ಮೈಸೂರು, ಸೆ.30-ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ರಲ್ಲಿ ಹಿಂದಿನ ಸಿಐಟಿಬಿ ಹಾಗೂ ಹಾಲಿ ಮುಡಾದಿಂದ ಹಂಚಲ್ಪಟ್ಟ ನಿವೇಶನಗಳನ್ನು ಖರೀದಿಸಿ ಮನೆ ನಿರ್ಮಿಸಿಕೊಂಡಿರುವವರ ಹಲವು ವರ್ಷಗಳ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ದೊರೆತಿದೆ.
205.091/2 ಎಕರೆ ವಿಸ್ತೀರ್ಣದ ಸಿದ್ಧಾರ್ಥನಗರ, 105 ಎಕರೆ ವಿಸ್ತೀರ್ಣದ ಕೆ.ಸಿ.ಬಡಾವಣೆ, 44.20 ಎಕರೆ ವಿಸ್ತೀರ್ಣದ ಜೆ.ಸಿ.ಬಡಾವಣೆ ಸೇರಿದಂತೆ ಒಟ್ಟು 354.291/2 ಎಕರೆ ಭೂಮಿಯನ್ನು ಬಿ-ಖರಾಬಿನಿಂದ ವಿಹಿತಗೊಳಿಸಿದ್ದು, ಈ ಬಡಾವಣೆಗಳಲ್ಲಿ ಖಾತಾ ನೋಂದಣಿ, ವರ್ಗಾವಣೆ ಹಾಗೂ ಕಟ್ಟಡ ಪರವಾನಗಿ ನೀಡಲು ಕೆಲವು ಷರತ್ತುಗಳೊಂದಿಗೆ ನಗರ ಪಾಲಿಕೆ ಆಯುಕ್ತರು ಸೆ.28ರಂದು ಆದೇಶ ಹೊರಡಿಸಿದ್ದಾರೆ.
ನ್ಯಾಯಾಲಯದಿಂದ ಬರಬಹುದಾದ ತೀರ್ಪು ಗಳಿಗೆ ಬದ್ಧರಾಗಿರಬೇಕು. ಕಂದಾಯ ಇಲಾಖೆಯಿಂದ ಹೊರಡಿಸಬಹುದಾದ ಆದೇಶಗಳಿಗೆ, ನಗರಾಭಿ ವೃದ್ಧಿ ಇಲಾಖೆಯಿಂದ ಹೊರಡಿಸಬಹುದಾದ ಆದೇಶ ಗಳಿಗೆ ಹಾಗೂ ಜಿಲ್ಲಾಧಿಕಾರಿಗಳು ಹೊರಡಿಸಬಹು ದಾದ ಆದೇಶಗಳಿಗೆ ಬದ್ಧರಾಗಿರಬೇಕು. ನ್ಯಾಯಾ ಲಯದಲ್ಲಿ ವ್ಯತಿರಿಕ್ತ ತೀರ್ಪುಗಳು ಬಂದಲ್ಲಿ ಅಥವಾ ಕಾನೂನು ತೊಡಕು ಉಂಟಾದಲ್ಲಿ ಖಾತೆ, ಕಂದಾಯ ವನ್ನು ರದ್ದುಪಡಿಸುವ ಸಂಪೂರ್ಣ ಅಧಿಕಾರವನ್ನು ಮಹಾನಗರ ಪಾಲಿಕೆ ಕಾಯ್ದಿರಿಸಿಕೊಂಡಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿವರ: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಭೂಮಿಯು ಬಿ-ಖರಾಬು (ಸರ್ಕಾರಿ ಜಮೀನು) ಎಂದು ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಆದೇಶ ಹೊರಡಿಸಿ ದ್ದರು. ಅವರ ಆದೇಶದನ್ವಯ ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ಕ್ಕೆ ಸಂಬಂಧಿಸಿದ ಜಮೀನುಗಳಲ್ಲಿ ಯಾವುದೇ ಕರ ಪಾವತಿ, ನೋಂದಣಿ, ವರ್ಗಾವಣೆ ಮತ್ತು ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ನೀಡಬಾರದು ಎಂದು ಮೈಸೂರು ನಗರ ಪಾಲಿಕೆ ಆದೇಶ ಹೊರಡಿಸಿತ್ತು. ಈ ಆದೇಶದಿಂದಾಗಿ ಸಿಐಟಿಬಿ ಮತ್ತು ಮುಡಾದಿಂದ ಅಭಿವೃದ್ಧಿಗೊಂಡ ಸಿದ್ಧಾರ್ಥನಗರ, ಕೆ.ಸಿ., ಜೆ.ಸಿ.ನಗರ ಬಡಾವಣೆಗಳಲ್ಲಿ ನಿವೇಶನ ಖರೀದಿ ಸಿದ್ದ ಸಾವಿರಾರು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು.
ಈ ಸಂಬಂಧ ನಗರ ಪಾಲಿಕೆ ಮತ್ತು ಮುಡಾ ಕಚೇರಿ ಮುಂದೆ ಹಲವಾರು ಹೋರಾಟಗಳು ನಡೆದಿದ್ದವು. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ `ಕುರುಬಾರ ಹಳ್ಳಿ ಸರ್ವೆ ನಂ.4ರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ ರಚಿಸಿಕೊಂಡು ನಿವಾಸಿಗಳು ಹೋರಾಟಕ್ಕಿಳಿದಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಈ ಭೂಮಿಯನ್ನು ಬಿ-ಖರಾಬಿನಿಂದ ವಿಹಿತಗೊಳಿಸಿ ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತಾದರೂ, ಅದನ್ನು ಸರ್ಕಾರಿ ಆದೇಶವಾಗಿ ಹೊರಡಿಸುವ ಮುನ್ನವೇ ಅವರ ಸರ್ಕಾರದ ಅವಧಿ ಮುಕ್ತಾಯಗೊಂಡಿತ್ತು. ಆನಂತರ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರ ಸ್ವಾಮಿ ಮೈಸೂರಿನ ಸುತ್ತೂರು ಮಠದ ಶಾಖೆಗೆ ಭೇಟಿ ನೀಡಿದ್ದಾಗ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ ನಿವಾಸಿ ಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಸಂಕಷ್ಟ ನಿವಾರಿಸುವಂತೆ ಮನವಿ ಮಾಡಿದ್ದರು.
ಈ ಮಧ್ಯೆ ಕುರುಬಾರಹಳ್ಳಿ ಸರ್ವೆ ನಂ.4, ಆಲನ ಹಳ್ಳಿ ಸರ್ವೆ ನಂ.41, ಚೌಡಹಳ್ಳಿ ಸರ್ವೆ ನಂ.39ಕ್ಕೆ ಸೇರಿದ ನೂರಾರು ಜಮೀನು ಮಾಲೀಕರು ಜಿಲ್ಲಾಧಿಕಾರಿ ಗಳ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2020ರ ಜೂನ್ 19ರಂದು ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ಜಮೀ ನನ್ನು ಬಿ-ಖರಾಬು ಎಂದು ಆದೇಶಿಸಿದ್ದ ಜಿಲ್ಲಾಧಿಕಾರಿ ಗಳ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಜಮೀನುಗಳ ದಾಖಲೆಗಳಲ್ಲಿ ಎಲ್ಲೆಲ್ಲಿ ಬಿ-ಖರಾಬು ಎಂದು ಇದೆಯೋ ಅಲ್ಲೆಲ್ಲಾ ಬಿ-ಖರಾಬು ಎಂಬು ದನ್ನು ತೆಗೆದು ಹಾಕುವಂತೆಯೂ, ನಿವಾಸಿಗಳ ಹೆಸರುಗಳಿಗೆ ಮ್ಯುಟೇಷನ್ ಮಾಡುವಂತೆಯೂ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಸಿದ್ಧಾರ್ಥನಗರ, ಕೆ.ಸಿ. ಮತ್ತು ಜೆ.ಸಿ.ಬಡಾವಣೆ ವ್ಯಾಪ್ತಿಯ 354.2912 ಎಕರೆ ಜಮೀನು ಬಿ-ಖರಾಬು ಅಧಿಸೂಚನೆಗೆ ಬರುವುದಿಲ್ಲ ಎಂದು ಕಂದಾಯ ಇಲಾಖೆಯ ಕಾರ್ಯ ದರ್ಶಿಗಳು ನಗರಾಭಿವೃದ್ಧಿ ಇಲಾಖೆಗೆ ಮುಂದಿನ ಕ್ರಮಕ್ಕಾಗಿ 2020ರ ಜುಲೈ 14ರಂದು ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇರೆಗೆ ಈ ಜಮೀನುಗಳನ್ನು ಬಿ-ಖರಾಬು ಎಂದು ಪರಿಗಣಿಸಿ ಹೊರಡಿಸಿರುವ ಆದೇಶದಿಂದ ವಿಹಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಜು.28ರಂದು ನಿರ್ದೇಶಿಸಿದ್ದರು.
ಹೈಕೋರ್ಟ್‍ನಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ವಕೀಲರಿಗೆ ಆಗಸ್ಟ್ 26ರಂದು ಪತ್ರ ಬರೆದಿದ್ದ ಜಿಲ್ಲಾಧಿಕಾರಿಗಳು, ಈ ಮೂರೂ ಬಡಾವಣೆಗಳ ಜಮೀನು ಬಿ-ಖರಾಬು ಅಧಿಸೂಚನೆಗೆ ಬರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಆದೇಶದ ಬಗ್ಗೆ ಮೇಲ್ಮನವಿಯಲ್ಲಿ ಹೈಕೋರ್ಟ್ ಅವಗಾಹನೆಗೆ ಸಲ್ಲಿಸಲು ಕೋರಿದ್ದರು. ಈ ನಡುವೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸೆ.5ರಂದು ನಗರ ಪಾಲಿಕೆಗೆ ಪತ್ರ ಬರೆದು ಸಿದ್ಧಾರ್ಥ ಬಡಾವಣೆ, ಕೆ.ಸಿ. ಮತ್ತು ಜೆ.ಸಿ. ಬಡಾವಣೆಗಳ ನಿವೇಶನ ಗಳಿಗೆ ಇದುವರೆಗೂ ಸ್ಥಗಿತಗೊಳಿಸಲಾಗಿದ್ದ ಪ್ರಕ್ರಿಯೆಗಳನ್ನು ಅಂತ್ಯಗೊಳಿಸಿ ಕಂದಾಯ ಪಾವತಿಸಿಕೊಳ್ಳುವ ಮತ್ತು ಖಾತಾ ವರ್ಗಾವಣೆ ಹಾಗೂ ಕಟ್ಟಡ ಪರವಾನಗಿ ನೀಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದರು. ಸೆ.22ರಂದು ಜಿಲ್ಲಾಧಿಕಾರಿಗಳು ನೀಡಿರುವ ನಿರ್ದೇಶನದಂತೆ 2013ರ ಆ.17ರಂದು ಅಂದಿನ ನಗರ ಪಾಲಿಕೆ ಆಯುಕ್ತರು ಹೊರಡಿಸಿದ್ದ ಸುತ್ತೋಲೆಯನ್ನು ಮಾರ್ಪಡಿಸಿ ಸಿದ್ಧಾರ್ಥನಗರ, ಕೆ.ಸಿ. ಮತ್ತು ಜೆ.ಸಿ. ಬಡಾವಣೆ ವ್ಯಾಪ್ತಿಯ ಒಟ್ಟು 354.291/2 ಎಕರೆ ಭೂಮಿಗೆ ಸಂಬಂಧಪಟ್ಟಂತೆ ಖಾತಾ ನೋಂದಣೆ, ವರ್ಗಾವಣೆ ಮತ್ತು ಕಟ್ಟಡ ನಿರ್ಮಾಣ ಪರವಾನಗಿ ನೀಡಲು ಷರತ್ತುಬದ್ಧವಾಗಿ ಪಾಲಿಕೆ ಆಯುಕ್ತರು ಸೆ.28ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದಾಗಿ ಈ ಬಡಾವಣೆಗಳ ನಿವಾಸಿಗಳ ಹಲವು ವರ್ಷದ ಸಂಕಷ್ಟಕ್ಕೆ ಮುಕ್ತಿ ದೊರೆತಂತಾಗಿದೆ.