ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪೊಲೀಸ್ ಜೀಪ್
ಮಂಡ್ಯ

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪೊಲೀಸ್ ಜೀಪ್

August 13, 2021

ಮಳವಳ್ಳಿ, ಆ.12(ಮೋಹನ್‍ರಾಜ್)- ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ನಿಲ್ಲಿಸದೇ ಪರಾರಿಯಾಗುತ್ತಿದ್ದ ಬಸ್‍ನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸರ ವಾಹನ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಗಾಯ ಗೊಂಡಿರುವ ಘಟನೆ ತಾಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ಬುಧ ವಾರ ತಡರಾತ್ರಿ ನಡೆದಿದೆ.

ಗ್ರಾಮಾಂತರ ಠಾಣೆಯ ಎಎಸ್‍ಐ ಹುಚ್ಚಯ್ಯ, ಚಾಲಕ ನಾಗಯ್ಯ ಗಾಯಗೊಂಡವರಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದ ಬಳಿ ಬುಧವಾರ ತಡರಾತ್ರಿ ಪಟ್ಟಣದ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಲಾರಿಯ ಹಿಂದೆ ಬರುತ್ತಿದ್ದ ಖಾಸಗಿ ಬಸ್‍ನ ಚಾಲಕ ತಮ್ಮನ್ನು ಸಹ ತಪಾಸಣೆಗೆ ಒಳಪಡಿಸಬಹುದು ಎಂದು ಭಾವಿಸಿ ತಪ್ಪಿಸಿಕೊಳ್ಳುವ ಭರದಲ್ಲಿ ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದೇ ವೇಳೆ ಜೀಪ್‍ನಲ್ಲಿದ್ದ ಸಿಬ್ಬಂದಿ ಶ್ರೀನಿವಾಸ್ ಎಂಬುವವರಿಗೆ ಗಾಯವಾಗಿದೆ ಎನ್ನಲಾಗಿದೆ.

ರಾತ್ರಿ ಗಸ್ತಿನಲ್ಲಿದ್ದ ಗ್ರಾಮಾಂತರ ಪೊಲೀಸರು ಖಾಸಗಿ ಬಸ್‍ನ್ನು ಬೆನ್ನಟ್ಟಿ ಹೋಗುತ್ತಿದ್ದಾಗ ಪಂಡಿತಹಳ್ಳಿ ಬಳಿ ಪೊಲೀಸರ ವಾಹನ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ.

ವಾಹನದಲ್ಲಿದ್ದ ಎಎಸ್‍ಐ ಹುಚ್ಚಯ್ಯ, ಚಾಲಕ ನಾಗಯ್ಯ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಬ್ಬ ಗಾಯಾಳು ಶ್ರೀನಿವಾಸ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಬಸ್‍ನ್ನು ರಸ್ತೆ ಬದಿಯಲ್ಲಿ ನಿಲ್ಲಸಿ ಚಾಲಕ ಪರಾರಿಯಾಗಿದ್ದಾನೆ. ಖಾಸಗಿ ಬಸ್‍ನನ್ನು ಕ್ಲೀನರ್ ಕಳ್ಳತನ ಮಾಡಿರಬಹು ದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಸ್‍ನ್ನು ವಶಕ್ಕೆ ಪಡೆದಿರುವ ಪೊಲೀಸರು ಬಸ್ ಚಾಲನೆ ಮಾಡಿಕೊಂಡು ಬಂದವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Translate »