ಮೈಸೂರು,ಮಾ.29(ಎಂಟಿವೈ)- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವಲಯದಲ್ಲಿ ತಾಯಿಯಿಂದ ಬೇರ್ಪಟ್ಟ ಮತ್ತೊಂದು ಹುಲಿ ಮರಿಯ ಕಳೇ ಬರ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಇದರಿಂದ ಮೃತಪಟ್ಟ ಹುಲಿಮರಿಗಳ ಸಂಖ್ಯೆ 3ಕ್ಕೆ ಏರಿದಂತಾಗಿದ್ದು, ಮೈಸೂರು ಮೃಗಾಲಯ ದಲ್ಲಿ ಚಿಕಿತ್ಸೆ ನೀಡುತ್ತಿರುವ ಒಂದು ಹುಲಿ ಮರಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಬಂಡೀಪುರ ಅರಣ್ಯದ ನುಗು ವಲಯದಲ್ಲಿ ಭಾನುವಾರ ಮಧ್ಯಾಹ್ನ ನಿತ್ರಾಣಗೊಂಡ ಸ್ಥಿತಿಯಲ್ಲಿ ಮೂರು ಹುಲಿ ಮರಿಗಳು ಗಸ್ತು ನಡೆಸುತ್ತಿದ್ದ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದವು. ಅದರಲ್ಲಿ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಒಂದು ಹೆಣ್ಣು ಮರಿ ರಕ್ಷಣೆ ಮಾಡಿದ ಕೆಲವೇ ಸಮಯದಲ್ಲಿ ಅಸುನೀಗಿದ್ದರೆ, ಮತ್ತೊಂದು ಹೆಣ್ಣು ಮರಿ ಮೈಸೂರು ಮೃಗಾಲಯದಲ್ಲಿ ಆರೈಕೆ ಯಲ್ಲಿದ್ದಾಗಲೇ ಮೃತಪಟ್ಟಿತ್ತು. ತಾಯಿಯೊಂದಿಗಿದ್ದ ಮತ್ತೊಂದು ಮರಿ ಹಾಗೂ ತಾಯಿ ಹುಲಿಯನ್ನು ಪತ್ತೆ ಮಾಡಲು ಬಂಡೀ ಪುರ ಉಪವಿಭಾಗದ ಎಸಿಎಫ್ ಸುಮಿತ್‍ಕುಮಾರ್ ಸುಭಾಷ್ ರಾವ್ ಪಾಟೀಲ್, ಹಾಗೂ ಹೆಡಿಯಾಲ ಆರ್‍ಎಫ್‍ಒ ಮಂಜುನಾಥ್ ನೇತೃತ್ವದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸ ಲಾಗಿತ್ತು. ಅಲ್ಲದೆ ತಾಯಿ ಹುಲಿ ಪತ್ತೆ ಮಾಡಲು ಕುರಿಯೊಂದನ್ನು ಕಟ್ಟಿಹಾಕಲಾಗಿತ್ತು. 5-6 ಕ್ಯಾಮರಾ ಟ್ರ್ಯಾಪ್ ಬಳಸಲಾಗಿತ್ತು. ಇಡೀ ದಿನ ತಾಯಿ ಮತ್ತು ಅದರ ಮರಿ ಸುಳಿವು ದೊರೆತಿರಲಿಲ್ಲ.
ಇಂದು ಬೆಳಗ್ಗೆಯಿಂದ ಕಾಡಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಮಧ್ಯಾಹ್ನದ ವೇಳೆಗೆ ತಾಯಿಯೊಂದಿ ಗಿದ್ದ ನಾಲ್ಕನೇ ಮರಿಯ ಕಳೇಬರ ಪೊದೆಯೊಂದರ ಬಳಿ ಪತ್ತೆಯಾಗಿದೆ. ಎರಡು ದಿನದ ಹಿಂದೆಯೇ ಈ ಹುಲಿ ಮರಿ ಮೃತಪಟ್ಟಿರುವುದರಿಂದ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಚೇತರಿಕೆ: ಮೃಗಾಲಯದಲ್ಲಿ ಚಿಕಿತ್ಸೆ ನೀಡುತ್ತಿರುವ ಗಂಡು ಮರಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಬೆಳಗ್ಗೆ ಮಾಂಸದ ಕೈಮದುಂಡೆ ತಿಂದು ನೀರು ಕುಡಿದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಅಧಿಕಾರಿಗಳಿಗೆ ಸಂತಸ ತಂದಿದೆ.