ಸಮಿತಿ ಅವಲೋಕನ ನಂತರ ಸೂಕ್ತ ನಿರ್ಧಾರ
ಮೈಸೂರು

ಸಮಿತಿ ಅವಲೋಕನ ನಂತರ ಸೂಕ್ತ ನಿರ್ಧಾರ

September 19, 2021

ಮೈಸೂರು,ಸೆ.18(ಆರ್‍ಕೆ)- ಆಸ್ತಿ ತೆರಿಗೆ ಮತ್ತು ಉದ್ದಿಮೆ ರಹದಾರಿ ಶುಲ್ಕ ಪರಿ ಷ್ಕರಣೆ ಸಂಬಂಧ ಪಾಲಿಕೆ ಅಧಿಕಾರಿಗಳು ಹಾಗೂ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ನಾಲ್ವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಿ, ಅದರಲ್ಲಿ ಅವಲೋಕಿಸಿದ ನಂತರ ಸೂಕ್ತ ಕ್ರಮಕ್ಕೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.

ಮೈಸೂರು ಸಂಘ-ಸಂಸ್ಥೆಗಳ ಒಕ್ಕೂ ಟದ ಪದಾಧಿಕಾರಿಗಳೊಂದಿಗೆ ನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಸುನಂದಾ ಪಾಲನೇತ್ರ ಸಭೆ ನಡೆಸಿ, ಚರ್ಚಿ ಸಿದರು. ಈ ಸಂದರ್ಭ ಮಾತನಾಡಿದ ಒಕ್ಕೂಟದ ಉಪಾಧ್ಯಕ್ಷ ಸಿ.ನಾರಾಯಣ ಗೌಡ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳೆಂದು ಮಾತ್ರ ವಿಂಗಡಿಸಿದೆ. ಆದರೆ ಮೈಸೂರಲ್ಲಿ ಮಾತ್ರ ಕಮರ್ಷಿಯಲ್ ಮತ್ತು ಸೂಪರ್ ಕಮರ್ಷಿ ಯಲ್ ಎಂದು ವಿಂಗಡಿಸಿ ಹೆಚ್ಚು ತೆರಿಗೆ ವಿಧಿಸಿದ್ದು, ಇದರಿಂದ ತೊಂದರೆ ಅನು ಭವಿಸುವ ಚಿತ್ರಮಂದಿರ, ಹೋಟೆಲ್, ಕಲ್ಯಾಣ ಮಂಟಪಗಳನ್ನು ಸಾಮಾನ್ಯ ಆಸ್ತಿ ಎಂದು ಪರಿಗಣಿಸಬೇಕೆಂದು ಮನವಿ ಮಾಡಿದಾಗ ಹಿಂದಿನ ಆಯುಕ್ತರು ಸೂಪರ್ ಕಮರ್ಷಿ ಯಲ್ ಎಂದಿದ್ದ ಆಸ್ತಿಯನ್ನು ಕಮರ್ಷಿ ಯಲ್ ‘ಬಿ’ ಎಂದು ನಮೂದಿಸಿದ್ದರೂ ತೆರಿಗೆ ದರ ಮಾತ್ರ ಕಡಿಮೆಯಾಗಿಲ್ಲ ಎಂದರು.

ಸಿಆರ್ ಇಲ್ಲದ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಅದರ ಜೊತೆಗೆ ಸೂಪರ್ ಕಮರ್ಷಿಯಲ್ ಎಂದು ಅಧಿಕ ತೆರಿಗೆ ಹಾಕಿದಲ್ಲಿ ಕೋವಿಡ್‍ನಿಂದಾಗಿ ಈಗಾಗಲೇ ನೆಲ ಕಚ್ಚಿರುವ ಉದ್ಯಮಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ವಿನಯ್ ವೆಂಕ ಟೇಶ್ ಮಾತನಾಡಿ, ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ವಾಣಿಜ್ಯ ಕಟ್ಟಡಗಳಿಗೆ ಪ್ರಸ್ತುತ ಮೌಲ್ಯಕ್ಕನುಗುಣವಾಗಿ ತೆರಿಗೆ ನಿರ್ಧರಿಸು ವುದು ಅವೈಜ್ಞಾನಿಕ ಎಂದರೆ, ಪಾಲಿಕೆಯು ಪ್ರತೀ ಉದ್ಯಮಗಳಿಗೂ ಒಂದೊಂದು ರೀತಿಯ ತೆರಿಗೆ ವಿಧಿಸುವ ಬದಲು ‘ಕಮ ರ್ಷಿಯಲ್’ ಎಂದು ಒಂದೇ ವರ್ಗದಡಿ ಸಂಗ್ರಹಿಸಿದರೆ ನಮ್ಮ ಮೇಲೆ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಸಂಘ-ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಎಂ.ಆರ್.ರಾಜಾರಾಂ ತಿಳಿಸಿದರು.

ಎಲ್ಲಾ ಸಂಕಷ್ಟದ ಸಂದರ್ಭದಲ್ಲೂ ನಾವು ಪಾಲಿಕೆಗೆ ಹೆಗಲು ಕೊಟ್ಟು ನಿಂತಿದ್ದೇವೆ. ಆದರೆ ತೆರಿಗೆ ವಿಷಯದಲ್ಲಿ ಪಾಲಿಕೆ ನಮ್ಮ ಮೇಲೆ ಗದಾಪ್ರಹಾರ ನಡೆಸುವುದು ಸರಿ ಯಲ್ಲ ಎಂದು ಖಜಾಂಚಿ ಡಿ.ಶ್ರೀಹರಿ ಅಭಿ ಪ್ರಾಯಪಟ್ಟರು. ಎಲ್ಲರೊಂದಿಗೆ ಸುಮಾರು ಎರಡು ತಾಸು ಚರ್ಚಿಸಿದ ನಂತರ ಮಾತ ನಾಡಿದ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಎಸಿ, ಜನರೇಟರ್ ಹೊಂದಿರುವ ಉದ್ದಿಮೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿರುವ ಸಂಬಂಧ ಪಾಲಿಕೆಯಿಂದ ನಾಲ್ವರು ಅಧಿ ಕಾರಿಗಳು ಮತ್ತು ನಾಲ್ವರು ಉದ್ದಿಮೆದಾರರ ನ್ನೊಳಗೊಂಡಂತೆ ತಲಾ ಒಂದೊಂದು ಪ್ರತ್ಯೇಕ ಸಮಿತಿ ರಚಿಸಿ ಸಂಪೂರ್ಣ ಅವಲೋಕನ ನಡೆಸಿದ ನಂತರ ಪಾಲಿಕೆ ಕೌನ್ಸಿಲ್ ಸಭೆಗೆ ಪ್ರಸ್ತಾವನೆ ಮಂಡಿಸಲಾಗುವುದೆಂದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಶಿವಕುಮಾರ್, ಮೈಸೂರು ಟ್ರಾವೆಲ್ ಅಸೋಸಿಯೇಷನ್ನಿನ ಸಿಎ ಜಯಕುಮಾರ್, ಜವಳಿ ಮಾರಾಟಗಾರರ ಸಂಘದ ಆರ್.ಎನ್.ರಮೇಶ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್‍ನ ಎ.ಎಸ್. ಸತೀಶ್, ಡಿ.ದೇವರಾಜ ಅರಸು ರಸ್ತೆ ವ್ಯಾಪಾರಿ ಗಳ ಸಂಘದ ವೀರಭದ್ರಪ್ಪ, ಮಹೇಶ್ ಕಾಮತ್, ಅಶೋಕ್, ಮೊಬೈಲ್ ಅಂಗಡಿ ಮಾಲೀಕರ ಸಂಘದ ಎನ್.ಪಿ. ರಘು ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »