆ.30(ಆರ್‍ಕೆ)- ಬೋಗಸ್ ಷೇರು ಮಾರುಕಟ್ಟೆ ಕಂಪನಿ ಹೆಸರಲ್ಲಿ ಕೋಟ್ಯಾಂ ತರ ರೂ. ವಂಚಿಸಿರುವ ಪ್ರಕರಣ ಮೈಸೂರಿನ ವಿ.ವಿ.ಪುರಂ ಠಾಣಾ ವ್ಯಾಪ್ತಿಯಲ್ಲಿ ಬಯಲಿಗೆ ಬಂದಿದೆ. ಇತ್ತೀಚೆಗಷ್ಟೇ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ಮಂದಿಯಿಂದ ಕೋಟ್ಯಾಂತರ ರೂ. ಹಣ ವಸೂಲಿ ಮಾಡಿಕೊಂಡು ಸ್ಟಾಕ್ ಬ್ರೋಕರ್‍ಗಳು ಪರಾರಿಯಾಗಿರುವ ಘಟನೆ ಬೆನ್ನಲ್ಲೇ ಇದೀಗ ಸುಮಾರು 50 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದು ವ್ಯಕ್ತಿಯೋರ್ವ ಪಂಗ ನಾಮ ಹಾಕಿ ಪರಾರಿ ಯಾಗಿರುವ ಪ್ರಕರಣ ಗೋಕುಲಂ 3ನೇ ಹಂತದ ಕಾಂಟೂರು ರಸ್ತೆಯಲ್ಲಿ ನಡೆದಿದೆ. ಈ ಕುರಿತಂತೆ ಹಾಸನದ ವಿದ್ಯಾನಗರ ಕುವೆಂಪು ರಸ್ತೆ, ಕ್ರೈಸ್ಟ್ ಸ್ಕೂಲ್ ಬಳಿಯ ನಿವಾಸಿ 47 ವರ್ಷದ ಸಿ.ಹೆಚ್.ನಾಗೇಶ್ ಬಿನ್ ಲೇಟ್ ಕುಚ್ಚೇಗೌಡ ಅವರು ಸೆ.19ರಂದು ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾಂತರಾಜ್ ಎಂಬುವರು ನನ್ನ ಕಾಲೇಜು ಸ್ನೇಹಿತನಾಗಿದ್ದು 2019 ಸೆಪ್ಟೆಂಬರ್ ಮಾಹೆಯಲ್ಲಿ ತನ್ನ ಕಾರಿನ ಡ್ರೈವರ್ ಮಧು ಎಂಬುವನೊಂದಿಗೆ ಹಾಸನದ ನನ್ನ ಮನೆಗೆ ಬಂದಿದ್ದ. ಮೈಸೂರಿನ ಗೋಕುಲಂ 3ನೇ ಹಂತದ ಕಾಂಟೂರು ರಸ್ತೆಯಲ್ಲಿ ಎಬಿಎನ್ ಎಂಟರ್‍ಪ್ರೈಸಸ್ ಎಂಬ ಕಂಪನಿ ನಡೆಸುತ್ತಿದ್ದೇನೆಂದು ಹೇಳಿ, ಸದರಿ ಕಂಪನಿಯಲ್ಲಿ ಹಲವರು ಷೇರುಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ನೀವು ಸಹ ಹಣ ತೊಡಗಿಸಿದರೆ, ಅಧಿಕ ಲಾಭಾಂಶ ಕೊಡುತ್ತೇನೆಂದು ಹೇಳಿ, ನನ್ನನ್ನು ನಂಬಿಸಿದ ಎಂದು ಅವರು ತಿಳಿಸಿದ್ದಾರೆ.
ಅವರ ಮಾತನ್ನು ನಂಬಿದ ನಾನು 2019ರ ಸೆಪ್ಟೆಂಬರ್ ತಿಂಗಳಲ್ಲಿ 2 ಕೋಟಿ ರೂ, ಮತ್ತು 2020ರ ಮೇ ಮಾಹೆಯಲ್ಲಿ 2 ಕೋಟಿ ರೂ.ಗಳನ್ನು (1.55 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗೆ ಆರ್‍ಟಿಜಿಎಸ್ ಮೂಲಕ ಮತ್ತು 2.45 ಕೋಟಿ ರೂ.ಗಳನ್ನು ನಗದಾಗಿ) ನೀಡಿದ್ದೇನೆ. ನಂತರದಲ್ಲಿ ನಾನು ಹೂಡಿಕೆ ಮಾಡಿರುವ 4 ಕೋಟಿ ರೂ ಹಣಕ್ಕೆ ಡಿವಿಡೆಂಡ್ ಅನ್ನು ಕೇಳಿದೆನಾದರೂ ಕಾಂತರಾಜು ಸಬೂಬು ಹೇಳುತ್ತಾ ಬಂದು ನಂತರ ಕಂಪನಿಯೂ ನಷ್ಟದಲ್ಲಿದೆ ಮುಂದಿನ ದಿನಗಳಲ್ಲಿ ಕೊಡುವುದಾಗಿ ಹೇಳುತ್ತಿದ್ದನು ಎಂದು ನಾಗೇಶ್ ದೂರಿನಲ್ಲಿ ತಿಳಿಸಿದ್ದಾರೆ. ಇದುವರೆವಿಗೂ ಒಂದು ನಯಾಪೈಸೆ ಡಿವಿಡೆಂಡ್ ನೀಡದೆ ಫೋನ್ ಮಾಡಲಾಗಿ, ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿಯಿತು. ತದನಂತರ ನಾನು ಮೈಸೂರಿನ ಗೋಕುಲಂ ಕಾಂಟೂರ್ ರಸ್ತೆಯಲ್ಲಿರುವ ಆತನ ಎಬಿಎನ್ ಎಂಟರ್‍ಪ್ರೈಸಸ್ ಬಳಿಗೆ ಹೋಗಿ ನೋಡಿದಾಗ ಬಾಗಿಲು ಮುಚ್ಚಿರುವುದು ತಿಳಿದು ಬಂದಿತು. ನನ್ನಿಂದ ಪಡೆದ ಅಸಲು ಹಣ ಹಾಗೂ ಅದಕ್ಕೆ ಬರಬೇಕಾಗಿದ್ದ ಡಿವಿಡೆಂಡ್ ಹಣವನ್ನು ನೀಡದೆ ನನಗೆ ವಂಚನೆ ಮತ್ತು ನಂಬಿಕೆ ದ್ರೋಹ ಮಾಡಿರುವ ಕಾಂತರಾಜು ವಿರುದ್ಧ ಕ್ರಮಕೈಗೊಂಡು ನನ್ನ ಹಣ ಕೊಡಿಸಿಕೊಡಬೇಕೆಂದು ನಾಗೇಶ್ ದೂರಿನಲ್ಲಿ ಕೋರಿಕೊಂಡಿದ್ದಾರೆ.
ಸೆಪ್ಟೆಂಬರ್ 19ರಂದು ಸಿಎಚ್ ನಾಗೇಶ್, ಶ್ರೀಮತಿ ಉಷಾಕಾಂತರಾಜು, ಶ್ರವಂತ್ ಕಾಂತರಾಜು ಹಾಗೂ ಕಾರು ಚಾಲಕ ಮಧು ಅವರ ವಿರುದ್ಧ ಐಪಿಸಿ ಸೆಕ್ಷನ್ 46, 420 ರೆಡ್‍ವಿತ್ 34 ರೀತಿಯಾ ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಠಾಣೆ ಇನ್‍ಸ್ಪೆಕ್ಟರ್ ಎಲ್.ಅರುಣ್, ತನಿಖೆ ನಡೆಸುತ್ತಿದ್ದಾರೆ. ನಾಗೇಶ್ ರೀತಿಯಲ್ಲೇ ಹಲವು ಮಂದಿ ಪ್ರತಿಷ್ಠಿತ ವ್ಯಕ್ತಿಗಳು ಕಾಂತರಾಜು ಮಾಡಿದ ಮೋಡಿಗೆ ಬಲಿಯಾಗಿದ್ದು, ಪ್ರತಿಯೊಬ್ಬರೂ ಲಕ್ಷಾಂತರ ರೂ.ಗಳನ್ನು ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಹಣ ಹೂಡಿಕೆ ಮಾಡಿದವರೆಲ್ಲರಿಗೂ ಕಾಂತರಾಜು ಚೆಕ್‍ಗಳನ್ನು ನೀಡಿದ್ದು, ಆತನ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡುತ್ತಿರುವ ಪೊಲೀಸರು ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಈ ರೀತಿ ನಕಲಿ ಕಂಪನಿಗಳ ಹೆಸರಲ್ಲಿ ಕೋಟ್ಯಾಂತರ ರೂ ಸಂಗ್ರಹಿಸಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಾಗ್ಯೂ ಹಲವರು ಇಂತಹ ಮೋಸಗಾರರ ಬಲೆಗೆ ಬಿದ್ದು, ಹಣಕಳೆದುಕೊಳ್ಳುವ ಪ್ರಕರಣಗಳು ಮೈಸೂರು ನಗರದಲ್ಲಿ ಮರುಕಳಿಸುತ್ತಿವೆ. ಇಂತಹ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವವರ ಪೈಕಿ, ವೈದ್ಯರು, ಇಂಜಿನಿಯರ್‍ಗಳು, ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಬಹುಪಾಲಿದ್ದು, ಅವರಲ್ಲದೇ ಅವರ ಕುಟುಂಬದ ಇತರ ಸದಸ್ಯರ ಹೆಸರಿನಲ್ಲೂ ಅಧಿಕ ಲಾಭದ ಆಸೆಗಾಗಿ ಅಥವಾ ಬಡ್ಡಿ ಆಮಿಷಕ್ಕಾಗಿ ಕೋಟ್ಯಾಂತರ ರೂ.ಗಳನ್ನು ವಿನಿಯೋಗಿಸಿ ಮೋಸ ಹೋಗುತ್ತಿರುವುದು ವಿಪರ್ಯಾಸವೆನಿಸಿದೆ.