ಯಶೋಧ ವನ ಮೇಕೆ ಸಾಕಾಣಿಕೆ ಕೇಂದ್ರಕ್ಕೆ  ನಾಳೆ ಮಹಾರಾಷ್ಟ್ರದ ಪಶುಸಂಗೋಪನಾ ಸಚಿವ ಭೇಟಿ
ಮೈಸೂರು

ಯಶೋಧ ವನ ಮೇಕೆ ಸಾಕಾಣಿಕೆ ಕೇಂದ್ರಕ್ಕೆ ನಾಳೆ ಮಹಾರಾಷ್ಟ್ರದ ಪಶುಸಂಗೋಪನಾ ಸಚಿವ ಭೇಟಿ

August 25, 2021

ಮೈಸೂರು, ಆ.24(ಆರ್‍ಕೆಬಿ)- ನಂಜನಗೂಡು ತಾಲೂಕಿನ ಎಡಹಳ್ಳಿಯಲ್ಲಿರುವ ಯಶೋಧ ವನ ಮೇಕೆ ಸಾಕಾಣಿಕೆ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಮೇಕೆ ಸಾಕಾಣಿಕೆ ಯಶಸ್ಸಿನ ಕುರಿತು ಚರ್ಚಿಸುವ ಸಲುವಾಗಿ ಮಹಾರಾಷ್ಟ್ರದ ಪಶುಸಂಗೋಪನಾ ಮತ್ತು ಹೈನುಗಾರಿಕೆ ಸಚಿವ ಸುನೀಲ್ ಕೇದಾರ್ ಆ.26ರಂದು ಭೇಟಿ ನೀಡಲಿದ್ದಾರೆ ಎಂದು ಸಾಕಾಣಿಕೆ ಕೇಂದ್ರದ ಅಬ್ದುಲ್ ಕರೀಂ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಶೋಧ ವನ ಮೇಕೆ ಸಾಕಾಣಿಕೆ ಕೇಂದ್ರವು ಕೊಟ್ಟಿಗೆ ಪದ್ಧತಿಯ ಅಳಡಿಸಿಕೊಂಡಿರುವ ದೇಶದ ಕೆಲವೇ ಕೆಲವು ಸಾಕಾಣಿಕೆ ಕೇಂದ್ರಗಳಲ್ಲಿ ಒಂದಾಗಿದೆ. ದೇಶದ ಹಲವು ಮೇಕೆ ತಳಿಗಳು, ಮೇಕೆ ಹಾಲು, ಮೇಕೆ ಹಾಲಿನ ಉತ್ಪನ್ನಗಳು ಮತ್ತು ಮೇವಿನ ಬಗ್ಗೆ ತಿಳಿಯಲು ಹಲವು ಪ್ರಯೋಗ ಮತ್ತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ತಿಳಿಯಲು, ಸರ್ಕಾರದ ಮಟ್ಟದಲ್ಲಿ ಮೇಕೆ ಸಾಕಾಣಿಕೆಯನ್ನು ರೈತರಿಗೆ ಹೆಚ್ಚು ಉಪಯೋಗವಾಗುವಂತೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಮೇಕೆ ಸಾಕಾಣಿಕೆ ಮತ್ತು ಅದರ ಉತ್ಪನ್ನಗಳ ಲಾಭದಾಯಿಕ ಅಂಶಗಳ ಬಗ್ಗೆ ಚರ್ಚಿಸಲು ಸಚಿವರು ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಯಶೋಧ ವನ ಸ್ಥಾಪಕ ಶ್ರೀನಿವಾಸ್ ಆಚಾರ್ ಮಾತನಾಡಿ, ಕಾಡು ಮತ್ತು ಹೊಲ ಗದ್ದೆಗಳಲ್ಲಿ ಮೇಯಿಸಿಕೊಂಡು ಮೇಕೆ ಸಾಕಾಣಿಕೆ ಮಾಡಲಾಗುತ್ತಿತ್ತು. ಕೊಟ್ಟಿಗೆ ಸಾಕಾಣಿಕೆಯನ್ನು 2010ರಿಂದ ಆರಂಭಿಸಲಾಯಿತು. ತಳಿಗಳು ಮತ್ತು ಅದರ ಉತ್ಪನ್ನಗಳ ಬಗ್ಗೆ ರೈತರಿಗೆ ತರಬೇತಿ ನೀಡಲಾಗುತ್ತಿದೆ. 28ಕ್ಕೂ ಹೆಚ್ಚು ಔಷಧೀಯ ಗುಣವುಳ್ಳ ಮೇಕೆ ಹಾಲು ಮತ್ತು ಉತ್ಪನ್ನಗಳಿಗೆ ಬೇಡಿಕೆ ಇದೆ. ಹೀಗಾಗಿ ಮಹಾರಾಷ್ಟ್ರದ ಸಚಿವರು ಮಾಹಿತಿ ಪಡೆದುಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

Translate »