ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡದ ರಸಾಯನಶಾಸ್ತ್ರ ಲ್ಯಾಬ್ ಭಾಗ ಕುಸಿತ
ಮೈಸೂರು

ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡದ ರಸಾಯನಶಾಸ್ತ್ರ ಲ್ಯಾಬ್ ಭಾಗ ಕುಸಿತ

October 22, 2022

ಮೈಸೂರು,ಅ.21(ಎಂಟಿವೈ)-ಕುಸಿದ ಮೈಸೂರಿನ ಪಾರಂಪ ರಿಕ ಕಟ್ಟಡಗಳ ಸಾಲಿಗೆ ಶತಮಾನದ ಇತಿಹಾಸವಿರುವ ಮಹಾ ರಾಣಿ ವಿಜ್ಞಾನ ಕಾಲೇಜು ಕಟ್ಟಡವೂ ಸೇರ್ಪಡೆಗೊಂಡಿದೆ.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡದ ಒಂದು ಭಾಗ ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು, ನಿರಂತರ ಮಳೆಯಿಂದ ಕಾಲೇಜಿನ ಪ್ರಯೋಗಾಲಯ ಇರುವ ಕೊಠಡಿ ಭಾಗ(ಜೆಎಲ್‍ಬಿ ರಸ್ತೆ-ಡಿಸಿ ಕಚೇರಿ ರಸ್ತೆ ) ಶುಕ್ರವಾರ ಬೆಳಗ್ಗೆ ಸುಮಾರು 10.42ರ ಸಮಯದಲ್ಲಿ ಕುಸಿದಿದೆ. ತರಗತಿ ಆರಂಭವಾಗಬೇಕಿದ್ದ ಕೆಲವೇ ನಿಮಿಷಗಳ ಮುನ್ನ ಕಟ್ಟಡದ ಮೊದಲ ಹಂತದಲ್ಲಿರುವ ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯದ ಮೇಲ್ಛಾವಣಿ ಹಾಗೂ ಎರಡು ಬದಿ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾರಾಗಿದ್ದಾರೆ. ಐದಾರು ನಿಮಿಷ ತಡವಾಗಿ ಈ ಘಟನೆ ಸಂಭವಿಸಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಇದ್ದಕ್ಕಿದ್ದಂತೆ ಕಟ್ಟಡ ಕುಸಿದಿದ್ದರಿಂದ ವಿದ್ಯಾರ್ಥಿನಿಯರು, ಬೋಧಕ ವರ್ಗ ಹಾಗೂ ಸಿಬ್ಬಂದಿ ತೀವ್ರ ಆತಂಕಕ್ಕೀಡಾಗಿದ್ದಾರೆ. ಸಹಜ ವಾಗಿ ಹಲವು ಬ್ಯಾಚ್‍ಗಳಲ್ಲಿ 40 ವಿದ್ಯಾರ್ಥಿನಿಯರು ಪ್ರಾಯೋಗಿಕ ತರಗತಿಗೆ ಹಾಜರಾಗುತ್ತಿದ್ದರು. ಐವರು ಅಧ್ಯಾಪಕರು, ಅಟೆಂಡರ್ ಸೇರಿದಂತೆ 8ರಿಂದ 10 ಮಂದಿ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಸಿದ ಕಟ್ಟಡದಲ್ಲಿ ರುವ ಉಳಿದ ಕೊಠಡಿಗಳಿಗೂ ಬೀಗ ಹಾಕಿ ವಿದ್ಯಾರ್ಥಿ ನಿಯರನ್ನು ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಶತಮಾನದ ಇತಿಹಾಸವಿರುವ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡವನ್ನು ಸುಣ್ಣದ ಗಾರೆಯಿಂದ ನಿರ್ಮಿ ಸಲಾಗಿದ್ದು, ಇದು ಪಾರಂಪರಿಕ ಕಟ್ಟಡಗಳ ಪಟ್ಟಿಯ ಲ್ಲಿದೆ. ಸೂಕ್ತ ನಿರ್ವಹಣೆ ಕೊರತೆಯಿಂದ ಪ್ರಯೋ ಗಾಲಯ ಭಾಗದ ಮೇಲ್ಛಾವಣಿ ಹಾಗೂ ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದವು. ಕೆಲ ದಿನಗಳಿಂದ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದ ಇಂದು ಕಟ್ಟಡ ಕುಸಿದಿದೆ. ದಸರಾ ರಜೆ ಬಳಿಕ ಕಾಲೇಜು ಪುನಾರಂಭ ಗೊಂಡಾಗಿನಿಂದ ಈವರೆಗೆ ವಿದ್ಯಾರ್ಥಿನಿಯರ ಹಾಜರಾತಿ ಕಡಿಮೆಯಿದ್ದ ಪರಿಣಾಮ ಇಂದಿನಿಂದ ಪ್ರಯೋಗಾ ಲಯ ತರಗತಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾ ಗಿತ್ತು. ಅದೃಷ್ಟವಶಾತ್ ತರಗತಿ ಆರಂಭವಾಗುವ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದೆ. ತರಗತಿ ವೇಳೆ ಕಟ್ಟಡ ಕುಸಿಯುವ ಸೂಚನೆ ತಿಳಿದಿದ್ದರೂ ಎಲ್ಲಾ ವಿದ್ಯಾರ್ಥಿನಿಯರು ತಕ್ಷಣಕ್ಕೆ ಹೊರಬರಲಾಗುತ್ತಿರಲಿಲ್ಲ.

ಎರಡು ದಿನ ರಜೆ: ಘಟನೆ ಹಿನ್ನೆಲೆಯಲ್ಲಿ ಮುಂಜಾ ಗ್ರತಾ ಕ್ರಮವಾಗಿ ಕಾಲೇಜಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಮೇಲ್ಛಾವಣೆ ಕುಸಿತದ ಕಂಪನ ದಿಂದ ಇತರೆ ಕೊಠಡಿಗಳ ಗೋಡೆಗಳೂ ಸಡಿಲಗೊಂಡಿ ರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಯೋಗಾಲಯದ ಕೆಳ ಮಹಡಿಯಲ್ಲಿರುವ ಕೊಠಡಿಗಳನ್ನು ಬಂದ್ ಮಾಡಲಾಗಿದೆ. ವಿದ್ಯಾರ್ಥಿನಿಯರು ಶಿಥಿಲಾವಸ್ಥೆ ತಲುಪಿರುವ ಕಟ್ಟಡದತ್ತ ಸುಳಿಯದಂತೆ ಸೂಚನೆ ನೀಡಲಾಗಿದೆ.

ತುರ್ತು ಕಾರ್ಯಾಚರಣೆ: ಪ್ರಯೋಗಾಲಯ ಕಟ್ಟಡದ ಒಂದು ಪಾಶ್ರ್ವ ಕುಸಿದ ಹಿನ್ನೆಲೆಯಲ್ಲಿ 3 ಅಗ್ನಿಶಾಮಕ ವಾಹನಗಳೊಂದಿಗೆ ಆಗಮಿಸಿದ 15ಕ್ಕೂ ಹೆಚ್ಚು ಸಿಬ್ಬಂದಿ ಕಟ್ಟಡದ ಅವಶೇಷದಡಿ ಯಾರಾದರೂ ಸಿಲುಕಿರಬಹು ದೆಂದು ಅರ್ಧ ಗಂಟೆಗೂ ಹೆಚ್ಚು ಕಾಲ ಶೋಧನಾ ಕಾರ್ಯ ನಡೆಸಿದರು. ಕಟ್ಟಡ ಕುಸಿದ ಸಂದರ್ಭದಲ್ಲಿ ಯಾರೂ ಇರಲಿಲ್ಲ ಎಂದು ಕಾಲೇಜು ಸಿಬ್ಬಂದಿ ತಿಳಿಸಿದರಾದರೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿಯೇ ಅದನ್ನು ಖಚಿತಪಡಿಸಿಕೊಂಡರು. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಎರಡು ಆಂಬುಲೆನ್ಸ್‍ಗಳನ್ನು ಕರೆಸಿ ಕೊಳ್ಳಲಾಗಿತ್ತು, ಆರೋಗ್ಯ ಸಿಬ್ಬಂದಿಯೂ ಸ್ಥಳದಲ್ಲಿದ್ದರು.

ಶಾಸಕ ಎಲ್.ನಾಗೇಂದ್ರ ಪರಿಶೀಲನೆ: ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಾಸಕ ಎಲ್.ನಾಗೇಂದ್ರ ಅವರು, ಕುಸಿದ ಕಟ್ಟಡವನ್ನು ಪರಿಶೀಲಿಸಿ ಕಾಲೇಜು ಪ್ರಾಂಶು ಪಾಲರು, ಉಪನ್ಯಾಸಕರಿಂದ ಮಾಹಿತಿ ಪಡೆದರಲ್ಲದೆ, ಅಲ್ಲಿಂದಲೇ ಉನ್ನತ ಶಿಕ್ಷಣ ಸಚಿವರಿಗೆ ಮಾಹಿತಿ ನೀಡಿದರಲ್ಲದೆ, ಕಟ್ಟಡ ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾರಾಣಿ ವಿಜ್ಞಾನ ಕಾಲೇಜಿನ ಶಿಥಿಲಾವಸ್ಥೆ ತಲುಪಿದ್ದ ಕಟ್ಟಡದ ದುರಸ್ತಿ ಹಾಗೂ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಅದಕ್ಕಾಗಿ ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡಿಸಿದ್ದೆ. ಈ ಕಾಮಗಾರಿಯ ಗುತ್ತಿಗೆಯನ್ನು ಅಶ್ವಿನ್ ಪಾಳೇಗಾರ್ ಎಂಬುವರಿಗೆ ನೀಡಲಾಗಿತ್ತು. ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುವ ಹೊತ್ತಿಗೆ ಈ ಘಟನೆ ನಡೆದಿದೆ. 107 ವರ್ಷದ ಪಾರಂಪರಿಕ ಕಟ್ಟಡ ಕುಸಿದಿರುವುದಕ್ಕೆ ಬೇಸರವಾಗಿದೆ. ಆದರೆ ಘಟನೆಯಲ್ಲಿ ಜೀವಹಾನಿಯಾಗ ದಿರುವುದು ಸಮಾಧಾನ ತಂದಿದೆ ಎಂದರು.

ನಿರ್ವಹಣೆ ವೈಫಲ್ಯ ಕಾರಣ: ಮೈಸೂರಲ್ಲಿ ಹಲವು ಪಾರಂಪರಿಕ ಕಟ್ಟಡಗಳು ಕುಸಿಯಲು ನಿರ್ವಹಣೆಯ ಕೊರತೆಯೇ ಕಾರಣ. ಮಹಾರಾಣಿ ಕಾಲೇಜಿನ ಕಟ್ಟಡ, ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಬಿಲ್ಡಿಂಗ್, ಅಗ್ನಿಶಾಮಕ ಠಾಣೆಯ ಕಟ್ಟಡಗಳು ನಿರ್ವಹಣೆ ಇಲ್ಲದೆಯೇ ಕುಸಿದಿದ್ದು, ಪಾರಂಪರಿಕ ಕಟ್ಟಡವಾದ್ದರಿಂದ ಸುಲಭವಾಗಿ ರಿಪೇರಿ ಕೆಲಸ ಮಾಡಲು ಅವಕಾಶವಿಲ್ಲ. ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳು ಕಠಿಣವಾಗಿದೆ. ತುರ್ತು ದುರಸ್ತಿಗೆ ಅನುಮತಿಯೇ ಸಿಗುವುದಿಲ್ಲ. ಪಾರಂಪರಿಕ ಇಲಾಖೆಯೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಜ್ಞರೊಂದಿಗೆ ಚರ್ಚೆ: ಕಳೆದ ತಿಂಗಳು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿಗೆ ಬಂದಿದ್ದಾಗ ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡದ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಅದಕ್ಕೆ ಮುಖ್ಯಮಂತ್ರಿ ಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಇಂದು ಕಟ್ಟಡ ಕುಸಿದಿದೆ. ಇದಕ್ಕೆ ಬೇಕಾದ ಆರ್ಥಿಕ ನೆರವನ್ನು ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಅವರಲ್ಲಿ ಮನವಿ ಮಾಡುತ್ತೇನೆ. ಈಗ ಕುಸಿದಿರುವ ಕಟ್ಟಡವನ್ನು ದುರಸ್ತಿ ಮಾಡಬೇಕೋ? ಅಥವಾ ಪುನರ್ ನಿರ್ಮಾಣ ಮಾಡಬೇಕೋ? ಎನ್ನುವುದನ್ನು ತಜ್ಞರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆಯುತ್ತೇನೆ. ಕುಸಿತವಾಗಿರುವ ಕಟ್ಟಡಕ್ಕೆ ಹೊಂದಿ ಕೊಂಡಂತಿರುವ ಇನ್ನಿತರ ಕೊಠಡಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಹಾಸ್ಟೆಲ್ ಕಟ್ಟಡವೂ ಭಿನ್ನವಾಗಿಲ್ಲ: ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿ ನಿಗಳ ಹಾಸ್ಟೆಲ್ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕಲಾ ಮತ್ತು ವಿಜ್ಞಾನ ವಿಭಾಗದ 600ಕ್ಕೂ ಹೆಚ್ಚು ವಿದ್ಯಾರ್ಥಿ ನಿಯರು ಹಾಸ್ಟೆಲ್‍ನಲ್ಲಿದ್ದಾರೆ. ಮೂರು ಹಂತದ ಕಟ್ಟಡ ಮಳೆ ಬಂದಾಗಲೆಲ್ಲಾ ಮೇಲ್ಛಾವಣಿಯಿಂದ ಸೋರು ತ್ತದೆ. ಹಲವೆಡೆ ವಸ್ತಿ ಹಿಡಿದಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯಾರ್ಥಿನಿಯರಿದ್ದಾರೆ. ಕಾಲೇಜು ಪ್ರಯೋಗಾಲಯದ ಕಟ್ಟಡ ಕುಸಿದ ಮೇಲಂತೂ ಅವರ ಆತಂಕ, ದುಗುಡ ಹೆಚ್ಚಾಗಿದೆ. ಯಾವ ಸಂದರ್ಭದಲ್ಲಿ ಏನಾಗುತ್ತದೋ? ಎಂದು ಭಯಪಡುತ್ತಿದ್ದಾರೆ. ಜೋರು ಮಳೆಯಾದಾಗ ಭಯ ಇನ್ನೂ ಹೆಚ್ಚಾಗುತ್ತದೆ ಎಂದು ಕಾಲೇಜಿನವರೇ ತಿಳಿಸಿದ್ದಾರೆ.

Translate »