ಯಾವುದೇ ಅಧಿಕಾರಿ ಮೈಸೂರಲ್ಲಿ ಭೂ ಮಾಫಿಯಾ  ವಿರುದ್ಧ ಸೊಲ್ಲೆತ್ತುವ ಧೈರ್ಯ ಇನ್ನು ಮಾಡಲಾರರು…!
ಮೈಸೂರು

ಯಾವುದೇ ಅಧಿಕಾರಿ ಮೈಸೂರಲ್ಲಿ ಭೂ ಮಾಫಿಯಾ ವಿರುದ್ಧ ಸೊಲ್ಲೆತ್ತುವ ಧೈರ್ಯ ಇನ್ನು ಮಾಡಲಾರರು…!

June 9, 2021

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರೊಂದಿಗೆ `ಮೈಸೂರು ಮಿತ್ರ’ ನಡೆಸಿದ ಸಂದರ್ಶನ.

`ಮೈಸೂರು ಮಿತ್ರ’: ಮೈಸೂರು ಜನ ನನ್ನನ್ನು ‘ಮನೆ ಮಗಳಂತೆ’ ಕಂಡರು ಎಂದು ಮೊನ್ನೆ ನೀವು ಭಾವುಕರಾಗಿ ನುಡಿದಿದ್ದೀರಿ!?…
ರೋಹಿಣಿ ಸಿಂಧೂರಿ: ನಾನು ಇಲ್ಲಿಂದ ವರ್ಗವಾದ ಬಳಿಕ ಮೈಸೂರಿನ ಜನರು ನನಗೆ ನೀಡಿದ ಬೆಂಬಲ ಕಂಡು ನಿಜಕ್ಕೂ ಮನತುಂಬಿ ಬಂತು. ಹಾಗಾಗಿಯೇ ನಾನು ಆ ಮಾತು ಹೇಳಿದೆ.

`ಮೈಸೂರು ಮಿತ್ರ’: ಮೊನ್ನೆ ಕೇರ್ಗಳ್ಳಿ ಕೆರೆ ಬಗ್ಗೆ ಪ್ರಸ್ತಾಪಿಸಿದ್ದೀರಿ. ಆ ಬಗ್ಗೆ ವಿವರ ನೀಡಲು ಸಾಧ್ಯವೇ?

ರೋಹಿಣಿ ಸಿಂಧೂರಿ: ಜಯಪುರ ಹೋಬಳಿಯಲ್ಲಿ ಇರುವ 61 ಎಕರೆ ವಿಸ್ತಾರದ ಕೇರ್ಗಳ್ಳಿ ಕೆರೆ ಹಾಗೂ ದಟ್ಟಗಳ್ಳಿ ಬಳಿ ಇರುವ ಅಯ್ಯಾಜಯ್ಯನಹುಂಡಿ ಕೆರೆಗೆ ಪುನಶ್ಚೇತನ ನೀಡಬೇಕೆಂದು ತೀರ್ಮಾನಿಸಿದ್ದೆವು. ಆ ಕಾರಣಕ್ಕಾಗಿಯೇ ಈ ಕೆರೆಗಳ ಪಕ್ಕದಲ್ಲಿನ ಜಮೀನಿನಲ್ಲಿ ವಸತಿ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿ ಸಬೇಕೆಂದು ಕೋರಿ ಸರ್ಕಾರಕ್ಕೆ ಕಳುಹಿಸಲಾಗಿದ್ದ ಪ್ರಸ್ತಾವನೆಯೊಂದನ್ನು ನಾನು ರದ್ದುಗೊಳಿಸಬೇಕಾಗಿ ಬಂತು. ಕೈಗಾರಿಕಾ ತ್ಯಾಜ್ಯವೂ ಸೇರಿದಂತೆ ನಾನಾ ಕಡೆಯಿಂದ ತಂದ ಕಸ-ಕಡ್ಡಿಯನ್ನು ಇಂತಹ ಕೆರೆಗಳಿಗೆ ಸುರಿಯುತ್ತಿದ್ದರು. ಈ ಮೂಲಕ ಕೆರೆಯನ್ನು ಸಮತಟ್ಟು ಮಾಡಿ ಬಳಿಕ ಅದೇ ಜಾಗದಲ್ಲಿ ಬಡಾವಣೆ ನಿರ್ಮಾಣ ಮಾಡಬೇಕೆಂಬುದು ಇವರುಗಳ ಉದ್ದೇಶವಾಗಿದೆ ಎಂಬುದು ನನಗೆ ಮನವರಿಕೆಯಾಗಿತ್ತು.

ಲಿಂಗಾಂಬುಧಿ ಕೆರೆಯಲ್ಲೂ ಇದೇ ರೀತಿ ಮಾಡಿ ಕೆರೆಗೆ ಸೇರಿದ ಭೂಮಿಯನ್ನು ಕೆಲವರು ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೇರ್ಗಳ್ಳಿ ಕೆರೆ ಹಾಗೂ ಅಯ್ಯಾಜಯ್ಯನಹುಂಡಿ ಕೆರೆಗಳಿಗೂ ಇದೇ ಗತಿ ಕಾದಿತ್ತು. ಮುಂದಿನ ಎರಡು ತಿಂಗಳಲ್ಲಿ ಈ ಎರಡೂ ಕೆರೆಗಳಿಗೆ ಬೇಲಿ ಹಾಕಿ ಹೂಳೆತ್ತುವುದೂ ಸೇರಿದಂತೆ ಎಲ್ಲ ರೀತಿಯ ಪುನಶ್ಚೇತನ ಕಾರ್ಯ ಆರಂಭಿಸಬೇಕೆಂದು ತೀರ್ಮಾನಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಮೈಸೂರು ಮಹಾನಗರ ಪಾಲಿಕೆಗೆ (ಎಂಸಿಸಿ) ಆ ಜವಾಬ್ದಾರಿಯನ್ನು ವಹಿಸಲಾಯಿತು.

ಒಂದಿಬ್ಬರು ಸ್ಥಳೀಯ ಶಾಸಕರು ಈ ಕೆರೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳುವುದು ಬೇಡ ಎಂದು ಹೇಳಿದಾಗ ನಾನು ಅವರಿಗೆ ಈ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಿದ್ದೆ. ಮೈಸೂರು ನಗರ ದಿನೇ ದಿನೆ ಬೆಳೆಯುತ್ತಲೇ ಇದೆ. ನಗರಕ್ಕೆ ಸಂಬಂಧಿಸಿದ್ದ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಂಡರೂ ಕೆರೆಕಟ್ಟೆಗಳ ಬಗ್ಗೆ ನಿರ್ಲಕ್ಷ್ಯ ತೋರು ವುದು ಸರಿಯಲ್ಲ. ಇದೇ ಕಾರಣಕ್ಕಾಗಿಯೇ ಮೈಸೂರು ವಿಶ್ವವಿದ್ಯಾಲ ಯದ ಸುಪರ್ದಿನಲ್ಲಿರುವ ಕುಕ್ಕರಹಳ್ಳಿ ಕೆರೆಯ ನಿರ್ವಹಣೆಯ ಜವಾಬ್ದಾರಿಯನ್ನು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಇಲ್ಲವೇ ಅರಣ್ಯ ಇಲಾಖೆಗೆ ನೀಡಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು.

ಮೈಸೂರು ಕಸಬಾ ಹೋಬಳಿಗೆ ಸೇರಿದ ದಟ್ಟಗಳ್ಳಿ ಗ್ರಾಮದ ಸಮೀಪವಿರುವ ಸರ್ವೇ ನಂ. 123ರಲ್ಲಿರುವ ಗೋಮಾಳವನ್ನು ಅತಿಕ್ರಮಣ ಮಾಡಿರುವ ಬಗ್ಗೆ ದೂರುಗಳು ಬಂದಿದ್ದವು. ಮೈಸೂರು ಜಿಲ್ಲೆ ಯಲ್ಲಿ ಒಟ್ಟು 2,991 ಕೆರೆಗಳಿವೆ. ಅವೆಲ್ಲವನ್ನೂ ಸಂರಕ್ಷಿಸುವುದು ನನ್ನ ಉದ್ದೇಶವಾಗಿತ್ತು. ಈಗಾಗಲೇ ಲಿಂಗಾಂಬುಧಿ ಕೆರೆ ಸುತ್ತಮುತ್ತ ಸಾಕಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗ ಕೈಕಟ್ಟಿ ಕುಳಿತರೆ ಮುಂದೊಂದು ದಿನ ಕೇರ್ಗಳ್ಳಿ ಕೆರೆ ಹಾಗೂ ಅಯ್ಯಾಜಯ್ಯನಹುಂಡಿ ಕೆರೆಗಳೂ ಕೂಡ ಕಣ್ಮರೆಯಾಗಿ ಹೋಗಲಿವೆ ಎಂದೆನಿಸುತ್ತದೆ.

`ಮೈಸೂರು ಮಿತ್ರ’: ಚಾಮುಂಡಿಬೆಟ್ಟದ ಬಳಿ ಇರುವ ಕುರುಬರಹಳ್ಳಿ ಸರ್ವೇ ನಂ.4ರ ಬಗ್ಗೆ ಏನು ಹೇಳಬಯಸುತ್ತೀರಿ?

ರೋಹಿಣಿ ಸಿಂಧೂರಿ: ನಾನು ಮೈಸೂರಿಗೆ ಬರುವ ಹೊತ್ತಿಗಾಗಲೇ ಸರ್ಕಾರದ ತೀರ್ಮಾನಕ್ಕೆ ವಿರುದ್ಧವಾಗಿ ಹೈಕೋರ್ಟ್ ಆದೇಶ ನೀಡಿ ಯಾಗಿತ್ತು. ಲಲಿತ ಮಹಲ್ ಅರಮನೆಯೂ ಸೇರಿದಂತೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ 1,560 ಎಕರೆ ಭೂಮಿ ಖಾಸಗಿಯವರಿಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ನ್ಯಾಯಾಲಯದ ಈ ತೀರ್ಪನ್ನು ನಾವು ಪ್ರಶ್ನಿಸಲೇಬೇಕಾಯಿತು. ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವ ಮುನ್ನ ಕೆಲ ಕಾರ್ಯವಿಧಾನಗಳನ್ನು ನಾವು ಅನುಸರಿಸಬೇಕಾಗಿ ಬಂತು. ಮೊದಲನೆಯದಾಗಿ ಮೇಲ್ಮನವಿ ಸಲ್ಲಿಸುವುದಕ್ಕೂ ಮುನ್ನ ಸರ್ಕಾರದಿಂದ ಅನುಮತಿ ಪಡೆಯಬೇಕಾಗಿತ್ತು. ಅದರಲ್ಲಿ ಸ್ವಲ್ಪ ವಿಳಂಬವಾಯಿತು. ಆ ಹೊತ್ತಿಗಾಗಲೇ ಕೆಲ ಖಾಸಗಿ ವ್ಯಕ್ತಿಗಳು ನ್ಯಾಯಾಂಗ ನಿಂದನೆ (ಕಂಟೆಂಪ್ಟ್) ಅರ್ಜಿ ಸಲ್ಲಿಸಿದ್ದರು. ಇದೇ ವಿಷಯವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ಗಳ ಮುಂದೆ ಎರಡು ಬಾರಿ ಪರಿಶೀಲನೆಗೆಂದು ಪ್ರಸ್ತಾಪಿಸಲಾಯಿತು. ತಾವರೆಕಟ್ಟೆ ಕೆರೆಯೂ ಸೇರಿದಂತೆ ಇನ್ನೂ ಅನೇಕ ಕೆರೆಗಳು ಇದೇ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ನಾನು ಸಿಜೆ ಅವರಿಗೆ ಮಾಹಿತಿ ನೀಡಿದ್ದೆ.

ಮೇಲ್ಮನವಿ ಸಲ್ಲಿಕೆ ತಡವಾಗಿದ್ದರಿಂದ ನಾನು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಅಪಾಯವೂ ಇತ್ತು. ಅಂದು, ನನಗಿನ್ನೂ ನೆನಪಿದೆ, 2021ರ ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಹೈಕೋರ್ಟ್‍ನಲ್ಲಿ ನಾನು ಖುದ್ದು ಹಾಜರಾಗಲು ಕರೆ ಬಂದಿತ್ತು. ನನ್ನನ್ನು ಜೈಲಿಗೆ ಅಟ್ಟುವ ಸಾಧ್ಯತೆಯೂ ಇದೆ ಎಂದು ನಮ್ಮ ವಕೀಲರು ನನಗೆ ತಿಳಿಸಿಯೂ ಇದ್ದರು. ಸರ್ಕಾರಿ ಭೂಮಿಯನ್ನು ರಕ್ಷಿಸಲು ಮುಂದಾದ ಕಾರಣಕ್ಕಾಗಿ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ನ್ಯಾಯಾಲಯ ನನಗೆ ಜೈಲುಶಿಕ್ಷೆ ವಿಧಿಸಿದಲ್ಲಿ ಅದಕ್ಕೂ ನಾನು ಸಿದ್ಧಳಿದ್ದೇನೆ ಎಂದು ನಾನು ಅವರಿಗೆ ಪ್ರತಿಕ್ರಿಯಿಸಿದ್ದೆ. 90 ದಿನಗಳ ಒಳಗಾಗಿ ನಾವು ಮೇಲ್ಮನವಿ ಸಲ್ಲಿಸಬೇಕಿತ್ತು. ಇದಾದ ನಂತರ ಪ್ರಸಿದ್ಧ ನ್ಯಾಯವಾದಿ ಹರೀಶ್ ಸಾಳ್ವೆ ಅವರನ್ನು ನಮ್ಮ ಪರವಾಗಿ ವಾದಿಸಲು ನೇಮಿಸಿಕೊಂಡೆವು. ಇದಕ್ಕೂ ಸಾಕಷ್ಟು ಶ್ರಮಪಡಬೇಕಾಗಿ ಬಂತು.

ಹರೀಶ್ ಸಾಳ್ವೆ ಅವರನ್ನು ಒಪ್ಪಿಸಿ ವಕೀಲರನ್ನಾಗಿ ನೇಮಿಸಿಕೊಳ್ಳುವುದೇ ಬಲು ಕಷ್ಟದ ಕೆಲಸ. ಜೊತೆಗೆ ದುಬಾರಿ ಬೇರೆ. ವಕೀಲರ ಶುಲ್ಕವನ್ನು ಯಾರು ಪಾವತಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ನನ್ನನ್ನು ಕೇಳಿದಾಗ ‘ಭೂಮಿಯ ಮೌಲ್ಯವೇ ಸಾವಿರಾರು ಕೋಟಿಗಳಷ್ಟಾಗುತ್ತದೆ, ಮುಡಾ ಕೂಡ ಈ ವಿಷಯದಲ್ಲಿ ಪಾಲುದಾರಿಕೆ ಹೊಂದಿರುವುದರಿಂದ ವಕೀಲರ ಶುಲ್ಕವನ್ನು ನೀಡಲು ಕಷ್ಟವೇನೂ ಆಗದು’ ಎಂದು ನಾನು ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದೆ. ಈ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಈಗಾಗಲೇ ಎರಡು ಬಾರಿ ವಿಚಾರಣೆಗೆ ಬಂದಾಗಿದೆ. ಈಗ ಸುಪ್ರೀಂಕೋರ್ಟ್‍ಗೆ ರಜೆಯಿದೆ. ಸದ್ಯದಲ್ಲಿಯೇ ಅಂತಿಮ ವಿಚಾರಣೆ ನಡೆಯಲಿದೆ.

`ಮೈಸೂರು ಮಿತ್ರ’: ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿ ನಿಮ್ಮ ಹಾಗೂ ಜಿಲ್ಲಾ ಡ್ರಗ್ ಕಂಟ್ರೋಲರ್ ನಡುವೆ ನಡೆಯಿತು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆಯಲ್ಲಾ?

ರೋಹಿಣಿ ಸಿಂಧೂರಿ: ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯೊಂದು ಪ್ರಾಥಮಿಕವಾಗಿ ಈ ಕುರಿತು ತೀರ್ಮಾನ ನೀಡಿಯಾಗಿದೆ. ಸತ್ಯ ಏನು ಎಂಬುದು ಈಗಾಗಲೇ ಹೊರಬಂದಾಗಿದೆ. ಆದರೂ ಇವರು ಗಳು ಅದೇ ಆರೋಪವನ್ನೇ ಪುನರಾವರ್ತಿಸುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಏಕ-ಸದಸ್ಯ ಪೀಠ ಕೂಡ ಈ ಕುರಿತು ವಿಚಾರಣೆ ನಡೆಸುತ್ತಿದ್ದು, ಸತ್ಯ ಏನೆಂಬುದು ಮತ್ತೊಮ್ಮೆ ಎಲ್ಲರಿಗೂ ಗೊತ್ತಾಗಲಿದೆ. ಆಡಿಯೋದಲ್ಲಿರುವ ಸಂಭಾಷಣೆ ಏನನ್ನು ಸೂಚಿಸುತ್ತದೆ ಎಂದು ಕೇಳಿದರೆ ‘ಏನನ್ನೂ ಅಲ್ಲ’ ಎಂದೇ ಹೇಳಬೇಕಿದೆ. ಮೇಲಾಗಿ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ’ದ ಮುಖ್ಯಸ್ಥಳಾಗಿ ನಾನು ಆಕ್ಸಿಜನ್ ಪೂರೈಕೆ ಕುರಿತು ಸಂಬಂಧಪಟ್ಟ ಅಧಿಕಾರಿಗೆ ಕೆಲ ಪ್ರಶ್ನೆಗಳನ್ನು ಕೇಳಲೇಬೇಕಿತ್ತು. ಮತ್ತೊಂದು ಸಂಗತಿಯನ್ನು ಯಾರೂ ಗಮನಿಸಿದಂತಿಲ್ಲ. ದುರಂತಕ್ಕೆ ಚಾಮರಾಜನಗರ ಡಿಸಿಯೇ ಕಾರಣ ಎಂದು ನ್ಯಾಯಾಲಯದ ಸಮಿತಿ ಈಗಾಗಲೇ ಹೇಳಿದ್ದರೂ ಅವರಿನ್ನೂ ಅಧಿಕಾರದಲ್ಲಿ ಮುಂದುವರೆದಿದ್ದಾರೆ, ಆದರೆ ಪಿತೂರಿ ಮಾಡಿ ನನ್ನನ್ನು ಮಾತ್ರ ಹೊರಹಾಕಲಾಗಿದೆ.

ಮೈಮಿ: ಶಿಲ್ಪಾನಾಗ್ ವಿರುದ್ಧ ದೂರು ನೀಡುತ್ತೀರಾ?

ರೋಹಿಣಿ ಸಿಂಧೂರಿ: ಖಂಡಿತಾ ದೂರು ನೀಡಲಿದ್ದೇನೆ. ಒಬ್ಬ ಐಎಎಸ್ ಅಧಿಕಾರಿಯಾಗಿ ಅವರು ನಡೆದುಕೊಂಡ ರೀತಿ ಒಂದಿಷ್ಟೂ ಸರಿಯಲ್ಲ ಎಂದು ಹೇಳಲೇಬೇಕಿದೆ. ಮತ್ತೊಬ್ಬರಿಗೆ ಮಾದರಿಯಾಗಿ ಇರಬೇಕಾದ ನಾವೇ ಹೀಗೆ ನಡೆದುಕೊಂಡರೆ ಈ ಸ್ಥಾನದ ಘನತೆ ಗೌರವ ಏನಾದೀತು? ರಾಜಕೀಯ ಮುಖಂಡರುಗಳೊಂದಿಗೆ ಸೇರಿ ಒಳಸಂಚು ಮಾಡಿರುವ ಅವರು, ಶಿಷ್ಟಾಚಾರ, ನಿಯಮಗಳೆಲ್ಲವನ್ನೂ ಗಾಳಿಗೆ ತೂರಿದ್ದಾರೆ.
‘ನಮ್ಮ ಉದ್ದೇಶ ನೆರವೇರಿದಂತಾಗಿದೆ’ ಎಂದು ಹೇಳಿದ್ದನ್ನೂ, ಆ ಬಳಿಕ ಅವರು ರಾಜೀನಾಮೆ ಹಿಂತೆಗೆದುಕೊಂಡಿದ್ದನ್ನೂ ಗಮನಿಸಿ. ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರಿಗೆ ‘ಕೋವಿಡ್ ಮುಕ್ತ ಮೈಸೂರು’ ಎಂಬ ಗುರಿ ಇರಬೇಕೇ ಹೊರತು ‘ಡಿಸಿ-ಮುಕ್ತ ಮೈಸೂರು’ ಅಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳೇ ಹೀಗೆ ನಡೆದುಕೊಂಡರೆ ಯಾವುದೇ ಒಂದು ಸಂಸ್ಥೆಯನ್ನಾಗಲೀ ಅಥವಾ ಜಿಲ್ಲೆಯನ್ನಾಗಲೀ ನೀವು ಹೇಗೆ ತಾನೇ ಮುನ್ನಡೆಸಲು ಸಾಧ್ಯ’?

ಮೈಮಿ: ಕೋವಿಡ್‍ನಿಂದಾದ ಸಾವಿನ ಸಂಖ್ಯೆಯನ್ನು ನೀವು ಮರೆ ಮಾಚಿದ್ದೀರಿ ಎಂಬ ಆರೋಪ ಕೇಳಿಬರುತ್ತಿದೆಯಲ್ಲ.

ರೋಹಿಣಿ ಸಿಂಧೂರಿ: (ನಗುತ್ತಾ) ಜನನ ಮತ್ತು ಮರಣಗಳನ್ನು ಕುರಿತ ಮಾಹಿತಿಯನ್ನು ನಿರ್ವಹಿಸುವ ಜವಾಬ್ದಾರಿ ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ)ಗೆ ಸೇರಿದ್ದು. ಕೋವಿಡ್‍ನಿಂದಾಗಿಯೇ ಮೃತಪಟ್ಟವರ್ಯಾರು, ಅವರ ಸಂಖ್ಯೆಯೆಷ್ಟು ಎಂಬ ಮಾಹಿತಿಯನ್ನು ನೀಡಲೆಂದೇ ವೈದ್ಯರೂ ಆದ ಜಿಲ್ಲಾ ಕಣ್ಗಾವಲು ಅಧಿಕಾರಿ (ಡಿಎಸ್‍ಒ) ಯೊಬ್ಬರನ್ನು ನೇಮಿಸಲಾಗಿದೆ. ಈ ಎರಡೂ ವಿಭಾಗಗಳು ಜಿಲ್ಲಾಧಿಕಾರಿ ನಿಯಂತ್ರಣದಡಿ ಬರುವುದಿಲ್ಲ. ಡಿಎಸ್‍ಒ ಹಾಗೂ ಎಂಸಿಸಿ ನೀಡುವ ಅಂಕಿಅಂಶಗಳನ್ನೇ ನಾನೂ ಹೇಳಬೇಕಾಗುತ್ತದೆ. ಜಿಲ್ಲೆಯಲ್ಲಿ ಸೂಕ್ತವೆನಿಸುವ ಎಲ್ಲ ಕಾರ್ಯವನ್ನೂ ತಮ್ಮದೆಂದು ಹೇಳಿಕೊಂಡು, ತಪ್ಪೆಲ್ಲವನ್ನೂ ನನ್ನ ಹೆಗಲಿಗೆ ಹಾಕಿಬಿಡುವುದು ಎಷ್ಟರ ಮಟ್ಟಿಗೆ ಸರಿ? ಲಸಿಕೆ ಹಾಕುವಲ್ಲಿ ಇಡೀ ರಾಜ್ಯದಲ್ಲೇ ಮೈಸೂರು ಜಿಲ್ಲೆ ಮುಂಚೂಣಿಯಲ್ಲಿದೆ ಎಂಬುದನ್ನು ಯಾರೂ ಹೇಳುವುದಿಲ್ಲ ಏಕೆ? ಈ ಅಂಕಿ-ಅಂಶಗಳನ್ನೂ ‘ತಿದ್ದಲಾಗಿದೆ’ ಎಂದು ಹೇಳಬಹುದಲ್ಲ.

ಮೈಮಿ: ಇಂತಹ ಕಹಿಯಾದ ವಾತಾವರಣ ಸೃಷ್ಟಿಯಾಗಿದ್ದು ಹೇಗೆ?

ರೋಹಿಣಿ ಸಿಂಧೂರಿ: ಒಬ್ಬ ಜಿಲ್ಲಾಧಿಕಾರಿಯಾಗಿ ನನ್ನ ಕರ್ತವ್ಯ ನಾನು ಮಾಡಿದ್ದೇನಷ್ಟೆ. ಎಲ್ಲರೂ ನನ್ನ ಬಗ್ಗೆಯೇ ಪದೇ ಪದೆ ಮಾತನಾಡಿ ಮೈಸೂರಿನಲ್ಲಿ ನನ್ನನ್ನು ಒಬ್ಬ ದೊಡ್ಡ ಹೀರೊ ಆಗಿ ಮಾಡಿಬಿಟ್ಟರು. ಒಬ್ಬ ಡಿಸಿಯ ಬಗ್ಗೆ ಟೀಕೆ ಮಾಡುವುದು ತಪ್ಪೇನಲ್ಲ, ನಿಜ. ಆದರೆ ಇವರುಗಳು ಮಾಡಿದ್ದು ಟೀಕೆಯಲ್ಲ, ಅಪಪ್ರಚಾರ. ಡಿಸಿಯಾದ ನನಗೆ ‘ಕಿರುಕುಳ’ ನೀಡಿದರು ಎಂಬ ಮಾತನ್ನು ಹೇಳಬಾರದು. ಆದರೂ ಹೇಳಲೇಬೇಕಾಗಿದೆ. ನಾನು ಎಷ್ಟೇ ಕಷ್ಟವಾದರೂ ನನ್ನ ಕೆಲಸದ ಬಗ್ಗೆ ಗಮನಹರಿಸಿದೇನೇ ಹೊರತು ಎಂದೂ ಮಾಧ್ಯಮದ ಮುಂದೆ ಹೋಗಿ ನನ್ನ ಕಷ್ಟಗಳ ಬಗ್ಗೆ ಹೇಳಿ ಕೊಳ್ಳಲೇ ಇಲ್ಲ. ಇದರಿಂದ ನಷ್ಟವಾಗಿದ್ದು ಯಾರಿಗೆ?

ರಾಷ್ಟ್ರಮಟ್ಟದ ನಾಯಕರು ಜಿಲ್ಲಾಡಳಿತದಲ್ಲೇಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ? ಪ್ರಶ್ನೆಗಳನ್ನು ಕೇಳಲು ನಿಮಗೆ ಎಲ್ಲ ಹಕ್ಕೂ ಇದೆ ನಿಜ. ಆದರೆ ಆ ಪ್ರಶ್ನೆಗಳನ್ನೂ ಜಿಲ್ಲಾ ಸಚಿವರ ಮೂಲಕ ಕೇಳಿ ಉತ್ತರ ತಿಳಿದುಕೊಳ್ಳಿ. ಇಂತಹ ಬಿಕ್ಕಟ್ಟಿನ ಸಮಯದಲ್ಲಿಯೂ ರಿಫಿಲ್ಲಿಂಗ್ ಪ್ಲಾಂಟುಗಳಿಂದ ಆಕ್ಸಿಜನ್ ತೆಗೆದುಕೊಳ್ಳುವಂತೆ ಖಾಸಗಿ ವ್ಯಕ್ತಿಗಳಿಗೆ ರಾಜಕೀಯ ಮುಖಂಡರೊಬ್ಬರು ಟ್ವೀಟ್ ಮಾಡಿ ನಿರ್ದೇಶನ ನೀಡುವುದೇಕೆ?

ಹಾಸನದ ಮಾಜಿ ಸಚಿವರೊಬ್ಬರು ಮೈಸೂರಿನ ವಿಷಯದಲ್ಲಿ ಏಕೆ ತಲೆ ಹಾಕಬೇಕು? ಕೆ.ಆರ್. ನಗರದ ಶಾಸಕರು ಮೈಸೂರು ನಗರದ ಕೋವಿಡ್ ಆರೈಕೆ ಕೇಂದ್ರದ ಬಗ್ಗೆ ಏಕೆ ಮಾತನಾಡಬೇಕು? ಇಷ್ಟೆಲ್ಲಾ ನಡೆದ ಮೇಲೆ ಯಾವುದೇ ಅಧಿಕಾರಿಯೂ ಇನ್ನು ಮುಂದೆ ಈ ಭೂ ಮಾಫಿಯಾ ವಿರುದ್ಧ ಸೊಲ್ಲೆತ್ತುವ ಧೈರ್ಯ ಮಾಡಲಾರರು ಎಂದೆನಿ ಸುತ್ತದೆ. ಭೂ ಮಾಫಿಯಾದವರೂ ಬಯಸಿದ್ದು ಅದನ್ನೇ ತಾನೇ?

ಇನ್ನು ಒಂದೇ ವಾರದಲ್ಲಿ ಈ ಸುದ್ದಿ ಹಳೆಯದಾಗಿ ಎಲ್ಲರೂ ಮರೆತುಬಿಡುವ ಸಾಧ್ಯತೆ ಹೆಚ್ಚಿದೆ. ಆದರೆ ಮುಂದೊಂದು ದಿನ ಕುರುಬರಹಳ್ಳಿಯಲ್ಲಿನ ಜಮೀನೆಲ್ಲವೂ ಇಂಥವರ ಪಾಲಾಗಿ, ಎಲ್ಲೆಡೆ ಬೃಹತ್ ಅಪಾರ್ಟ್‍ಮೆಂಟುಗಳು ಹಾಗೂ ಬಡಾವಣೆಗಳೆದ್ದು, ದನಕರುಗಳು ಹಸಿರು ಮೇಯುತ್ತಿದ್ದ ಜಾಗ ಹಾಗೂ ಕೆರೆಕಟ್ಟೆಗಳೇ ಕಣ್ಮರೆಯಾದಾಗ ಈಗಿನ ಘಟನೆ ನೆನಪಿಗೆ ಬರಲಿದೆ.

ಮೈಮಿ: ಜಿಲ್ಲಾಧಿಕಾರಿ ನಿವಾಸದಲ್ಲಿ ಅನಧಿಕೃತವಾಗಿ ಈಜುಕೊಳ ಕಟ್ಟಿಸಲಾಗಿದೆ ಎಂದು ವರದಿಯಾಗುತ್ತಿದೆಯಲ್ಲ?

ರೋಹಿಣಿ ಸಿಂಧೂರಿ: ಆ ಕುರಿತು ವಿಚಾರಣೆ ನಡೆಯುತ್ತಿದೆ. ಅವರು ವರದಿ ನೀಡುವವರೆಗೂ ಕಾದು ನೋಡಿ. ಈ ಈಜುಕೊಳವನ್ನು ನಾನು ಹೋದಲ್ಲೆಲ್ಲಾ ಕೊಂಡೊಯ್ಯಲು ಸಾಧ್ಯವೇ? ನೀವೇ ಹೇಳಿ?. ಅದೇನು ನನ್ನ ವೈಯಕ್ತಿಕ ಸ್ವತ್ತೇ?

ಮೈಮಿ: ನಿಮ್ಮ ವರ್ಗಾವಣೆಯಾದ ಕೆಲವೇ ಗಂಟೆಗಳ ಬಳಿಕ ನೀವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಿರಿ. ವರ್ಗಾವಣೆಯನ್ನು ಹಿಂತೆಗೆದುಕೊಳ್ಳಿ ಎಂದು ನೀವು ಮಾಡಿಕೊಂಡ ಮನವಿ ಯನ್ನು ಅವರು ಪುರಸ್ಕರಿಸಿದ್ದರೆ ಒಳ್ಳೆಯದಿತ್ತು ಎಂದು ಅನಿಸುತ್ತಿದೆಯೇ?

ರೋಹಿಣಿ ಸಿಂಧೂರಿ: ನಿಜ, ನನ್ನ ಮನವಿಯನ್ನು ಅವರು ಪರಿಗಣಿಸ ಬಹುದಿತ್ತು. ಕೋವಿಡ್ ಕಾರಣದಿಂದಲಾದರೂ ಹಾಗೆ ಮಾಡಬಹು ದಿತ್ತು ಎನಿಸುತ್ತದೆ. ಮುಖ್ಯವಾಗಿ ಸಂಚು ಹೂಡಿದವರು ಮಾಡಿದ್ದೆಲ್ಲವೂ ಒಂದು ನಾಟಕವಾಗಿತ್ತು ಎಂದು ಹೇಳಲು ‘ನಮ್ಮ ಉದ್ದೇಶ ನೆರವೇರಿ ದಂತಾಗಿದೆ’ ಎಂಬ ಅವರ ಕುಚೋದ್ಯದ ನುಡಿಯೇ ಸಾಕಲ್ಲವೇ?!

Translate »