ಚಾಮುಂಡಿಬೆಟ್ಟದಲ್ಲಿ ಮತ್ತೆ ಭೂಕುಸಿತ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಮತ್ತೆ ಭೂಕುಸಿತ

October 22, 2022

ಮೈಸೂರು, ಅ. 21 (ಆರ್‍ಕೆ)- ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನ ಚಾಮುಂಡಿಬೆಟ್ಟದ ನಂದಿ ಪ್ರತಿಮೆ ರಸ್ತೆಯಲ್ಲಿ ವ್ಯೂ ಪಾಯಿಂಟ್ ಬಳಿ ಕಳೆದ ರಾತ್ರಿ ಮತ್ತೆ ಭೂ ಕುಸಿತ ಉಂಟಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಘು, ಸಿಬ್ಬಂದಿಗಳೊಂದಿಗೆ ಇಂದು ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದರು. ಈ ಹಿಂದೆಯೂ ಚಾಮುಂಡಿಬೆಟ್ಟದ ನಂದಿ ಪ್ರತಿಮೆ ರಸ್ತೆಯಲ್ಲಿ ಹಲವು ಕಡೆ ಭೂಕುಸಿತವಾಗಿತ್ತು. ಅದಕ್ಕೆ ಹೊಂದಿಕೊಂಡಂತೆ ವ್ಯೂ ಪಾಯಿಂಟ್‍ಗೆ ಅನತಿ ದೂರದಲ್ಲಿ ಕಳೆದ ರಾತ್ರಿ ಮತ್ತೆ ಕುಸಿದಿದೆ. ಅಲ್ಲಿ ರಸ್ತೆ ಚಿಕ್ಕದಾಗಿ ಬಿರುಕು ಬಿಟ್ಟಿದ್ದ ರಿಂದ ಭೂ ಕುಸಿತವಾಗುತ್ತದೆ ಎಂಬ ನಿರೀಕೆ ಇತ್ತು ಎಂದು ರಘು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಭೂ ಕುಸಿತವಾಗಿರುವ ಸ್ಥಳದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿ ಕೊಳ್ಳಬೇಕೆಂದರೆ ಮಳೆ ನಿಲ್ಲಬೇಕು. ಈಗ ಉಂಟಾಗಿರುವ ಕುಸಿತದ ಬಗ್ಗೆ ಇಂದು ಸಂಜೆ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದರು. ಕಳೆದ ಒಂದು ವರ್ಷದಿಂದಲೇ ನಂದಿ ಪ್ರತಿಮೆ ರಸ್ತೆ ಬಂದ್ ಮಾಡಲಾಗಿದೆ. ಈಗ ಮತ್ತೆ ಭೂ ಕುಸಿತವಾಗಿರುವುದರಿಂದ ಮತ್ತಷ್ಟು ಎಚ್ಚರಿಕೆ ವಹಿಸಿ, ಯಾವುದೇ ವಾಹನ ಇಲ್ಲಿ ಸಂಚರಿಸದಂತೆ ಎಚ್ಚರಿಕೆ ವಹಿಸುತ್ತಿದ್ದೇವೆ. ಮಳೆ ನಿಂತ ಮೇಲೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಂಕ್ರಿಟ್ ತಡೆ ಗೋಡೆ ನಿರ್ಮಿಸುವ ಕೆಲಸ ಆರಂಭಿಸುತ್ತೇವೆ ಎಂದು ಹೇಳಿದರು.

2021ರ ಅಕ್ಟೋಬರ್ 21 ರಂದು ರಾತ್ರಿ ನಂದಿ ಪ್ರತಿಮೆ ರಸ್ತೆಯಲ್ಲಿ ಭೂ ಕುಸಿತ ವಾಗಿತ್ತು. ನಂತರ 2021ರ ನವೆಂಬರ್ 18 ಸೇರಿದಂತೆ 3 ಬಾರಿ ಭೂಕುಸಿತವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆ ವೇಳೆ ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನ ತಾಂತ್ರಿಕ ತಜ್ಞರು ಬಂದು ಸ್ಥಳ ಪರಿಶೀಲಿಸಿ, ಅವರ ಸಲಹೆ, ವಿನ್ಯಾಸದಂತೆಯೇ ಮೈಸೂರಿನ ಲೋಕೋಪಯೋಗಿ ಇಲಾಖೆ ಇಂಜಿನಿಯರುಗಳು ಕಾಮಗಾರಿಯನ್ನು ಆರಂಭಿಸಿದ್ದರಾದರೂ ಮಳೆಯಿಂದಾಗಿ ಕೆಲ ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ನಿರಂತರವಾಗಿ ಮಳೆ ಸುರಿದರೆ ಬೆಟ್ಟದಿಂದ ನೀರು ಹರಿದು ಇನ್ನೂ ಹಲವೆಡೆ ಭೂಕುಸಿತ ವಾಗಬಹುದು, ಮರಗಳು, ಬಂಡೆಗಳು ಉರುಳುವ ಸಾಧ್ಯತೆ ಇದ್ದು, ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಆಗಿಂದಾಗ್ಗೆ ಹಾನಿ ಕುರಿತು ಅವಲೋಕಿಸಿ, ಮಳೆ ನಿಂತ ಮೇಲೆ ಸರಿಪಡಿಸುವ ಕಾರ್ಯ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Translate »