ಬ್ರಾಹ್ಮಣ ಸಮಾವೇಶದಲ್ಲಿ ಸಮುದಾಯದ ಯುವ  ಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ
ಮೈಸೂರು

ಬ್ರಾಹ್ಮಣ ಸಮಾವೇಶದಲ್ಲಿ ಸಮುದಾಯದ ಯುವ ಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ

December 15, 2018

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿ ಯಿಂದ ಡಿ.15 ಮತ್ತು 16ರಂದು ಆಯೋಜಿಸಿರುವ ಮೈಸೂರು ನಗರ ಮತ್ತು ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶದಲ್ಲಿ ಸಮುದಾಯದ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳು ವಂತೆ ಮೈಸೂರು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ ಕೋರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ನಂಜನಗೂಡು ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣ ದಲ್ಲಿ 2 ದಿನಗಳ ಕಾಲ ಸಮಾವೇಶ ನಡೆಯಲಿದೆ. ಡಿ.15ರಂದು ಬೆಳಿಗ್ಗೆ 10ಕ್ಕೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮತ್ತು ಶಂಕರ ಜಯಂತಿ ಆಚರಣೆಗೆ ಕ್ರಮ ವಹಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಡಿ.15ರಂದು ಸಂಜೆ 4.40ರಿಂದ 6ರವರೆಗೆ ಯುವ ಗೋಷ್ಠಿ ನಡೆಯಲಿದ್ದು, ಮುಕ್ತ ವಿವಿ ಪರೀಕ್ಷಾಂಗ ಉಪ-ಕುಲಸಚಿವ ಡಾ.ಶೆಲ್ವಪಿಳೈ ಅಯ್ಯಂಗಾರ್ ಯುವ ಗೋಷ್ಠಿ ಉದ್ಘಾಟಿ ಸಲಿದ್ದಾರೆ. ಸಿನಿಮಾ ಸಂಗೀತ ನಿರ್ದೇಶಕ ಕೆ.ಕಲ್ಯಾಣ ಅಧ್ಯಕ್ಷತೆ ವಹಿಸಲಿದ್ದು, `ಯುವ ಜನತೆ ಮತ್ತು ಸಮಕಾಲಿನ ಸಮಸ್ಯೆಗಳು’ ಕುರಿತು ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್‍ನ ವ್ಯವಸ್ಥಾಪಕ ನಿರ್ದೇಶಕ ಎನ್.ನರೇಂದ್ರ, `ಯುವಜನತೆ ಮತ್ತು ವೃತ್ತಿ ಕೌಶಲ್ಯ’ ಕುರಿತು ಸಾಮಾಜಿಕ ಕಾರ್ಯಕರ್ತ ಎನ್.ಎಂ.ನವೀನ್‍ಕುಮಾರ್ ವಿಷಯ ಮಂಡಿಸಲಿದ್ದಾರೆ. ನಿಸರ್ಗ ಸಂಸ್ಥೆಯ ಡಾ.ಅಶೋಕ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಎರಡು ದಿನಗಳ ಕಾಲ ನಡೆಯುವ ಸಮಾವೇಶವು ಧಾರ್ಮಿಕ ಪೂಜಾ ಕೈಂಕರ್ಯದಿಂದ ಆರಂಭವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು, ಚರ್ಚೆ, ಸಂವಾದ ಗಳು ನಡೆಯಲಿದ್ದು, ಡಿ.16ರ ಬೆಳಗ್ಗೆ 7.30ಕ್ಕೆ ಏರ್ಪಡಿಸಿರುವ ಶೋಭಾಯಾತ್ರೆಯು ಶಂಕರ ಮಠದಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದವರೆಗೂ ನಡೆಯಲಿದೆ. ಸಮಾವೇಶದಲ್ಲಿ 40ಕ್ಕೂ ಹೆಚ್ಚು ವಿಪ್ರ ಉದ್ಯಮಿಗಳು ತಮ್ಮ ಮಳಿಗೆಗಳನ್ನು ತೆರೆದು ಉತ್ಪನ್ನಗಳ ಪ್ರದರ್ಶನ ಮಾಡಲಿ ದ್ದಾರೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನೂ ಹಮ್ಮಿಕೊಳ್ಳ ಲಾಗಿದೆ ಎಂದರು. ವೇದಿಕೆ ಉಪಾಧ್ಯಕ್ಷ ಅಜಯ್‍ಶಾಸ್ತ್ರಿ, ಜಂಟಿ ಕಾರ್ಯದರ್ಶಿಗಳಾದ ಜಯ ಸಿಂಹ ಕಡಕೊಳ, ರಂಗನಾಥ್ ಸುಬ್ಬರಾವ್, ನಿರ್ದೇಶಕ ಬಿ.ವಿ.ಪ್ರಶಾಂತ್ ಗೋಷ್ಠಿಯಲ್ಲಿದ್ದರು.

Translate »