ಜನರ ಹಿತದೃಷ್ಟಿಯಿಂದ ಯಾರೇ  ಅಭಿವೃದ್ಧಿ ಕಾರ್ಯ ಮಾಡಿದರೂ ಪ್ರಶಂಸಿಸಿ
ಮೈಸೂರು

ಜನರ ಹಿತದೃಷ್ಟಿಯಿಂದ ಯಾರೇ ಅಭಿವೃದ್ಧಿ ಕಾರ್ಯ ಮಾಡಿದರೂ ಪ್ರಶಂಸಿಸಿ

August 25, 2021

ಮೈಸೂರು,ಆ.24-ಜನರ ಹಿತದೃಷ್ಟಿಯಿಂದ ಯಾರೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ದರೂ ಅದನ್ನು ಒಪ್ಪಿಕೊಳ್ಳುವ ಮನೋಭಾವ ರಾಜಕಾರಣಿಗಳಲ್ಲಿರ ಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಅಭಿಪ್ರಾಯಿಸಿದ್ದಾರೆ.

ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಸಂಬಂಧ ರಾಜಕಾರಣಿಗಳು ವಿಭಿನ್ನ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ರುವ ಅವರು, ಯೋಜನೆಗೆ ಯಾರೇ ಕಾರಣರಾಗಿರಲಿ ಅಗತ್ಯ ಅನುದಾನವನ್ನು ಸರ್ಕಾರದಿಂದ ತಂದು ಅನುಷ್ಠಾನಕ್ಕೆ ತಂದವರನ್ನು ಪ್ರಶಂಸಿಸಬೇಕು. ಈ ನಿಟ್ಟಿನಲ್ಲಿ ದಶಪಥ ರಸ್ತೆ ಯೋಜನೆ ಪೂರ್ಣ ಗೊಳಿಸಲು ಶ್ರಮಿಸಿರುವ ಸಂಸದ ಪ್ರತಾಪ್ ಸಿಂಹ, `ಈ ಕೆಲಸವನ್ನು ನಾನು ಮಾಡಿದ್ದು’ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಕಟ್ಟಡಗಳು, ಕಾಂಕ್ರೀಟ್ ರಸ್ತೆ ಸೇರಿದಂತೆ ಹಲವು ಯೋಜನೆಗಳಾದವು. ಇದನ್ನು ಸಂಸದ ಪ್ರತಾಪ್ ಸಿಂಹ ಅವರೇ ಮಾಧ್ಯಮಗಳ ಮುಂದೆ ತಿಳಿಸಿ, ಸಿದ್ದರಾಮಯ್ಯನವರನ್ನು ಅಭಿನಂದಿಸಿದ್ದರು. ಹಾಗೆಯೇ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ, ಹೊಸ ಆಸ್ಪತ್ರೆ ಕಟ್ಟಡಗಳಿಗೆ ಅಗತ್ಯ ಸಲಕರಣೆಗಳನ್ನು ಕಲ್ಪಿಸಿ, ಕಾರ್ಯಾರಂಭಕ್ಕೆ ಕಾರಣರಾದ ಶಾಸಕ ಎಲ್.ನಾಗೇಂದ್ರ ಅವರ ಕಾರ್ಯವನ್ನೂ ಪ್ರಶಂಸಿಸುವುದರಲ್ಲಿ ತಪ್ಪಿಲ್ಲ. ನಾನೂ ಕೂಡ ಹೆಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಮನವಿ ಮಾಡಿದ್ದರಿಂದ ರಾಜ್ ಕುಮಾರ್ ಜೋಡಿರಸ್ತೆಗೆ 8 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು. ಈ ರಸ್ತೆ ಅಭಿವೃದ್ಧಿ ಮಾಡಿಸಿದ್ದು ನಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತಂದು ಕೆಲಸ ಮಾಡುವ ಜನಪ್ರತಿನಿಧಿಗಳು ಯಾವುದೇ ಪಕ್ಷದವರಾಗಲೀ ಅವರ ಕಾರ್ಯವನ್ನು ಸ್ವಾಗತಿಸಬೇಕು. ಈ ಮನೋಭಾವ ಬೆಳೆಸಿಕೊಂಡರೆ ಮೈಸೂರಿನ ಅಭಿವೃದ್ಧಿಗೆ ಪೂರಕ. ಇದರ ಹೊರತು ಎಲ್ಲಾ ವಿಷಯಗಳಿಗೂ ರಾಜಕೀಯ ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

Translate »