ಡಿ.20ರಿಂದ ಮೈಸೂರಿನಲ್ಲಿ ಪುರುಷರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ
ಮೈಸೂರು

ಡಿ.20ರಿಂದ ಮೈಸೂರಿನಲ್ಲಿ ಪುರುಷರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ

December 15, 2018

ಮೈಸೂರು: ಹಾಕಿ ಮೈಸೂರು ವತಿಯಿಂದ ಪುರುಷರ ರಾಜ್ಯ ಮಟ್ಟದ ಆಹ್ವಾನಿತ ಹಾಕಿ ಪಂದ್ಯಾವಳಿ ಮೈಸೂರು ವಿವಿ ಹಾಕಿ ಮೈದಾನದಲ್ಲಿ ಡಿ.20ರಿಂದ 23ರವರೆಗೆ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ.ಬಿ.ದಿಲೀಪ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಕ್ರೀಡಾಕೂಟ ಹೊರತಾಗಿ ಇಂತಹ ದೊಡ್ಡ ಮಟ್ಟದ ಯಾವುದೇ ಹಾಕಿ ಪಂದ್ಯಾವಳಿ ಕಳೆದ 10 ವರ್ಷಗಳಿಂದ ಮೈಸೂರಿನಲ್ಲಿ ಆಯೋಜನೆಗೊಂಡಿಲ್ಲ. ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮೈಸೂರು, ಕೊಡಗು, ಹಾಸನ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ ಹಾಗೂ ಗದಗ ಸೇರಿದಂತೆ ಆಹ್ವಾನಿತ 12 ಜಿಲ್ಲಾ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಲೀಗ್ ಪಂದ್ಯಗಳೊಂದಿಗೆ ನಾಕ್‍ಔಟ್ ಆಧಾರದಲ್ಲಿ ಪಂದ್ಯಾವಳಿ ನಡೆಯಲಿದೆ. ಎಲ್ಲಾ ತಂಡಗಳಿಗೂ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಂಡವೂ 3 ಸಾವಿರ ರೂ. ಪ್ರವೇಶ ಶುಲ್ಕ ಪಾವತಿಸಬೇಕಿರುತ್ತದೆ ಎಂದರು.

ಜಿ.ಡಿ.ಹರೀಶ್‍ಗೌಡರಿಂದ ಉದ್ಘಾಟನೆ: ಪಂದ್ಯಾವಳಿ ನಡೆಯಲಿರುವ ಮೈಸೂರು ವಿವಿ ಹಾಕಿ ಮೈದಾನದಲ್ಲಿ 20ರಂದು ಸಂಜೆ 4ಕ್ಕೆ ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದು, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿ ದ್ದಾರೆ. 23ರಂದು ಸಂಜೆ 4ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೊದಲ ಎರಡು ದಿನಗಳು ಲೀಗ್ ಪಂದ್ಯಗಳು ನಡೆಯಲಿದ್ದು, ಡಿ.22ರಂದು ಸೆಮಿ ಫೈನಲ್ ಹಾಗೂ 23ರಂದು ಫೈನಲ್ ಪಂದ್ಯ ನಡೆಯಲಿದೆ. ಚಾಂಪಿಯನ್ ಆಗಿ ಹೊರ ಹೊಮ್ಮುವ ತಂಡಕ್ಕೆ ಲಕ್ಷ ರೂ. ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕ ಪ್ರದಾನ ಮಾಡಲಾಗುವುದು. ಅದೇ ರೀತಿ ದ್ವಿತೀಯ ಬಹುಮಾನ 50 ಸಾವಿರ ರೂ. ನಗದಿನೊಂದಿಗೆ ರನ್ನರ್ ಪಾರಿತೋಷಕ, ತೃತೀಯ ಬಹುಮಾನ 30 ಸಾವಿರ ರೂ. ನಗದಿನೊಂದಿಗೆ ಪಾರಿತೋಷಕ ಹಾಗೂ ನಾಲ್ಕನೇ ಸ್ಥಾನಕ್ಕೆ 20 ಸಾವಿರ ರೂ. ನಗದಿನೊಂ ದಿಗೆ ಪಾರಿತೋಷಕ ಪ್ರದಾನ ಮಾಡಲಾಗುವುದು. ಪಂದ್ಯ ಪುರುಷೋತ್ತಮ ಸ್ಥಾನಕ್ಕೂ ಆಕರ್ಷಕ ಪಾರಿತೋಷಕ ನೀಡಲಾಗುವುದು ಎಂದು ವಿವರಿಸಿದರು. ಹಾಕಿ ಮೈಸೂರು ಉಪಾಧ್ಯಕ್ಷ ಕೆ.ಎನ್.ಮುದ್ದಯ್ಯ, ಕಾರ್ಯದರ್ಶಿ ಸಿ.ಟಿ.ಸತೀಶ್ ಗೋಷ್ಠಿಯಲ್ಲಿದ್ದರು.

Translate »