ಭಾರೀ ಮಳೆ: ಅಕ್ಕಿ ಗಿರಣಿಗಳಿಗೆ ನೀರು ನುಗ್ಗಿ ಅಪಾರ ಹಾನಿ
ಮೈಸೂರು ಗ್ರಾಮಾಂತರ

ಭಾರೀ ಮಳೆ: ಅಕ್ಕಿ ಗಿರಣಿಗಳಿಗೆ ನೀರು ನುಗ್ಗಿ ಅಪಾರ ಹಾನಿ

May 30, 2020

ತಿ.ನರಸೀಪುರ, ಮೇ 29(ಎಸ್‍ಕೆ)-ಭಾರೀ ಮಳೆಯಿಂದಾಗಿ ಪಟ್ಟಣದ ಅಕ್ಕಿ ಗಿರಣಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿವೆ.

ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ಶ್ರೀನಾಗರತ್ನ ಇಂಡಸ್ಟ್ರೀಸ್, ಲಕ್ಷ್ಮೀ ಎಂಟರ್ ಪ್ರೈಸಸ್‍ಗೆ ನೀರು ನುಗ್ಗಿ ಭತ್ತದ ಮೂಟೆಗಳಿಗೆ ಹಾನಿಯಾಗಿದೆ. ಪಟ್ಟಣದಲ್ಲಿ ಗುರುವಾರ ರಾತ್ರಿ ಕೆಲಕಾಲ ಸುರಿದ ಭಾರೀ ಮಳೆಯಿಂದ ಸುರಿಯಿತು. ಪಟ್ಟಣದ ರಾಮಮಂದಿರದ ಬಳಿ ಇರುವ ಚರಂಡಿ ತಿರುವಿನಲ್ಲಿ ತ್ಯಾಜ್ಯ ಸಂಗ್ರಹಗೊಂಡು ನೀರಿನ ಹರಿವು ಸ್ಥಗಿತಗೊಳ್ಳುವುದರಿಂದ ಹೆಚ್ಚಿನ ಪ್ರಮಾಣದ ನೀರು ಮಂದಿರದ ಹಿಂಭಾಗದ ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ಅಕ್ಕಿ ಗಿರಣಿಗಳಿಗೆ ನುಗ್ಗಿದೆ. ಇದರಿಂದ ಭತ್ತದ ಮೂಟೆಗಳಿಗೆ ಹಾನಿಯಾಗಿದೆ.

ವಿಷಯ ತಿಳಿದು ಶುಕ್ರವಾರ ಪುರಸಭಾ ಸದಸ್ಯ ಬಾದಾಮಿ ಮಂಜು, ಆರೋಗ್ಯಾಧಿಕಾರಿ ಚೇತನ್‍ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಅಕ್ಕಿ ಗಿರಣಿ ಮಾಲೀಕ ಪಿ.ಆರ್.ದೇವೇಂದ್ರಗುಪ್ತ, ಚರಂಡಿ ಸಮಸ್ಯೆಯಿಂದಾಗಿ ನೀರು ಒಳ ನುಗ್ಗುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿದರೆ ಗಿರಣಿ ಒಳಗೆ ನೀರು ಬರುವುದು ತಪ್ಪುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಶೀಘ್ರವೇ ಕ್ರಮ ವಹಿಸುವುದಾಗಿ ಆರೋಗ್ಯಾಧಿಕಾರಿ ಚೇತನ್‍ಕುಮಾರ್ ಭರವಸೆ ನೀಡಿದರು. ಘಟನೆಯಿಂದ ಸುಮಾರು 3 ಸಾವಿರ ಭತ್ತದ ಮೂಟೆಗಳು ಹಾನಿಯಾಗಿದ್ದು, ಅಂದಾಜು 40 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಈ ವೇಳೆ ಮುಖಂಡ ಮಾದೇಶ್ ಹಾಜರಿದ್ದರು.

Translate »