ಜಯಪುರ ಹೋಬಳಿಯ 58 ಕೆರೆಗಳಿಗೆ ನೀರು ತುಂಬಿಸಲು ಸಚಿವರಿಗೆ ಮನವಿ
ಮೈಸೂರು ಗ್ರಾಮಾಂತರ

ಜಯಪುರ ಹೋಬಳಿಯ 58 ಕೆರೆಗಳಿಗೆ ನೀರು ತುಂಬಿಸಲು ಸಚಿವರಿಗೆ ಮನವಿ

May 30, 2020

ಜಯಪುರ, ಮೇ 29(ಬಿಳಿಗಿರಿ)-ಜಯಪುರ ಹೋಬಳಿಯಾದ್ಯಂತ ಇರುವ 58 ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ಜಲ ಸಂಪನ್ಮೂಲ ಸಚಿವ ಜಾರಕಿಹೊಳಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮೈಸೂರು ತಾಲೂಕಿನ ಜಯಪುರಕ್ಕೆ ಜಲಸಂಪನ್ಮೂಲ ಸಚಿವರು ಭೇಟಿ ನೀಡಿದ್ದ ವೇಳೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಮಳೆಯ ಅಭಾವದಿಂದ ಹೋಬಳಿಯ ಎಲ್ಲಾ ಕೆರೆಗಳು ಬತ್ತಿಹೋಗಿವೆ. ರೈತರು ಮಳೆಯಾಶ್ರಿತ ಭೂಮಿಯ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅಂತರ್ಜಲ ಕುಸಿತದಿಂದ 700 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹಾಗಾಗಿ 10 ಕಿ.ಲೋ. ಸಮೀಪದ ಹರಿಯುತ್ತಿರುವ ಕಬಿನಿ ನದಿಯಿಂದ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮೋದನೆ ದೊರೆತ್ತಿತ್ತು. ಕಾರಣಾಂತರಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಳ್ಳ ಹಿಡಿಯಿತು. ಇದರಿಂದ ರೈತರು ಹಾಗೂ ಜನ-ಜಾನುವಾರುಗಳಿಗೆ ನೀರು ಇಲ್ಲ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಶೀಘ್ರದಲ್ಲಿಯೇ ಜಯಪುರ ಹೋಬಳಿಯಾದ್ಯಂತ ಕೆರೆಗಳಿಗೆ ನೀರು ತುಂಬಿಸುವಂತೆ ಮೈಸೂರು ತಾಪಂ ಮಾಜಿ ಉಪಾಧ್ಯಕ್ಷ ಜೆ.ಎಂ.ಜವರನಾಯಕ ಮತ್ತು ರೈತರು ಸಚಿವರಿಗೆ ಅಹವಾಲು ಸಲ್ಲಿಸಿದರು.

ರೈತರ ಮನವಿಗೆ ಸ್ಪಂದಿಸಿದ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಶೀಘ್ರವಾಗಿ ಕಾಮಗಾರಿಗಳನ್ನು ಆರಂಭಿಸಿ ಜಯಪುರ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವಂತೆ ಆದೇಶಿಸಿದರು.

Translate »