ಮಂಡ್ಯ ಜಿಲ್ಲೆಯ 413 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ
ಮಂಡ್ಯ

ಮಂಡ್ಯ ಜಿಲ್ಲೆಯ 413 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ

August 13, 2021

ಮಂಡ್ಯ, ಆ.12(ಮೋಹನ್‍ರಾಜ್)- ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಪಾಂಡವ ಪುರ ತಾಲೂಕುಗಳಿಗೆ ರೂ. 690.36 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಈಗಾಗಲೇ ಮಂಜೂರಾಗಿದ್ದು, ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ಈಗ ಇನ್ನುಳಿದ ನಾಲ್ಕು ತಾಲೂಕುಗಳ 413 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ಮಂಜೂರು ಮಾಡಿಸಲು ಸಚಿವ ಡಾ.ನಾರಾಯಣಗೌಡ ಸಫಲರಾಗಿದ್ದು, ಒಟ್ಟು ರೂ. 1091 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸರ್ಕಾರ ದಿಂದ ಅನುಮೋದನೆ ದೊರೆತಿದೆ. ಆ ಮೂಲಕ ಸಚಿವ ಡಾ.ನಾರಾಯಣಗೌಡ ಕೊಟ್ಟ ಭರವಸೆ ಈಡೇರಿದೆ.

ಮಂಡ್ಯ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸುವುದು ಸಚಿವ ಡಾ.ನಾರಾಯಣ ಗೌಡ ಅವರ ಕನಸಾಗಿತ್ತು. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ಕೊಟ್ಟ ಭರವಸೆಯಂತೆ ಈಗ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆ ತಿದೆ. ಕೇಂದ್ರ ಸರ್ಕಾರದÀ ಶೇ.50ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನದೊಂದಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆ ಈ ತಾಲೂಕು ಗಳಲ್ಲಿ ಸಾಕಾರಗೊಳ್ಳಲಿದೆ. ಜಲಧಾರೆ ಯೋಜನೆ ಯಡಿ ಎರಡು ತಿಂಗಳ ಹಿಂದೆ ಕೆ.ಆರ್. ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲೂ ಕಿನ 791 ಗ್ರಾಮಗಳಿಗೆ ರೂ. 690.36 ಕೋಟಿ ವೆಚ್ಚದಲ್ಲಿ ಯೋಜನೆಗೆ ಅನುಮೋದನೆ ನೀಡಿ ಟೆಂಡರ್ ಆಹ್ವಾನಿಸಲಾಗಿದೆ. ಮುಂದುವರಿದ ಭಾಗವಾಗಿ ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಾಲೂಕಿನ 413 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಕ್ರಿಯಾಯೋಜನೆಗೆ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುಮೋದನೆ ನೀಡಿದೆ.

ಜಿಲ್ಲೆಯ ಒಟ್ಟು 1204 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ: ಮೊದಲ ಹಂತದಲ್ಲಿ ರೂ. 690. 36 ಕೋಟಿ ವೆಚ್ಚದಲ್ಲಿ ಕೆ.ಆರ್. ಪೇಟೆ ತಾಲೂಕಿನ 310 ಗ್ರಾಮಗಳಿಗೆ, ನಾಗಮಂಗಲ ತಾಲೂಕಿನ 391 ಗ್ರಾಮಗಳು ಹಾಗೂ ಬಿ.ಜಿ. ನಗರ ಮತ್ತು ಬೆಳ್ಳೂರು ಪಟ್ಟಣ ಪಂಚಾಯತಿ, ಪಾಂಡವಪುರ ತಾಲೂಕಿನ 96 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯು ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಿತ್ತು. ಈಗ ಎರಡನೇ ಹಂತದಲ್ಲಿ ರೂ. 1091 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಮದ್ದೂರು ತಾಲೂಕಿನ 75 ಗ್ರಾಮಗಳಿಗೆ, ಮಳವಳ್ಳಿ ತಾಲೂಕಿನ 103 ಗ್ರಾಮಗಳು, ಶ್ರೀರಂಗ ಪಟ್ಟಣ ತಾಲೂಕಿನ 47 ಗ್ರಾಮಗಳು ಹಾಗೂ ಮಂಡ್ಯ ತಾಲೂಕಿನ 188 ಗ್ರಾಮಗಳು ಸೇರಿದಂತೆ ಒಟ್ಟು 413 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಒಟ್ಟಾರೆ ಎರಡೂ ಹಂತ ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ 1204 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ.

ಎರಡು ತಿಂಗಳಲ್ಲಿ ಟೆಂಡರ್ ಆಹ್ವಾನ, 2023ಕ್ಕೆ ಯೋಜನೆ ಪೂರ್ಣಗೊಳಿಸುವ ಗುರಿ: ಎರಡು ತಿಂಗಳೊಳಗಾಗಿ ಟೆಂಡರ್ ಆಹ್ವಾನಿಸಲಾಗುವುದು. ಟೆಂಡರ್ ಪ್ರಕ್ರಿಯೆ ಮುಗಿಸಿ, ತ್ವರಿತಗತಿಯಲ್ಲಿ ಕಾಮ ಗಾರಿ ಆರಂಭಿಸಿ, 2023ಕ್ಕೆ ಕಾಮಗಾರಿಯನ್ನು ಪೂರ್ಣ ಗೊಳಿಸುವ ಗುರಿಯನ್ನು ಹೊಂದಲಾಗಿದೆ. ಮೂರು ಸ್ಥಳಗಳಿಂದ ಯೋಜನೆಗೆ ಅಗತ್ಯವಿರುವ ನೀರನ್ನು ತರಲಾಗುತ್ತಿದೆ. ಶ್ರೀರಂಗಪಟ್ಟಣದ ವೆಸ್ಲಿ ಸೇತುವೆ, ಮಂಡ್ಯದ ಕೊಪ್ಪಲು ಹಾಗೂ ಮಳವಳ್ಳಿಯಲ್ಲಿ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ.

`ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಅಜೆಂಡಾ’. ಸಚಿವ ನಾರಾಯಣಗೌಡ ಸಂತಸ: ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ನಮ್ಮ ಸರ್ಕಾರ ಹಾಗೂ ಪಕ್ಷದ ಅಜೆಂಡಾ. ಕಾವೇರಿ ತಟದಲ್ಲಿರುವ ಮಂಡ್ಯ ಜಿಲ್ಲೆಯ ಜನರಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಈ ಕೊರತೆಯನ್ನು ನೀಗಿಸಿ, ಪ್ರತಿ ಮನೆಗೂ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದ್ದು, ಈಗ ಈಡೇರುತ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಗೆ ಇನ್ನಷ್ಟು ಯೋಜನೆಯನ್ನು ತರುವುದು ನನ್ನ ಗುರಿ. ಆ ದಿಶೆಯಲ್ಲಿ ನಿರಂತರ ಪ್ರಯತ್ನ ಮಾಡುತ್ತೇನೆ. ಪ್ರಸ್ತುತ ಶಾಶ್ವತ ಕುಡಿಯುವ ನೀರಿನ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದಕ್ಕೆ ಅತೀವ ಸಂತಸವಾಗಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

Translate »